ಪುರಾತನ ಶ್ರೀ ಸೋಮೇಶ್ವರ ದೇವಾಲಯ ಸೋಮಪುರ

ಪುರಾತನ ಶ್ರೀ ಸೋಮೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸೋಮಪುರ ಗ್ರಾಮದಲ್ಲಿರುವ, ಭದ್ರಾ ನದಿಯ ದಕ್ಷಿಣ ದಂಡೆಯಲ್ಲಿರುವ ಪುರಾತನ ದೇವಾಲಯವಾಗಿದೆ. ಇಲ್ಲಿ ಪ್ರಾಚೀನ ಸೋಮೇಶ್ವರ ದೇವಾಲಯವಿದ್ದು, ಪ್ರಸ್ತುತ ಇದನ್ನು ದತ್ತಾತ್ರೇಯ ದೇವಾಲಯವೆಂದು ಪೂಜಿಸಲಾಗುತ್ತಿದೆ.

ಸೋಮಪುರ ಸೋಮೇಶ್ವರ ದೇವಾಲಯದ ದೂರಗಳು

  • ಬೆಂಗಳೂರು – 255 ಕಿ.ಮೀ
  • ಚಿಕ್ಕಮಗಳೂರು – 75 ಕಿ.ಮೀ
  • ತರೀಕೆರೆ – 18 ಕಿ.ಮೀ
  • ತರೀಕೆರೆ ರೈಲ್ವೆ ನಿಲ್ದಾಣ – 17 ಕಿ.ಮೀ
  • ಶಿವಮೊಗ್ಗ ವಿಮಾನ ನಿಲ್ದಾಣ – 28 ಕಿ.ಮೀ

ಈ ದೇವಾಲಯದ ಸುತ್ತಲೂ ಪಾಳುಬಿದ್ದ ಪ್ರಾಕಾರವಿದ್ದು, ಪಶ್ಚಿಮಾಭಿಮುಖವಾಗಿರುವ ದೇವಾಲಯವು ಗರ್ಭಗೃಹ, ನವರಂಗ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದ ಮೇಲಿರುವ ಗೋಪುರವು ದ್ರಾವಿಡ–ನಾಗರ ಶೈಲಿಯಲ್ಲಿದೆ.
ದೇವಾಲಯದ ಪ್ರಾಕಾರವನ್ನು ಪ್ರವೇಶಿಸುತ್ತಿದ್ದಂತೆ, ದೇವಾಲಯದ ಹಿಂಭಾಗದಲ್ಲಿ ಅನೇಕ ಶಿಲಾಶಾಸನಗಳು, ವೀರಗಲ್ಲುಗಳು, ಗಣಪತಿ, ವೀರಭದ್ರ ಹಾಗೂ ಶಾಕ್ತ ವಿಗ್ರಹಗಳು ಕಾಣಸಿಗುತ್ತವೆ.

ದೇವಾಲಯದ ಗರ್ಭಗೃಹವು ಚಿಕ್ಕದಾಗಿದ್ದು, ಇಲ್ಲಿ ಪೀಠದ ಮೇಲೆ ಉದ್ದನೆಯ ಶಿವಲಿಂಗವಿದೆ. ಲಿಂಗದ ಮಧ್ಯಭಾಗದಲ್ಲಿ ದತ್ತಾತ್ರೇಯರ ಶಿಲ್ಪವಿದೆ. ಮೂಲ ವಿಗ್ರಹ ಕಳುವಾಗಿದ್ದು, ಅದರ ತದ್ರೂಪಿ ವಿಗ್ರಹವನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತದೆ. ಗರ್ಭಗೃಹದ ವಿತಾನವು (ಮೇಲ್ಛಾವಣಿ) ಚೌಕಾಕಾರದ ಕೋನಗಳಿಂದ ಕೂಡಿದೆ. ಇಲ್ಲಿನ ದ್ವಾರಬಾಗಿಲು ಸುಮಾರು ಐದು ಅಡಿ ಎತ್ತರವಿದ್ದು, ಶಾಖಪಟ್ಟಿಕೆಗಳಿಂದ ಅಲಂಕರಿಸಲಾಗಿದೆ. ಅಂತರಾಳದ ದ್ವಾರಬಾಗಿಲು ಸಹ ಪಟ್ಟಿಕೆಗಳಿಂದ ಅಲಂಕರಿಸಲ್ಪಟ್ಟಿದೆ.

ನವರಂಗದಲ್ಲಿ ನಾಲ್ಕು ಕಂಬಗಳ ಮಧ್ಯೆ ಸುಮಾರು ಐದು ಅಡಿ ಎತ್ತರದ ಚೌಕಾಕಾರದ ರಂಗಮಂಟಪವಿದೆ. ರಂಗಮಂಟಪದ ಮಧ್ಯದಲ್ಲಿ ನಂದಿ ವಿಗ್ರಹವಿದೆ. ಇಲ್ಲಿನ ಕಂಬಗಳ ಕೆಳಭಾಗವು ಚೌಕಾಕಾರವಾಗಿದ್ದು, ಮಧ್ಯಭಾಗವು ಅಷ್ಟಕೋನಾಕಾರದಲ್ಲಿದೆ. ಮೇಲ್ಭಾಗವು ಮತ್ತೆ ಚೌಕಾಕಾರದ ವಿನ್ಯಾಸವನ್ನು ಹೊಂದಿದೆ.

ನವರಂಗದಲ್ಲಿ ಗರ್ಭಗೃಹದ ದ್ವಾರದ ಬಲಭಾಗದಲ್ಲಿ ಗಣಪತಿ ಹಾಗೂ ಎಡಭಾಗದಲ್ಲಿ ಸುಬ್ರಹ್ಮಣ್ಯ ಮತ್ತು ನಾಗಶಿಲ್ಪಗಳ ವಿಗ್ರಹಗಳಿವೆ. ಸಭಾಮಂಟಪದ ವಿನ್ಯಾಸ ಹಾಗೂ ಅಲ್ಲಿನ ಕಂಬಗಳು ನಂತರದ ಕಾಲದಲ್ಲಿ ನಿರ್ಮಿಸಲ್ಪಟ್ಟವು ಎನ್ನಲಾಗುತ್ತದೆ. ಸಭಾಮಂಟಪವು ಕಣಶಿಲೆಯಿಂದ ನಿರ್ಮಿಸಲ್ಪಟ್ಟಿದ್ದು, ಇದರ ಮುಂಭಾಗದಲ್ಲಿ ಒಂದು ದ್ವಾರ ಹಾಗೂ ದಕ್ಷಿಣ ಭಾಗದಲ್ಲಿ ಮತ್ತೊಂದು ದ್ವಾರವಿದೆ. ಸಭಾಮಂಟಪದ ಇಕ್ಕೆಲಗಳಲ್ಲಿ ನಾಲ್ಕು ವಿಭಿನ್ನ ಶೈಲಿಯ ಕಂಬಗಳಿದ್ದು, ಅವುಗಳ ಮಧ್ಯದಲ್ಲಿ ಒಂದು ಜೋಡಿ ದುಂಡನೆಯ ಕಂಬಗಳಿವೆ. ಉಳಿದ ಕಂಬಗಳು ಚೌಕಾಕಾರ ಮತ್ತು ಅಷ್ಟಕೋನಾಕಾರದ ವಿನ್ಯಾಸವನ್ನು ಹೊಂದಿವೆ.
ಸಭಾಮಂಟಪದ ಉತ್ತರ ಭಾಗದಲ್ಲಿ ದಕ್ಷಿಣಾಭಿಮುಖವಾಗಿ ಎರಡು ದೇವಕೋಷ್ಠಗಳು ಇದ್ದು, ಒಂದರಲ್ಲಿ ಭೈರವ ಹಾಗೂ ಮತ್ತೊಂದರಲ್ಲಿ ವೀರಭದ್ರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.

ದೇವಾಲಯದ ಉತ್ತರ ಭಾಗದಲ್ಲಿ ನವರಂಗಕ್ಕೆ ಸಂಪರ್ಕಿಸುವ ದ್ವಾರಮಂಟಪವಿದೆ. ಎರಡು ಕಂಬಗಳ ಮಧ್ಯೆ ಕಕ್ಷಾಸನಗಳಿದ್ದು, ಮೆಟ್ಟಿಲುಗಳ ಎರಡೂ ಬದಿಗಳಲ್ಲಿ ಗಜಾಸನಗಳಿವೆ. ಮುಖ್ಯ ದೇವಾಲಯದ ಎಡಭಾಗದಲ್ಲಿ ಪಾರ್ವತಿ ದೇವಾಲಯವಿದೆ. ಈ ದೇವಾಲಯದ ಉಲ್ಲೇಖವಿರುವ ನಾಲ್ಕು ಶಿಲಾಶಾಸನಗಳು ಇಲ್ಲಿ ದೊರೆತಿವೆ.