ಶ್ರೀ ಯೋಗನರಸಿಂಹ ದೇವಸ್ಥಾನವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ನರಸೀಪುರ ಗ್ರಾಮದಲ್ಲಿ ಇದೆ. ಈ ದೇವಾಲಯವು 13ನೇ ಶತಮಾನದ ಹೊಯ್ಸಳ ದೇವಾಲಯವಾಗಿದ್ದು, ಕ್ರಿ.ಶ. 1280ರಲ್ಲಿ ಹೊಯ್ಸಳ ರಾಜ ವೀರ ನರಸಿಂಹ ಬಲ್ಲಾಳನ ಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ.
ಶ್ರೀ ಯೋಗನರಸಿಂಹ ದೇವಸ್ಥಾನ ನರಸೀಪುರ ದೂರಗಳು
- ಬೆಂಗಳೂರು – 210 ಕಿ.ಮೀ
- ಹಾಸನ – 34 ಕಿ.ಮೀ
- ಬೇಲೂರು – 16 ಕಿ.ಮೀ
- ಹಳೇಬೀಡು – 3 ಕಿ.ಮೀ
- ಚಿಕ್ಕಮಗಳೂರು ರೈಲ್ವೆ ನಿಲ್ದಾಣ – 32 ಕಿ.ಮೀ
- ಹಾಸನ ರೈಲ್ವೆ ನಿಲ್ದಾಣ – 35 ಕಿ.ಮೀ
ಇಲ್ಲಿ ಹೊಯ್ಸಳರ ಕಾಲದ ತ್ರಿಕೂಟಾಚಲ ದೇವಾಲಯವಿದ್ದು, ಈಗ ಮುಖ್ಯ ಗರ್ಭಗುಡಿಯಲ್ಲಿ ಮಾತ್ರ ಯೋಗಮುದ್ರೆಯಲ್ಲಿರುವ ಯೋಗನರಸಿಂಹ ವಿಗ್ರಹ ಪ್ರತಿಷ್ಠಾಪಿತವಾಗಿದೆ. ಬಲಭಾಗದ ಗರ್ಭಗುಡಿಯಲ್ಲಿದ್ದ ಲಕ್ಷ್ಮೀನಾರಾಯಣ ವಿಗ್ರಹ ಭಿನ್ನವಾಗಿ ಕಾಣುತ್ತದೆ ಮತ್ತು ಎಡಗಡೆಯ ಗರ್ಭಗುಡಿಯಲ್ಲಿದ್ದ ವಿಗ್ರಹ ಕಳುವಾಗಿದೆ ಎಂದು ತಿಳಿದುಬಂದಿದೆ. ಯೋಗನರಸಿಂಹನ ವಿಗ್ರಹವು ಸುಮಾರು 8 ಅಡಿ ಎತ್ತರವಿದ್ದು ಅತ್ಯಂತ ಮನೋಹರವಾಗಿದೆ. ವಿಗ್ರಹದ ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆಗಳು ಮತ್ತು ಪೀಠದಲ್ಲಿ ಗರುಡನ ಶಿಲ್ಪವಿದೆ. ದೇವಾಲಯದ ಹೊರಭಿತ್ತಿಗಳಲ್ಲಿ ಕಿರು ಶಿಲ್ಪಗಳು ಕೆತ್ತಲಾಗಿದ್ದು ಅವು ಅಲಂಕೃತವಾಗಿ ಕಾಣಿಸುತ್ತವೆ.
ಈ ದೇವಾಲಯದ ಒಂದು ವಿಶೇಷ ಅಂಶವೆಂದರೆ—ಆ ಕಾಲದಲ್ಲಿ ದೊಡ್ಡ ತಿರುಪತಿಗೆ ಪ್ರತಿದಿನ ಲಾಡು ತಯಾರಿಸಲು ಹಣ ಕಳುಹಿಸುತ್ತಿದ್ದರು ಎಂಬುದಕ್ಕೆ ಇಲ್ಲಿ ದೊರೆತಿರುವ ಶಿಲಾಶಾಸನ ಸಾಕ್ಷಿಯಾಗಿದೆ.
ಭೇಟಿ ನೀಡಿ


