ಮಲೆ ಮಹದೇಶ್ವರ ಬೆಟ್ಟ

ಮಲೆ ಮಹದೇಶ್ವರ ಬೆಟ್ಟಗಳು ರಾಜ್ಯದ ಒಂದು ಪ್ರಸಿದ್ಧ ಯಾತ್ರಾ ಹಾಗೂ ಪವಿತ್ರ ಕೇಂದ್ರವಾಗಿದೆ. ಇದು ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಬೆಟ್ಟದ ಶ್ರೇಣಿಯಲ್ಲಿದ್ದು, ಸಮುದ್ರ ಮಟ್ಟದಿಂದ 3,200 ಅಡಿ ಎತ್ತರದಲ್ಲಿದೆ. ಮಲೆ ಮಹದೇಶ್ವರ ಬೆಟ್ಟವು ಆನೆಮಲೆ, ಜೇನುಮಲೆ, ಕಾಡುಮಲೆ, ಕಾನುಮಲೆ, ಪೊನ್ನಾಚಿಮಲೆ, ಪಾವಲಮಲೆ ಮತ್ತು ಪಚ್ಚೆಮಲೆ ಎಂಬ ಏಳು ಬೆಟ್ಟಗಳನ್ನು ಒಳಗೊಂಡಿದೆ.

ಮಲೆ ಮಹದೇಶ್ವರ ಬೆಟ್ಟವು ಬೆಂಗಳೂರಿನಿಂದ ಸುಮಾರು 211 ಕಿ.ಮೀ ಮತ್ತು ಮೈಸೂರಿನಿಂದ 134 ಕಿ.ಮೀ ದೂರದಲ್ಲಿದೆ. ಹಾಗೂ ಸಮೀಪದ ಕೊಳ್ಳೇಗಾಲ ನಗರದಿಂದ 72 ಕಿಮೀ ದೂರದಲ್ಲಿದೆ.

ಚಾಮರಾಜನಗರ ಜಿಲ್ಲೆಯ ಜುಂಜೇಗೌಡರು ಮಲೆ ಮಹದೇಶ್ವರ ದೇವಸ್ಥಾನವನ್ನು ನಿರ್ಮಿಸಿದರು. ಅವರು ಕುರುಬ ಗೌಡ ಸಮುದಾಯಕ್ಕೆ ಸೇರಿದ ಸ್ಥಳೀಯ ಜಮೀನ್ದಾರರು ಮತ್ತು ಶ್ರೀ ಮಹದೇಶ್ವರ ಸ್ವಾಮಿಯ ಭಕ್ತರಾಗಿದ್ದರು.

ಇಲ್ಲಿ ದೇವಾಲಯದ ದರ್ಶನದ ಸಮಯ ಬೆಳ್ಳಿಗ್ಗೆ 6:00 ರಿಂದ ಮಧ್ಯಾಹ್ನ 12 :00 ರವರೆಗೆ ಮತ್ತು ಸಂಜೆ 5 :00 ರಿಂದ ರಾತ್ರಿ 8.30 ರವರೆಗೆ.

ಶ್ರೀ ಮಲೆ ಮಹದೇಶ್ವರ ದೇವಾಲಯ ಶಿವನ ಪುರಾತನ ಮತ್ತು ಪವಿತ್ರ ದೇವಾಲಯವು ಆಗಿದ್ದು ಮಹದೇಶ್ವರರು ವಾಸಿಸುತ್ತಿದ್ದ ಯಾತ್ರಾ ಕೇಂದ್ರವಾಗಿದ್ದು, ಸಿದ್ದಪುರುಷ ನಾಗಿ ವೈದ್ಯಶಾಸ್ತ್ರವನ್ನು ಅಭ್ಯಾಸ ಮಾಡಿದ್ದರು ಮತ್ತು ಏಳು ಬೆಟ್ಟಗಳ ಸುತ್ತಮುತ್ತಲಿನ ಜನರಿಗೆ ಅಹಿಂಸೆಯನ್ನು ಕಲಿಸಿದರು. ಪ್ರಸ್ತುತ ದೇವಾಲಯದ ಸುತ್ತಮುತ್ತಲಿನ ಪ್ರದೇಶವು 160 ಎಕರೆಗಳಾಗಿದ್ದು. ಜೊತೆಗೆ ತಾಳಬೆಟ್ಟ, ಹಳೆಯೂರು ಮತ್ತು ಇಂಡಿಗನಾಥ ಗ್ರಾಮಗಳಲ್ಲಿ ದೇವಸ್ಥಾನಕ್ಕೆ ಜಮೀನುಗಳಿವೆ. ದಟ್ಟವಾದ ಕಾಡಿನ ನಡುವೆ ಇರುವ ಈ ದೇವಾಲಯವು ಯಾತ್ರಾರ್ಥಿಗಳನ್ನು ಮಾತ್ರವಲ್ಲದೆ ಪ್ರಕೃತಿ ಪ್ರಿಯರನ್ನು ಕೂಡ ಆಕರ್ಷಿಸುತ್ತದೆ.

ಶ್ರೀ ಮಹದೇಶ್ವರ ದೇವರು ಶಿವನ ಅವತಾರವೆಂದು ನಂಬಲಾಗಿದೆ. ಸಂತ ಮಹದೇಶ್ವರರು 15ನೇ ಶತಮಾನದಲ್ಲಿ ಜೀವಿಸಿದ್ದಿರಬೇಕೆಂದು ಐತಿಹಾಸಿಕ ಪುರಾವೆಗಳು ಸೂಚಿಸುತ್ತವೆ. ಗರ್ಭ ಗುಡಿಯಲ್ಲಿ ಪೂಜಿಸಲ್ಪಡುವ ಲಿಂಗವು ಸ್ವಯಂಭು ಲಿಂಗವಾಗಿದೆ. ಶ್ರೀ ಮಲೆ ಮಹದೇಶ್ವರ ಸ್ವಾಮಿಯು ಹುಲಿಯ ಮೇಲೆ (ಹುಲಿ ವಾಹನ) ಚಲಿಸುತ್ತಿದ್ದರು ಮತ್ತು ಬೆಟ್ಟದ ಸುತ್ತಲೂ ಹಲವಾರು ಅದ್ಭುತಗಳನ್ನು ಮಾಡಿ ಅಲ್ಲಿ ವಾಸಿಸುವ ಜನರನ್ನು ಮತ್ತು ಸಂತರನ್ನು ರಕ್ಷಿಸುತಿದ್ದರು.

ಸಂತ ಮಹದೇಶ್ವರರು ಇಲ್ಲಿ ಮಠವನ್ನು ಸ್ಥಾಪಿಸಿದರು ತಮ್ಮ ಪವಾಡಗಳ ಮೂಲಕ, ಗುಡ್ಡಗಾಡು ಬುಡಕಟ್ಟು ಜನಾಂಗದವರಿಗೆ ಜ್ಞಾನೋದಯ ಮತ್ತು ಉನ್ನತೀಕರಣವನ್ನು ನೀಡಿದರು ಮತ್ತು ಅವರನ್ನು ತಮ್ಮ ಶಿಷ್ಯರನ್ನಾಗಿ ಮಾಡಿದರು. ಈ ಕುಟುಂಬಗಳಿಂದ ಬರುವ ಜನರು ಮಹದೇಶ್ವರ ದೇವಸ್ಥಾನದ ವಂಶಪಾರಂಪರ್ಯ ‘ಅರ್ಚಕರು’ ಆಗಿದ್ದಾರೆ. ಮಲೆ ಮಹದೇಶ್ವರ ಬೆಟ್ಟಗಳು ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿವೆ. ಬೆಟ್ಟದ ತುದಿಯವರೆಗೆ ಸುಸಜ್ಜಿತ ರಸ್ತೆಗಳೊಂದಿಗೆ ಉತ್ತಮವಾಗಿ ಅಭಿವೃದ್ಧಿಗೊಂಡಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ತಲುಪಲು ಬೆಟ್ಟ ದಾರಿಯಾಗಿದ್ದು ತೀರಾ ಕಠಿಣ ಹಾಗೂ 18 ಹೇರ್ ಪಿನ್ ಅಂಕು ಡೊಂಕದಂತ ರಸ್ತೆಯನ್ನು ಹಾದು ಹೋಗಬೇಕಾಗಿದೆ.

ಇಲ್ಲಿನ ಹಾಡು ಮತ್ತು ನೃತ್ಯದ ದಿನಚರಿಯನ್ನು ಕಂಸಾಳೆ ಎಂದು ಕರೆಯಲಾಗುತ್ತದೆ. ಇಲ್ಲಿ ಕಂಸಾಳೆಯು ಶಿವನ ಆರಾಧನೆಯ ಸಂಪ್ರದಾಯ ಹೊಂದಿದೆ. ಮಹದೇಶ್ವರನಿಗೆ ಭಕ್ತಿಯಿಂದ ಕಂಸಾಳೆಯ ರೂಪದಲ್ಲಿ ಹಾಡಿ ಕುಣಿಯುತ್ತಾರೆ. ನೃತ್ಯವು ‘ದೀಕ್ಷಾ’ ಅಥವಾ ಪ್ರತಿಜ್ಞೆಯ ಒಂದು ಭಾಗವಾಗಿದೆ ಮತ್ತು ಇದನ್ನು ಆಧ್ಯಾತ್ಮಿಕ ನಾಯಕರಿಂದ ಕಲಿಸಲಾಗುತ್ತದೆ. ಮಹದೇಶ್ವರ ಬೆಟ್ಟದಲ್ಲಿ ‘ದೀಪಾವಳಿ’ ಮತ್ತು ‘ಶಿವರಾತ್ರಿ’ ಮತ್ತು ‘ಯುಗಾದಿ’ ಹಬ್ಬಗಳಲ್ಲಿ ನಡೆಯುವ ಜಾತ್ರೆಗಳಿಗೆ ವಿಶೇಷವಾಗಿದೆ ಹಾಗೂ ಇದರಲ್ಲಿ ಭಾಗವಹಿಸಲು ಸಾವಿರಾರು ಭಕ್ತರು ಸೇರುತ್ತಾರೆ ಇದು ಸತತ ಏಳು ರಾತ್ರಿಗಳವರೆಗೆ ನೆಡೆಯುತ್ತದೆ.

ಶ್ರೀ ಮಹದೇಶ್ವರನನ್ನು ಬಡವರ ದೇವರು ಮಾದಪ್ಪ ಎಂದೂ ಕರೆಯುತ್ತಾರೆ “ಚೆಲ್ಲಿದರು ಮಲ್ಲಿಗೆಯ” ಎಂಬುದು ಪ್ರಸಿದ್ಧ ಜಾನಪದ ಗೀತೆಯಾಗಿದ್ದು ಅದು ಮಹದೇಶ್ವರ ದೇವರ ಭಕ್ತಿ ಮತ್ತು ಆರಾಧನೆಯ ವೈಭವವಾಗಿದೆ.

ಮಲೆ ಮಹದೇಶ್ವರ ಬೆಟ್ಟಗಳು ಡೆಕ್ಕನ್ ಪ್ರಸ್ಥಭೂಮಿಯ ತುದಿಯಲ್ಲಿ ಬಿಳಿಗಿರಿರಂಗ ಬೆಟ್ಟಗಳ ಜೊತೆಗೆ, ಬೆಟ್ಟದ ಶ್ರೇಣಿಯ ಘಟ್ಟಗಳ ನಡುವೆ ಭೂವೈಜ್ಞಾನಿಕ ಸೇತುವೆಯಂತೆ ರೂಪಿಸಿದೆ. ಮಲೆ ಮಹದೇಶ್ವರ ಬೆಟ್ಟಗಳ ಪ್ರದೇಶವು ಕಾವೇರಿ ನದಿಯಿಂದ ಮತ್ತು ಕಾವೇರಿಯ ಉಪನದಿಯಾದ ಪಾಲಾರ್ ನದಿಯಿಂದ ಸುತ್ತುವರೆದಿದೆ. ಈ ಎರಡು ನದಿಗಳ ಸಂಗಮವು ಮಲೆ ಮಹದೇಶ್ವರ ಅರಣ್ಯದಲ್ಲಿದೆ.

ಭೇಟಿ ನೀಡಿ
ಚಾಮರಾಜನಗರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು