ಗೋಣಿಬೀಡು ಶ್ರೀ ಆದಿ ಸುಬ್ರಹ್ಮಣ್ಯ ದೇವಾಲಯ

ಗೋಣಿಬೀಡು ಶ್ರೀ ಆದಿ ಸುಬ್ರಹ್ಮಣ್ಯ ದೇವಾಲಯವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ವ್ಯಾಪ್ತಿಯ ಜಿ. ಅಗ್ರಹಾರ ಗ್ರಾಮದಲ್ಲಿರುವ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವುಳ್ಳ ಪವಿತ್ರ ಕ್ಷೇತ್ರವಾಗಿದೆ. ಇದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕಿಂತಲೂ ಪುರಾತನವಾದ ಕ್ಷೇತ್ರವಾಗಿದೆ ಎಂದು ಸ್ಥಳೀಯವಾಗಿ ನಂಬಲಾಗುತ್ತದೆ. ದೇವಾಲಯವು ಹೇಮಾವತಿ ನದಿಯ ದಡದಲ್ಲಿದೆ.

ಗೋಣಿಬೀಡು ಶ್ರೀ ಆದಿ ಸುಬ್ರಹ್ಮಣ್ಯ ದೇವಾಲಯದ ದೂರಗಳು

  • ಬೆಂಗಳೂರು – 234 ಕಿ.ಮೀ
  • ಚಿಕ್ಕಮಗಳೂರು – 37 ಕಿ.ಮೀ
  • ಮೂಡಿಗೆರೆ– 15 ಕಿ.ಮೀ
  • ಸಕಲೇಶಪುರ ರೈಲ್ವೆ ನಿಲ್ದಾಣ – 29 ಕಿ.ಮೀ

ಇತಿಹಾಸ

ಹಿಂದೆ ಹೇಮಾವತಿ ನದಿಯ ತೀರದಲ್ಲಿರುವ ಈ ಪ್ರದೇಶದಲ್ಲಿ ಗೋಣಸುರ ಎಂಬ ರಾಕ್ಷಸನು ವಾಸಿಸುತ್ತಿದ್ದನೆಂದು ಪುರಾಣದ ಕಥೆ ಹೇಳುತ್ತದೆ. ಆತನು ದೇವರನ್ನು ಕುರಿತು ತಪಸ್ಸು ಮಾಡಿ, ಅನೇಕ ಪ್ರಾಣಿಗಳಿಂದ ತನಗೆ ಸಾವು ಬರದಂತೆ ವರವನ್ನು ಪಡೆದಿದ್ದನು. ವರದ ಪ್ರಭಾವದಿಂದ ಅಹಂಕಾರದಿಂದ ಮೆರೆದ ಗೋಣಸುರನು ಜನರಿಗೆ ಉಪಟಳ ನೀಡತೊಡಗಿದನು. ಇದರಿಂದ ಸಂಕಷ್ಟಕ್ಕೊಳಗಾದ ಜನರು ಸುಬ್ರಹ್ಮಣ್ಯ ಸ್ವಾಮಿಯ ಮೊರೆ ಹೋದರು.

ಗೋಣಸುರನು ವರವನ್ನು ಪಡೆಯುವ ಸಂದರ್ಭದಲ್ಲಿ ಅನೇಕ ಪ್ರಾಣಿಗಳ ಹೆಸರುಗಳನ್ನು ಉಲ್ಲೇಖಿಸಿ, ಅವುಗಳಿಂದ ತನಗೆ ಸಾವು ಬರದಂತೆ ವರ ಪಡೆದಿದ್ದನು. ಆದರೆ ಹಾವಿನ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಆದ್ದರಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಹಾವಿನ ರೂಪದಲ್ಲಿ ಗೋಣಸುರನನ್ನು ಇದೇ ಪ್ರದೇಶದಲ್ಲಿ ಸಂಹರಿಸಿದನೆಂದು ಪುರಾಣದಲ್ಲಿ ಹೇಳಲಾಗಿದೆ.

ಮುಂದೆ, 14ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ-ಬುಕ್ಕರು ತಮ್ಮ ಸಾಮ್ರಾಜ್ಯದ ವಿಸ್ತರಣೆಯ ಸಂದರ್ಭದಲ್ಲಿ ಧಾರ್ಮಿಕ ಯಾತ್ರೆಯನ್ನು ಕೈಗೊಂಡಿದ್ದರು. ಮಲೆನಾಡಿನ ಅನೇಕ ಪ್ರದೇಶಗಳನ್ನು ಸುತ್ತಾಡಿ ದಣಿದ ಅವರು ಗೋಣಿಬೀಡಿನ ಹೇಮಾವತಿ ನದಿಯ ತೀರದಲ್ಲಿ ವಿಶ್ರಾಂತಿ ಪಡೆದರು.

ಆ ಸಂದರ್ಭದಲ್ಲಿ ಅವರಿಗೆ ಕನಸಿನಲ್ಲಿ ಒಬ್ಬ ಬ್ರಾಹ್ಮಣನು ಕಾಣಿಸಿಕೊಂಡು, ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿಯು ಗೋಣಸುರ ರಾಕ್ಷಸನನ್ನು ಸಂಹರಿಸಿದ ಕಥೆಯನ್ನು ತಿಳಿಸಿದನೆಂದು ಹೇಳಲಾಗುತ್ತದೆ. ಅಲ್ಲದೆ, ಮರುದಿನ ಬೆಳಗ್ಗೆ ಹೇಮಾವತಿ ನದಿಯಲ್ಲಿ ಸ್ನಾನ ಮಾಡುವಾಗ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹವು ದೊರೆಯುತ್ತದೆ; ಅದನ್ನು ಈ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸುವಂತೆ ಬ್ರಾಹ್ಮಣನು ಕನಸಿನಲ್ಲಿ ಸೂಚಿಸಿದನೆಂದು ನಂಬಲಾಗಿದೆ.

ಕನಸಿನಲ್ಲಿ ಬ್ರಾಹ್ಮಣನು ತಿಳಿಸಿದಂತೆ, ಮರುದಿನ ಬೆಳಗ್ಗೆ ಹಕ್ಕ-ಬುಕ್ಕರು ಹೇಮಾವತಿ ನದಿಯಲ್ಲಿ ಸ್ನಾನ ಮಾಡುವಾಗ ಏಳು ಹೆಡೆಗಳ ನಾಗರ ಮೂರ್ತಿಯೊಂದು ದೊರೆಯಿತು. ನಂತರ ಹಕ್ಕ-ಬುಕ್ಕರು ಆ ಮೂರ್ತಿಯನ್ನು ಈ ಕ್ಷೇತ್ರದಲ್ಲಿ ವಿಧಿವತ್ತಾಗಿ ಪ್ರತಿಷ್ಠಾಪಿಸಿದರು ಎಂದು ಸ್ಥಳೀಯ ಪುರಾಣಕಥೆ ತಿಳಿಸುತ್ತದೆ.