ಶ್ರೀ ಹರಳಯ್ಯ ಶರಣರ ಗವಿಯು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಇದೆ. ಈ ಪವಿತ್ರ ಸ್ಥಳವು ಶರಣ ಸಂಪ್ರದಾಯದ ಮಹಾನ್ ಶರಣರಾದ ಶ್ರೀ ಹರಳಯ್ಯರಿಗೆ ಸಮರ್ಪಿತವಾಗಿದೆ.
ಈ ಸ್ಥಳವು ಬೆಂಗಳೂರಿನಿಂದ 715 ಕಿ.ಮೀ (NH50 ಮೂಲಕ), 730 ಕಿ.ಮೀ (NH44 – ಹೈದರಾಬಾದ್ ಮೂಲಕ), ಬೀದರ್‌ನಿಂದ 80 ಕಿ.ಮೀ ಹಾಗೂ ಬಸವಕಲ್ಯಾಣದಿಂದ 2 ಕಿ.ಮೀ ದೂರದಲ್ಲಿದೆ.
ಹರಳಯ್ಯನವರ ಬಗ್ಗೆ ಇತಿಹಾಸ
ಹರಳಯ್ಯನವರು 12ನೇ ಶತಮಾನದ ಶಿವಶರಣರು. ಇವರು ಬಸವಣ್ಣನವರ ಸಮಕಾಲೀನ ಶಿವಶರಣರಾಗಿದ್ದು, ಪಾದರಕ್ಷೆಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ನಿರತನಾಗಿದ್ದರು. ಗುರು–ಲಿಂಗ–ಜಂಗಮ ಸೇವೆಯಲ್ಲಿ ತನು, ಮನ, ಧನಗಳನ್ನು ಸಮರ್ಪಿಸಿದ ಶರಣರು. ಒಮ್ಮೆ ಬಸವಣ್ಣನವರನ್ನು ಮಾರ್ಗಮಧ್ಯದಲ್ಲಿ ಭೇಟಿಯಾದಾಗ, ಹರಳಯ್ಯನು ‘ಶರಣು ಬಸವರಸ’ ಎಂದು ತಲೆಬಾಗಿ ವಂದಿಸಿದರು. ಅದಕ್ಕೆ ಪ್ರತಿಯಾಗಿ ಬಸವಣ್ಣರು ‘ಶರಣು, ಶರಣಾರ್ಥಿ ಹರಳಯ್ಯ ತಂದೆ’ ಎಂದು ವಂದಿಸಿದರು. ತಾನು ನೀಡಿದ ಒಂದು ಶರಣಾರ್ಥಿಗೆ ಬಸವಣ್ಣರು ಎರಡು ಶರಣಾರ್ಥಿ ತಿಳಿಸಿದ್ದಾರೆ ಎಂಬ ಭಾವನೆ ಹರಳಯ್ಯನ ಮನದಲ್ಲಿ ಮೂಡಿತು.
ಈ ವಿಚಾರವನ್ನು ಪತ್ನಿಯೊಡನೆ ಚರ್ಚಿಸಿದರೂ ಪರಿಹಾರ ಸಿಗಲಿಲ್ಲ. ಕೊನೆಗೆ ತಮ್ಮಿಬ್ಬರ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ತಯಾರಿಸಿ, ಬಸವಣ್ಣನವರ ಪಾದಗಳಿಗೆ ತೊಡಿಸುವ ಮೂಲಕ ತಮ್ಮ ಹೊರೆ ಹಗುರ ಮಾಡಿಕೊಳ್ಳಲು ನಿರ್ಧರಿಸಿದರು. ಅದರಂತೆ ಸುಂದರವಾದ ಒಂದು ಜೋಡಿ ಪಾದರಕ್ಷೆಗಳನ್ನು ತಯಾರಿಸಿ ಬಸವಣ್ಣನವರಿಗೆ ಕೊಟ್ಟರು. ಬಸವಣ್ಣರು ಅವುಗಳ ಶ್ರೇಷ್ಠತೆಯನ್ನು ಹೊಗಳಿ, ಆ ಪಾದರಕ್ಷೆಗಳನ್ನು ಹರಳಯ್ಯ ದಂಪತಿಗಳಿಗೆ ಹಿಂತಿರುಗಿಸಿದರೆಂದು ಬಸವಪುರಾಣ, ಭೈರವೇಶ್ವರ ಕಾವ್ಯ, ಕಥಾಮಣಿಸೂತ್ರರತ್ನಾಕರ ಮತ್ತು ಶರಣ ಲೀಲಾಮೃತ ಗ್ರಂಥಗಳಿಂದ ತಿಳಿದುಬರುತ್ತದೆ.
ಭೇಟಿ ನೀಡಿ





