ಪುರಾತನ ಶ್ರೀ ಯೋಗನರಸಿಂಹ ಸ್ವಾಮಿ ದೇವಾಲಯ ಬಗ್ಗವಳ್ಳಿ

ಬಗ್ಗವಳ್ಳಿಯ ಪುರಾತನ ಶ್ರೀ ಯೋಗನರಸಿಂಹ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಬಗ್ಗವಳ್ಳಿ ಗ್ರಾಮದಲ್ಲಿರುವ ಹೊಯ್ಸಳರ ಕಾಲದ ಪುರಾತನ ದೇವಾಲಯವಾಗಿದೆ. ಈ ದೇವಾಲಯವು ಯೋಗನರಸಿಂಹ ಸ್ವಾಮಿ ದೇವಾಲಯವೆಂದು ಜನಪ್ರಿಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1290ರಲ್ಲಿ ಹೊಯ್ಸಳ ದೊರೆ ಸೋಮೇಶ್ವರನ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

ಬಗ್ಗವಳ್ಳಿ ಪುರಾತನ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದ ದೂರಗಳು

  • ಬೆಂಗಳೂರು – 220 ಕಿ.ಮೀ
  • ಚಿಕ್ಕಮಗಳೂರು – 57 ಕಿ.ಮೀ
  • ತರೀಕೆರೆ – 20 ಕಿ.ಮೀ
  • ಬೀರೂರು – 13 ಕಿ.ಮೀ
  • ಬೀರೂರು ರೈಲ್ವೆ ನಿಲ್ದಾಣ – 13 ಕಿ.ಮೀ
  • ಶಿವಮೊಗ್ಗ ವಿಮಾನ ನಿಲ್ದಾಣ – 53 ಕಿ.ಮೀ

ಇದು ಹೊಯ್ಸಳರ ಕಾಲದ ರಚನೆಯಾಗಿದೆ. ದೇವಾಲಯವು ನಕ್ಷತ್ರಾಕಾರದ ವೇದಿಕೆಯ ಮೇಲೆ ನಿರ್ಮಾಣಗೊಂಡಿದ್ದು, ಗರ್ಭಗೃಹ, ಸುಕನಾಸಿ ಮತ್ತು ನವರಂಗವನ್ನು ಒಳಗೊಂಡಿದೆ. ಇಲ್ಲಿ ಉತ್ತಮವಾಗಿ ಕೆತ್ತಲಾದ ಅಲಂಕಾರಿಕ ಕಂಬಗಳು ಮತ್ತು ಬಾಗಿಲುವಾಡಗಳು ಆಕರ್ಷಕವಾಗಿವೆ.

ಈ ದೇವಾಲಯದ ಗರ್ಭಗುಡಿಯಲ್ಲಿ 1.52 ಮೀಟರ್ ಎತ್ತರದ ಕೇಶವನ ವಿಗ್ರಹವಿದೆ. ಸರಳವಾದ ನಕ್ಷತ್ರಾಕಾರದ ವಿನ್ಯಾಸವನ್ನು ಹೊಂದಿರುವ ಕೆಲವು ದೇವಾಲಯಗಳ ಪೈಕಿ ಇದೂ ಒಂದಾಗಿದೆ. ಇಲ್ಲಿನ ಲಕ್ಷ್ಮೀ ದೇವಿಯ ಗುಡಿಯು ಸರಳವಾದ ಚೌಕಾಕಾರದ ರಚನೆಯನ್ನು ಹೊಂದಿದೆ.

ಇದರ ಸಮೀಪದಲ್ಲಿಯೇ ಇದೇ ರೀತಿಯ ರಚನೆಯಲ್ಲಿ ಯೋಗನರಸಿಂಹನ ಶಿಲ್ಪ ಕಂಡುಬರುತ್ತದೆ. ಜೊತೆಗೆ ಷಣ್ಮುಖ, ಗಣೇಶ ಮತ್ತು ಲಕ್ಷ್ಮೀನಾರಾಯಣನ ಮೂರ್ತಿಗಳೂ ಕಂಡುಬರುತ್ತವೆ.

ಈ ಗ್ರಾಮದಲ್ಲಿ ರೇಣುಕಾಂಬ ದೇವಿಗೆ ಅರ್ಪಿತವಾದ ಮತ್ತೊಂದು ದೇವಾಲಯವಿದ್ದು, ಇದರ ವಾರ್ಷಿಕ ಜಾತ್ರೆಯು ಪ್ರತಿ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ಈ ದೇವಾಲಯದಲ್ಲಿ ಐದು ಶಾಸನಗಳು ಕಂಡುಬರುತ್ತವೆ.