ಜೋಳದ ರೊಟ್ಟಿ

ಜೋಳದ ರೊಟ್ಟಿ ಉತ್ತರ ಕರ್ನಾಟಕ ಜನಪ್ರಿಯ ಹಿಟ್ಟಿನ ತಿನಿಸಾಗಿದೆ ಮತ್ತು ಇಲ್ಲಿಯ ಪ್ರಮುಖ ಮತ್ತು ಸಾಂಪ್ರದಾಯಿಕ ಆಹಾರವಾಗಿದೆ. ಜೋಳದ ಹಿಟ್ಟಿನಿಂದ ತಯಾರಾಗುವ ಈ ರೊಟ್ಟಿಯು ಸ್ವಾಭಾವಿಕವಾಗಿ ಗ್ಲುಟನ್‌ರಹಿತವಾಗಿದ್ದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸಾಮಾನ್ಯವಾಗಿ ಕೈಯಿಂದ ತಟ್ಟೆ ಆಕಾರದಲ್ಲಿ ಬಿಚ್ಚಿ ಬಿಸಿ ತವೆಯಲ್ಲಿ ಬೇಯಿಸುತ್ತಾರೆ. ಜೋಳದ ರೊಟ್ಟಿಯನ್ನು ಬಿಸಿಯಾಗಿ ತಿಂದರೆ ಅದರ ನೈಜ ರುಚಿ ಹಾಗೂ ಸುವಾಸನೆ ಹೆಚ್ಚು ಸಿಗುತ್ತದೆ.

ಈ ರೊಟ್ಟಿಯನ್ನು ಬದನೆಕಾಯಿ ಎಣ್ಣೆಗಾಯಿ, ಸೊಪ್ಪಿನ ಪಲ್ಯ, ಚಟ್ನಿ ಅಥವಾ ಎಣ್ಣೆ ಸಾರಿನ ಜೊತೆ ಸೇವಿಸುವುದು ಸಾಮಾನ್ಯ. ಉತ್ತರ ಕರ್ನಾಟಕದ ಊಟದ ತಟ್ಟೆಯಲ್ಲಿ ಜೋಳದ ರೊಟ್ಟಿಗೆ ವಿಶೇಷ ಸ್ಥಾನವಿದ್ದು, ಇದು ಶಕ್ತಿದಾಯಕ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ. ಗ್ರಾಮೀಣ ಭಾಗದಲ್ಲಿ ದಿನನಿತ್ಯದ ಉಪಹಾರದಿಂದ ಹಿಡಿದು ಹಬ್ಬ ಹರಿದಿನಗಳವರೆಗೆ ಜೋಳದ ರೊಟ್ಟಿಯನ್ನು ಮುಖ್ಯ ಆಹಾರವಾಗಿ ಬಳಸುತ್ತಾರೆ.