ಹಾಲು ರಾಮೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದೇವಪುರ ಗ್ರಾಮದಲ್ಲಿ ಇರುವ ಪುರಾಣ ಪುಣ್ಯ ಕ್ಷೇತ್ರವಾಗಿದೆ. ಈ ಪುಣ್ಯ ಕ್ಷೇತ್ರದಲ್ಲಿ ಇರುವ ಉದ್ಭವ ಗಂಗೆಯಿಂದಾಗಿ ಈ ಕ್ಷೇತ್ರದಲ್ಲಿ ನಾಡಿನೆಲ್ಲೆಡೆ ಪ್ರಸಿದ್ದಿ ಪಡೆದಿದೆ. ಸುಂದರ ಪ್ರಕೃತಿಯ ಮಡಿಲಲ್ಲಿರುವ ಈ ತಾಣವು ಅನೇಕ ದೇವಾಲಯಗಳನ್ನು ಒಳಗೊಂಡ ಪ್ರಾಕಾರವನ್ನು ಹೊಂದಿದೆ. ಪ್ರತಿನಿತ್ಯ ಪ್ರವಾಸಿಗರನ್ನು ಆಕರ್ಷಿಸುವ ತಾಣ ಇದಾಗಿದೆ.
ಈ ದೇವಾಲಯವು ಬೆಂಗಳೂರು ನಿಂದ 220 ಕಿ.ಮೀ ದೂರದಲ್ಲಿದೆ ಮತ್ತು ಚಿತ್ರದುರ್ಗದಿಂದ 50 ಕಿ.ಮೀ ದೂರದಲ್ಲಿದೆ. ಹಾಗೂ ಹೊಸದುರ್ಗ ದಿಂದ 10 ಕಿ.ಮೀ ಮತ್ತು ಹೊಸದುರ್ಗ ರೋಡ್ ರೈಲ್ವೆ ನಿಲ್ದಾಣದಿಂದ ಕೇವಲ 22 ಕಿ.ಮೀ ದೂರದಲ್ಲಿದೆ.
ಶ್ರೀರಾಮಚಂದ್ರನು ಅರಣ್ಯ ವಾಸದ ಸಂದರ್ಭದಲ್ಲಿ ಒಮ್ಮೆ ಈ ಪುಣ್ಯಕ್ಷೇತ್ರದಲ್ಲಿ ಪೂಜೆ ಸಲ್ಲಿಸುವಾಗ ಶಿವಲಿಂಗದ ಮೂರ್ತಿಯು ಇಲ್ಲಿ ಉದ್ದವಾಗುತ್ತದೆ. ಈ ಲಿಂಗವೇ ಪ್ರಭಾವಶಾಲಿ ಶ್ರೀ ರಾಮಲಿಂಗೇಶ್ವರ ಲಿಂಗ.
ಈ ಸ್ಥಳದ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿರುವ ಗಂಗಾ ಕೊಳ. ಈ ಗಂಗಾ ಕೊಳವನ್ನು ನಿರ್ಮಿಸಿದ್ದು ಸ್ವತಃ ವಾಲ್ಮೀಕಿ ಮಹರ್ಷಿಗಳು. ಇದರ ಬಗ್ಗೆ ಒಂದು ರೋಚಕ ಕಥೆ ಇದೆ. ಒಮ್ಮೆ ವಾಲ್ಮೀಕಿ ಮಹರ್ಷಿಗಳ ಪತ್ನಿ ಸುದತಿ ದೇವಿಯು ಕಾಶಿಯಲ್ಲಿ ಗಂಗೆಗೆ ಬಾಗಿನ ರೂಪದಲ್ಲಿ ಬಂಗಾರದ ಕಡಗ ಒಂದನ್ನು ಸಮರ್ಪಿಸುತ್ತಾರೆ. ಆಕೆಯು ಗಂಗೆಯಲ್ಲಿ ಸಮರ್ಪಣೆ ಮಾಡಿದ ಬಂಗಾರದ ಕಡಗ ಈ ಊರಿನ ಹುತ್ತವೊಂದರಲ್ಲಿ ದೊರಕುತ್ತದೆ. ತದನಂತರ ಈ ಸ್ಥಳದಲ್ಲಿ ಗಂಗೋದ್ಭವವು ಸಹ ಆಗುತ್ತದೆ.
ಈ ವಿಷಯವನ್ನು ತಿಳಿದ ವಾಲ್ಮೀಕಿ ಮಹರ್ಷಿಗಳು ಇಲ್ಲಿಗೆ ಆಗಮಿಸಿ ಬಂದು ನೋಡಿದಾಗ ಪ್ರತ್ಯಕ್ಷರಾದ ಗಂಗಾಮಾತೆಯು ತಾನು ವಾರಣಾಸಿಯಿಂದ ಇಲ್ಲಿಗೆ ಭಕ್ತರ ಇಷ್ಟಾರ್ಥ ನೆರವೇರಲಿ ಎಂದು ಹರಿದು ಬರುವುದಾಗಿ ಹೇಳಿ ಮಾಯವಾಗುತ್ತಾಳೆ. ತದನಂತರ ವಾಲ್ಮೀಕಿ ಮಹರ್ಷಿಗಳು ಈ ನೀರಿನ ಕೊಳದ ಮೇಲೆ ಗಂಗಾ ಮಾತೆಯನ್ನು ಪ್ರತಿಷ್ಠಾಪಿಸುತ್ತಾರೆ. ಅವರು ಅಂದು ಪ್ರತಿಷ್ಠಾಪಿಸಿದ ಗಂಗಾಮಾತೆಯ ವಿಗ್ರಹ ನಾವು ಇಂದು ಸಹ ಕಾಣಬಹುದು. ಈ ಕೊಳದ ನೀರು ಹಾಲಿನ ರೂಪದಲ್ಲಿ ಇರುವುದರಿಂದ ಈ ಕ್ಷೇತ್ರಕ್ಕೆ ಹಾಲು ರಾಮಲಿಂಗೇಶ್ವರ ದೇವಾಲಯ ಎಂದು ಕರೆಯುತ್ತಾರೆ.
ಇಲ್ಲಿರುವ ಉದ್ಧವ ಗಂಗೆಯಿಂದ ಈ ತಾಣ ಪ್ರಸಿದ್ಧವಾಗಿದೆ. ಕೊಳದ ತಳದಿಂದ ಮೇಲೆ ಬರುವ ಫಲಸಂಕೇತಗಳೇ ಇಲ್ಲಿಯ ಆಕರ್ಷಣೆ. ಇಲ್ಲಿಯ ಮುಖ್ಯ ದೇವಾಲಯದೊಳಗೆ ಹೊಯ್ಸಳ ಕಾಲದ ಕೆಲವು ಮೂರ್ತಿಗಳಿವೆ. ಇಲ್ಲಿಯ ಗಂಗಾದೇವಿ ಗುಡಿ ಮತ್ತು ಉಯ್ಯಾಲೆ ಕಂಬ ಇವು ಚಿತ್ರದುರ್ಗ ಪಾಳೆಯಗಾರರ ಕೊಡುಗೆಗಳಾಗಿವೆ. ಹೆಚ್ಚುವರಿಯಾದ ಉದ್ದವ ಜಲ ಹಂತ ಹಂತವಾಗಿ ಮುಂದೆ ಹರಿದು ಸಾಗಲು ಪುಷ್ಕರಿಣಿಗಳನ್ನು ಸಹ ಇಲ್ಲಿ ನಿರ್ಮಿಸಲಾಗಿದೆ.
ಭೇಟಿ ನೀಡಿ