ಪಂಚಮಿಕಲ್ಲು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕಲ್ಲುಗುಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗುಂದ ಗ್ರಾಮದ ಸಮೀಪದಲ್ಲಿರುವ ಪ್ರಸಿದ್ಧ ಸ್ಥಳವಾಗಿದೆ. ಈ ಸ್ಥಳವು ಜೈನ ಮುನಿಗಳು ತಪಸ್ಸು ಮಾಡಿದ ಪವಿತ್ರ ತಾಣವಾಗಿದ್ದು, ಭಕ್ತರಿಗೆ ಪ್ರಸಿದ್ಧವಾದ ಪ್ರಾಚೀನ ಯಾತ್ರಾ ಸ್ಥಳವಾಗಿದೆ.
ಮೇಗುಂದ ಪಂಚಮಿಕಲ್ಲಿನ ದೂರಗಳು
- ಬೆಂಗಳೂರು – 307 ಕಿ.ಮೀ
- ಚಿಕ್ಕಮಗಳೂರು – 80 ಕಿ.ಮೀ
- ಕೊಪ್ಪ – 35 ಕಿ.ಮೀ
- ಕಳಸ – 26 ಕಿ.ಮೀ

ಸ್ಥಳ ಪುರಾಣ
ಶಾಸನಗಳಲ್ಲಿ “ಮೇಗುಂದದ ಲಲಿತಪುರ” ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಪ್ರಾಚೀನ ಶಾಂತಿನಾಥ ಸ್ವಾಮಿ ಬಸದಿಯಿದೆ. ಪ್ರತಿವರ್ಷ ಕಾರ್ತಿಕ ಮಾಸದ ಪಂಚಮಿಯಂದು ಶಾಂತಿನಾಥ ಸ್ವಾಮಿಯ ಮತ್ತು ಪದ್ಮಾವತಿ ಅಮ್ಮನವರ ಉತ್ಸವಮೂರ್ತಿಯನ್ನು ಈ ಸ್ಥಳಕ್ಕೆ ಮೆರವಣಿಗೆಯಲ್ಲಿ ಹೊತ್ತುಕೊಂಡು ಹೋಗಿ ವಿಶೇಷ ಪೂಜಾದಿಗಳನ್ನು ನಡೆಸುವುದರಿಂದ ಈ ಕ್ಷೇತ್ರವು ಪಂಚಮಿಕಲ್ಲು ಎಂದು ಪ್ರಸಿದ್ಧಿಯಾಯಿತು.
ಐತಿಹ್ಯ
12ನೇ ಶತಮಾನದಿಂದ 17ನೇ ಶತಮಾನದವರೆಗೆ ಕಳಸ-ಕಾರ್ಕಳ ಭೈರವರಸರು ಹಾಗೂ ಬಗ್ಗುಂಜಿ ರಾಣಿ ಕಾಳಲದೇವಿಯ ಆಡಳಿತಕ್ಕೆ ಒಳಪಟ್ಟಿದ್ದ ಈ ಸ್ಥಳವು, ಜೈನ ಮುನಿಗಳಾದ ದೇವಚಂದ್ರ ಭಟ್ಟಾರಕ ಹಾಗೂ ಇತರ ಜಿನಮುನಿಗಳು ಸಲ್ಲೇಖನ ವ್ರತದ ಮೂಲಕ ದೇಹತ್ಯಾಗ ಮಾಡಿದ ಪರಮ ಪಾವನ ಭೂಮಿಯಾಗಿದೆ. ಇಲ್ಲಿ ಆರು ಜಿನಮುನಿಗಳ ಸಮಾಧಿಗಳಿದ್ದು, ಅವುಗಳಲ್ಲಿ ಎರಡು ಕಲ್ಲಿನ ಕೂಟಗಳಲ್ಲಿ ಇಬ್ಬರು ಜಿನಮುನಿಗಳ ಚರಣಪಾದಗಳನ್ನು ಕಾಣಬಹುದು.
ಪಂಚಮಿಕಲ್ಲಿನ ಬಂಡೆಯ ಮೇಲೆ ಅನೇಕ ಚಿಕ್ಕ ಶಾಸನಗಳು ಕೆತ್ತಲ್ಪಟ್ಟಿದ್ದು, ಅವುಗಳಲ್ಲಿ ಹೆಚ್ಚಿನವು ಕಾಲಕ್ರಮೇಣ ಸವೆದುಹೋಗಿವೆ. ಜೈನ ಮುನಿಗಳಿಗಾಗಿ ಶ್ರೀ ಬೊಮ್ಮಣ ಸೆಟ್ಟಿಯ ಮಗನು ಇಲ್ಲಿ ಪುಷ್ಕರಣಿಯನ್ನು ನಿರ್ಮಿಸಿದ ಬಗ್ಗೆ ಉಲ್ಲೇಖಿಸುವ ಶಾಸನವೂ ಇದೆ.
ಇದಲ್ಲದೆ, ಪ್ರಾಚೀನ ಕಾಲದಲ್ಲಿ ಕೆಲಸದಾಳುಗಳ ಲೆಕ್ಕದ ವಿವರಗಳನ್ನು ಸೂಚಿಸುವ ಗೆರೆಗಳು ಹಾಗೂ ಬಿಡುವಿನ ಸಮಯದಲ್ಲಿ ಆಡುತ್ತಿದ್ದ ಪಗಡೆ ಆಟದ ವಿನ್ಯಾಸವನ್ನೂ ಬಂಡೆಯ ಮೇಲೆ ಕೆತ್ತಲಾಗಿದೆ. ಬಂಡೆಯ ಕೆಳಭಾಗದಲ್ಲಿ ಪವಿತ್ರವೆಂದು ಪರಿಗಣಿಸಲಾದ ಒಂದು ಗುಹೆಯಿದ್ದು, ಇಲ್ಲಿ ಶ್ರಾವಕ-ಶ್ರಾವಕಿಯರು ಬಿಸಿಲು, ಮಳೆ ಮತ್ತು ಗಾಳಿಯಿಂದ ರಕ್ಷಣೆ ಪಡೆಯುತ್ತಿದ್ದರು ಎಂಬ ಪ್ರತೀತಿಯಿದೆ.
ಈ ಪ್ರದೇಶವು ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಆಡಳಿತ ಮತ್ತು ನಿರ್ವಹಣೆಯ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿಂದ ಸುಮಾರು 2 ಕಿ.ಮೀ. ದೂರದಲ್ಲಿ ಪ್ರಾಚೀನ ಶ್ರೀ 1008 ಭಗವಾನ್ ಶಾಂತಿನಾಥ ದಿಗಂಬರ ಜೈನ ದೇವಾಲಯವಿದೆ.



