ಧಾರವಾಡ ಪೇಡ

ಧಾರವಾಡ ಪೇಡ ಕರ್ನಾಟಕ ರಾಜ್ಯದ ಹುಬ್ಬಳ್ಳಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪ್ರಸಿದ್ಧವಾದ ಸಿಹಿ ತಿಂಡಿ ಆಗಿದೆ. ಈ ಪೇಡವು ದೇಶದಾದ್ಯಂತ ಪ್ರಸಿದ್ಧಿಯಾಗಿದೆ. ಹುಬ್ಬಳ್ಳಿಯಲ್ಲಿ ಉತ್ತಮ ದರ್ಜೆಯಲ್ಲಿ ಠಾಕೂರರ ಪೇಡ ಅಂಗಡಿಯಲ್ಲಿ ದೊರೆಯುತ್ತದೆ. ಆಡು ಭಾಷೆಯಲ್ಲಿ ಧಾರವಾಡ ಪೇಡೆ ಅಥವಾ ಧಾರವಾಡ ಪೇಡ ಎಂದು ಕರೆಯುವ ಧಾರವಾಡ ನಗರದ ಸ್ವಾದಿಷ್ಟ ಸಿಹಿ ತಿಂಡಿಯಾಗಿದೆ.

ಠಾಕೂರ ಪೇಡ ಎಂದು ಮೊದಲು ಕರೆಯಲ್ಪಡುತ್ತಿದ್ದ ಧಾರವಾಡದ ಪೇಡಕ್ಕೆ ಸುಮಾರು ಒಂದೂವರೆ ಶತಮಾನದಷ್ಟು ಸುದೀರ್ಘ ಇತಿಹಾಸವಿದೆ. ಬೇರೆ ಪೇಡಗಳಿಗೆ ಹೋಲಿಸಿದರೆ ಇದು ತೀರ ಭಿನ್ನ ಆದರೆ ತನ್ನದೇ ಆದ ವಿಶಿಷ್ಟ ರುಚಿ ಮತ್ತು ಗುಣಕ್ಕೆ ಹೆಸರುವಾಸಿಯಾಗಿದೆ.

ಶತಮಾನಗಳ ಹಿಂದೆ ಉತ್ತರ ಭಾರತದ ಲಕ್ನೋ ನಗರದಿಂದ ವಲಸೆ ಬಂದ ಥಾಕುರ್ ಪರಿವಾರ ಜೀವನೋಪಾಯಕ್ಕಾಗಿ ಪಾರಂಪರಿಕವಾಗಿ ಚಾಲ್ತಿಯಲ್ಲಿದ್ದ ಪೇಡ ತಯಾರಿಕೆಯನ್ನು ಧಾರವಾಡದಲ್ಲಿ ಮುಂದುವರಿಸಿದ್ದರು. ಮೊದಲು ಠಾಕೂರ ಪೇಡ ಎಂದು ಹೇಳಿ ಮಾರುತ್ತಿದ್ದ ಸಿಹಿ ತಿನಿಸು, ಕಾಲ ಕ್ರಮೇಣ ಧಾರವಾಡ ಪೇಡ ಆಗಿ ಪ್ರಸಿದ್ಧಿ ಪಡೆಯಿತು. ಕೇವಲ ಅತ್ಯುತ್ತಮ ರುಚಿ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು ಬಂದು ಈಗ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ವಲಯದಲ್ಲಿ ಹೆಸರುಗಳಿಸಿದೆ.