ಹೊಸದುರ್ಗ ಕೋಟೆಯು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿ ಇರುವ ಐತಿಹಾಸಿಕ ಕೋಟೆಯಾಗಿದೆ. ಚಿತ್ರದುರ್ಗದ ಪಾಳೆಯಗಾರ ಚಿಕ್ಕಣ್ಣ ನಾಯಕನು ಕ್ರಿ.ಶ. 1675ರಲ್ಲಿ ಪಟ್ಟಣದ ದಕ್ಷಿಣ ಭಾಗದಲ್ಲಿರುವ ಹನುಮನಕೊಂಬೆ ಬೆಟ್ಟದ ಮೇಲೆ ಈ ಕೋಟೆಯನ್ನು ನಿರ್ಮಿಸಿದನು.
ಹೊಸದುರ್ಗ ಕೋಟೆಯ ದೂರಗಳು
- ಬೆಂಗಳೂರು – 210 ಕಿ.ಮೀ
- ಚಿತ್ರದುರ್ಗ – 65 ಕಿ.ಮೀ
- ಹೊಸದುರ್ಗ – 3 ಕಿ.ಮೀ
- ಹೊಸದುರ್ಗ ರೈಲ್ವೆ ನಿಲ್ದಾಣ – 20 ಕಿ.ಮೀ
- ಚಿತ್ರದುರ್ಗ ರೈಲ್ವೆ ನಿಲ್ದಾಣ – 65 ಕಿ.ಮೀ
ಇತಿಹಾಸ
ಶಿರಾ ಮಹಮ್ಮದೀಯರ ವಶದಲ್ಲಿದ್ದ ಸಂಪದ್ಭರಿತ ಬಾಗೂರು ಕೋಟೆಯನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ, ಚಿತ್ರದುರ್ಗದ ಪಾಳೆಯಗಾರ ಚಿಕ್ಕಣ್ಣ ನಾಯಕನು ಪಟ್ಟಣದ ದಕ್ಷಿಣ ಭಾಗದಲ್ಲಿರುವ ಹನುಮನಕೊಂಬೆ ಬೆಟ್ಟದ ಮೇಲೆ ಕ್ರಿ.ಶ. 1675ರಲ್ಲಿ ಕೋಟೆ, ಮದ್ದಿನ ಉಗ್ರಾಣ, ದೇವಾಲಯ, ಅರಮನೆ ಹಾಗೂ ಸೈನಿಕರ ವಸತಿಗಳನ್ನು ನಿರ್ಮಿಸಿ, ತನ್ನ ಸೇನೆಯೊಂದಿಗೆ ಬಂದು ನೆಲೆಸಿದನು.
ಚಿಕ್ಕಣ್ಣ ನಾಯಕನು ನಿರ್ಮಿಸಿದ ಈ ಕೋಟೆಗೆ ತನ್ನ ಮೂಲ ಕೋಟೆಯಾದ ಚಿತ್ರದುರ್ಗದ ನೆನಪಿಗಾಗಿ, ‘ಹೊಸದಾದ ದುರ್ಗ’ ಎಂಬ ಅರ್ಥದಲ್ಲಿ ‘ಹೊಸದುರ್ಗ’ ಎಂಬ ಹೆಸರು ಬಂದಿತು. ಚಿಕ್ಕಣ್ಣ ನಾಯಕನ ನಂತರ ದಂಡಿನ ಜಂಪಣ್ಣ ನಾಯಕನು ಆಳ್ವಿಕೆ ನಡೆಸಿದನು. ಬಳಿಕ ಹೈದರಾಲಿಯು ದುರ್ಗದ ಮೇಲಿನ ಸೇಡಿನ ಕಾರಣದಿಂದ ಬಾಗೂರು ಹಾಗೂ ಹೊಸದುರ್ಗ ಕೋಟೆಗಳನ್ನು ಲೂಟಿ ಮಾಡಿದನೆಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.
ಪಟ್ಟಣದ ದಕ್ಷಿಣ ಭಾಗದಲ್ಲಿರುವ ಹನುಮನಕೊಂಬೆ ಬೆಟ್ಟದಲ್ಲಿ ಪಾಳೆಯಗಾರರ ಕಾಲದಲ್ಲಿ ನಿರ್ಮಿಸಲಾದ ಕೋಟೆಯ ಅವಶೇಷಗಳು, ದೇವಾಲಯಗಳು, ವೀರಗಲ್ಲುಗಳು ಹಾಗೂ ದೇವರ ವಿಗ್ರಹಗಳು ಇಂದಿಗೂ ಕಾಣಸಿಗುತ್ತವೆ. ಇಲ್ಲಿ ಐದು ಸುತ್ತಿನ ಹಾಗೂ ಮೂರು ಸುತ್ತಿನ ಕೋಟೆಗಳ ಅವಶೇಷಗಳಿದ್ದು, ವೀರಭದ್ರಸ್ವಾಮಿ ಮತ್ತು ಕಾಳಿಕಾದೇವಿ ದೇವಾಲಯಗಳೂ ಇವೆ. ಪಕ್ಕದಲ್ಲೇ ‘ಹುಣಸೆಹೊಂಡ’ ಎಂಬ ಕೊಳವಿದ್ದು, ಎಂತಹ ಬೇಸಿಗೆಯಲ್ಲಿಯೂ ಅದರ ನೀರು ಬತ್ತುವುದಿಲ್ಲ.
ಅಲ್ಲಿಂದ ಮುಂದೆ ಸಾಗಿದರೆ, ಕಲ್ಲಿನಲ್ಲಿ ಕೆತ್ತಲಾದ ನಾಗಪ್ಪನ ಮೂರ್ತಿ ಕಾಣಿಸುತ್ತದೆ. ಬೆಟ್ಟದ ಮೇಲ್ಭಾಗದಲ್ಲಿ, ಕೋಟೆಯ ಆವರಣದಲ್ಲೇ ಶ್ರೀ ಕಾಲಭೈರೇಶ್ವರಸ್ವಾಮಿ ದೇವಾಲಯವಿದೆ.
ಚಿತ್ರದುರ್ಗ ಕೋಟೆಯಲ್ಲಿರುವಂತೆ ಹೊಸದುರ್ಗ ಕೋಟೆಯಲ್ಲಿಯೂ ನಾಗರಕಲ್ಲುಗಳು ಇವೆ. ಹಲವು ವರ್ಷಗಳ ಹಿಂದೆ ಕೋಟೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ನಾಗರಕಲ್ಲುಗಳು ಕೆಳಗೆ ಬಿದ್ದಿದ್ದರಿಂದ ತಾಲ್ಲೂಕಿನಲ್ಲಿ ಬರಗಾಲ ಉಂಟಾಯಿತು ಎಂಬ ಸ್ಥಳೀಯ ನಂಬಿಕೆ ಇದೆ. ನಂತರ ಅಂದಿನ ಮಂಡಲ ಪಂಚಾಯಿತಿ ಅಧ್ಯಕ್ಷ ಅಂಜನಕುಮಾರ್ ಅವರು ಸುತ್ತಮುತ್ತಲಿನ ದೇವರ ಸಮ್ಮುಖದಲ್ಲಿ ಆ ನಾಗರಕಲ್ಲುಗಳನ್ನು ಮರುಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಿದರು. ಅದರ ಬಳಿಕ ಮಳೆ ಸುರಿಯಲು ಆರಂಭವಾಯಿತು ಎಂಬುದು ಸ್ಥಳೀಯರ ಪ್ರತೀತಿಯಾಗಿದೆ.
ಭೇಟಿ ನೀಡಿ








