ಕಾಗಿನೆಲೆ ಕನಕದಾಸ ಗದ್ದುಗೆ

ಕಾಗಿನೆಲೆಯು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಕಾಗಿನೆಲೆ ಗ್ರಾಮ ಇದ್ದು , ಇದು ಕನಕದಾಸರ ಆರಾಧ್ಯದೈವ ಆದಿಕೇಶವನ ನೆಲೆಬೀಡು. ಕಾಗಿನೆಲೆಯಲ್ಲಿ ಕನಕದಾಸರ ಗುರು ಪೀಠವು ಕರ್ನಾಟಕ ರಾಜ್ಯದಲ್ಲಿ ಕುರುಬ ಗೌಡರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಸ್ಥಾಪಿಸಲ್ಪಟ್ಟಿದೆ. ಕನಕ ದಾಸರ ಸಮಾಧಿಯ ಮೇಲೆ 1842 ರಲ್ಲಿ ಕನಕದಾಸರ ದೇಗುಲವನ್ನು ನಿರ್ಮಿಸಿದೆ. ಅದರಲ್ಲಿ ಕನಕದಾಸರು ತಂಬೂರ ಹಿಡಿದಿರುವ ಪ್ರತಿಮೆ ಇದೆ. ಅವರು ಬಳಸುತ್ತಿದ್ದ ಶಂಖ ಮತ್ತು ಭಿಕ್ಷಾಪಾತ್ರೆಯನ್ನು ಸಹ ನಿರ್ಮಿಸಲಾಗಿದೆ.

ಕನಕದಾಸರು ಬಾಡ ಗ್ರಾಮದಲ್ಲಿ ಕನ್ನಡ ಕುಟುಂಬದಲ್ಲಿ ತಂದೆ ಬೀರಪ್ಪ ಮತ್ತು ತಾಯಿ ಬಚ್ಚಮ್ಮ ಎಂಬ ದಂಪತಿಗಳಿಂದ ಜನಿಸಿದರು, ಕನಕ ದಾಸರ ಕಾಲವಾದಿ (30 November 1508-1606).ಇವರನ್ನು ಮೊದಲು ತಿಮ್ಮಪ್ಪ ನಾಯಕ ಎಂದು ಕರೆಯಲಾಗುತ್ತಿತ್ತು.

ಕಾಗಿನೆಲೆ ಕನಕದಾಸ ಗದುಗ್ಗೆಯು ಬೆಂಗಳೂರಿನಿಂದ ಸುಮಾರು 337 ಕಿ.ಮೀ ಮತ್ತು ಹುಬ್ಬಳಿಯಿಂದ 91 ಕಿ.ಮೀ ದೂರದಲ್ಲಿದೆ. ಹಾಗೂ ಹಾವೇರಿ ನಗರದಿಂದ 18 ಕಿ.ಮೀ ಮತ್ತು ಹಾವೇರಿ ನಗರ ರೈಲ್ವೆ ನಿಲ್ದಾಣದಿಂದ 20 ಕಿ.ಮೀ ದೂರದಲ್ಲಿದೆ.

ಕಾಗಿನೆಲೆಯು ಹಿಂದೆ ಒಂದು ಪ್ರಾಂತ್ಯವಾಗಿ ಅನೇಕ ಗ್ರಾಮಗಳನ್ನು ಒಳಗೊಂಡಿತ್ತು. ಈ ಪ್ರಾಂತ್ಯದಲ್ಲಿ 10 ಪುರಾತನ ದೇವಾಲಯಗಳೂ ಹಾಗೂ ಸುಮಾರು 15 ಶಿಲಾಶಾಸನಗಳೂ ಇವೆ. ಒಮ್ಮೆಈ ಪ್ರಾಂತ್ಯವು ಬನವಾಸಿಯ ಕದಂಬರ ಆಧಿಪತ್ಯಕ್ಕೆ ಒಳಪಟ್ಟಿತ್ತು. ಬನವಾಸಿಯು ಚಾಳುಕ್ಯರ ಕೈಗೆ ಬಂದಾಗ ಇದೂ ಚಾಳುಕ್ಯರ ಆಡಳಿತಕ್ಕೊಳಪಟ್ಟಿತು. ಕೆಲಕಾಲ ಇದು ದೇವಗಿರಿಯ ಯಾದವರ ಆಡಳಿತದಲ್ಲಿದ್ದುದೂ ಉಂಟು. ಚಾಳುಕ್ಯರ ಭುವನೈಕಮಲ್ಲ ದತ್ತಿ-ದಾನಗಳನ್ನು ಕೊಟ್ಟಿರುವುದರ ಬಗ್ಗೆ ಆಧಾರಗಳಿವೆ. ದೇವಗಿರಿಯ ಯಾದವರು ಬೆಟ್ಟೇಶ್ವರ ಮತ್ತು ಕಾಳಹಸ್ತೀಶ್ವರ ದೇವಾಲಯಗಳಿಗೆ ದಾನ ಕೊಟ್ಟಿರುವರು.

14ನೆಯ ಶತಮಾನದಲ್ಲಿ ಬಹಮನೀ ಸುಲ್ತಾನರು ವಿಜಯನಗರದ ದೊರೆ ಬುಕ್ಕನಿಂದ ಇದನ್ನು ವಶಪಡಿಸಿಕೊಂಡರು. ಅನಂತರ ಮತ್ತೆ ಇದು ವಿಜಯನಗರದಲ್ಲೇ ಇದ್ದು ಒಂದು ಪ್ರತ್ಯೇಕ ಪ್ರಾಂತ್ಯವಾಗಿ ಇತ್ತು. ಈ ಕಾಲದಲ್ಲಿ ಕನಕ ಇದರ ದಂಡ ನಾಯಕ ನಾಗಿ ವಿಜಯನಗರದ ಮಾಂಡಲೀಕನಾಗಿದ್ದ. ವಿಜಾಪುರದ ಸುಲ್ತಾನ ಇದನ್ನು ಜಯಿಸಿ ಆಗ ಪ್ರಾಂತ್ಯವಾಗಿದ್ದ ಬಂಕಾಪುರಕ್ಕೆ ಸೇರಿಸಿದನೆಂದು ಹೇಳಲಾಗಿದೆ. ವಿಜಾಪುರದ ದಂಡನಾಯಕನಾಗಿದ್ದ ಮುಸ್ತಫಾಖಾನನ ದಾಳಿಯಿಂದ ಇಲ್ಲಿಯ ಕೋಟೆಕೊತ್ತಳಗಳು ನಾಶವಾಗಿರಬೇಕು. ಮುಂದೆ ಇದು ಸವಣೂರ ನವಾಬರ, ಅನಂತರ ಮೊಗಲರ, ವಿಜಾಪುರದ ಸುಲ್ತಾನರ, ಮರಾಠರ ಮತ್ತು ಬ್ರಿಟೀಷರ ನಾಶಕ್ಕೊಳಪಟ್ಟಿತ್ತು.

ಮಲೆನಾಡಿನ ಅಂಚಿನಲ್ಲಿರುವ ಇದು ತನ್ನ ಪ್ರಕೃತಿ ಸೌಂದರ್ಯದಿಂದ ಅನೇಕರನ್ನು ಆಕರ್ಷಿಸಿದೆ. ಆಂಡಯ್ಯ ಮತ್ತು ಕನಕದಾಸರು ಇಲ್ಲಿಯ ಪ್ರಕೃತಿ ಸೌಂದರ್ಯವನ್ನು ಬಣ್ಣಿಸಿದ್ದಾರೆ. ಈ ಬಣ್ಣನೆಯನ್ನು ಚಾಳುಕ್ಯರ ಮತ್ತು ಯಾದವರ ಶಾಸನಗಳಲ್ಲಿಯೂ ಕಾಣಬಹುದಾಗಿದೆ.

ಪ್ರಾಚೀನ ಕಾಲದಿಂದಲೂ ಕಾಗಿನೆಲೆಯು ಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದೆ. ಜೈನ, ವೈಷ್ಣವ, ಶೈವ, ವೀರಶೈವ ಸಂಸ್ಕೃತಿಗಳ ಸಂಗಮ ಏನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲಿಯ ಅನೇಕ ಗುಡಿ, ಗೋಪುರಗಳು. 10ನೆಯ ಶತಮಾನದಲ್ಲಿ ಸ್ಥಾಪಿಸಲ್ಪಟ್ಟ ಲಕ್ಷ್ಮೀನರಸಿಂಹ, ಆದಿಕೇಶವ, ಕಾಳಹಸ್ತೀಶ್ವರ, ವೀರಭದ್ರ, ಸೋಮೇಶ್ವರ, ಬ್ರಹ್ಮೇಶ್ವರ, ಸಂಗಮೇಶ್ವರ, ಬಸವಣ್ಣ, ಆದಿಶಕ್ತಿ ಇವು ಇಲ್ಲಿಯ ಪ್ರಮುಖ ದೇವಾಲಯಗಳು.

ಇಲ್ಲಿನ ಮುಖ್ಯ ದೇವಾಲಯಗಳು ಆದಿಕೇಶವ, ನರಸಿಂಹ. ಮಣ್ಣುಗೋಡೆಯಿಂದ ಸುತ್ತುವರಿಯಲ್ಪಟ್ಟ ಪ್ರಾಕಾರದೊಳಗೆ ಎರಡೂ ದೇವಾಲಯಗಳಿವೆ. ಹೆಬ್ಬಾಗಿಲು ಪ್ರವೇಶಿಸಿದೊಡನೆ ಗೋಚರಿಸುವುದು ನರಸಿಂಹ ಮಂದಿರ. ಎಡಭಾಗದಲ್ಲಿ 10 ಅಡಿಗಳ ಅಂತರದಲ್ಲಿ ಆದಿಕೇಶವ ದೇವಾಲಯವಿದೆ. 16ನೆಯ ಶತಮಾನದಲ್ಲಿ ಆದಿಕೇಶವನ ಮೂರ್ತಿಯನ್ನು ಕನಕದಾಸ ಬಾಡ ಗ್ರಾಮದಿಂದ ತಂದು ಪ್ರತಿಷ್ಠಾಪಿಸಿದ ವಿಗ್ರಹವಾಗಿದೆ . ಆದಿಕೇಶವನ ಮೂರ್ತಿ 1 1/2 ಅಡಿ ಎತ್ತರವಾಗಿದೆ. ಇಲ್ಲಿಯ ಕೆರೆಯ ದಂಡೆಯ ಮೇಲೆ ಕನಕದಾಸನ ಸಮಾಧಿಯಿದೆ. ಸುಮಾರು 9ನೆಯ ಶತಮಾನದಿಂದ 16ನೆಯ ಶತಮಾನದ ವರೆಗೆ ಧಾರ್ಮಿಕ-ಸಾಂಸ್ಕೃಕ ಕೇಂದ್ರವಾಗಿದ್ದ ಇದು ಅನಂತರ ಮುಸ್ಲಿಮರ ಆಳ್ವಿಕೆಗೆ ಒಳಪಟ್ಟಿದ್ದುದರಿಂದ ಧಾರ್ಮಿಕ ಚಟುವಟಿಕೆಗಳೆಲ್ಲ ನಿಂತುಹೋದುವು.

ಭೇಟಿ ನೀಡಿ
ಬ್ಯಾಡಗಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾವೇರಿ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section