ಶ್ರೀ ಅನಂತಶಯನ ದೇವಾಲಯವು ಕರ್ನಾಟಕದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿರುವ ಪುರಾತನ ದೇವಾಲಯವಾಗಿದೆ. ಈ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿದೆ. ಅನಂತ ಪದ್ಮನಾಭ ಸ್ವಾಮಿಗೆ ಸಮರ್ಪಿತವಾದ ಈ ದೇವಾಲಯವನ್ನು ಕ್ರಿ.ಶ. 1524ರಲ್ಲಿ ವಿಜಯನಗರದ ಅರಸ ಶ್ರೀಕೃಷ್ಣದೇವರಾಯನು ನಿರ್ಮಿಸಿದನೆಂದು ಶಾಸನಗಳಿಂದ ತಿಳಿದುಬರುತ್ತದೆ.
ಶ್ರೀ ಅನಂತಶಯನದ ದೂರಗಳು
- ಬೆಂಗಳೂರು – 332 ಕಿ.ಮೀ
- ಹೊಸಪೇಟೆ – 2 ಕಿ.ಮೀ
- ಹೊಸಪೇಟೆ ರೈಲ್ವೆ ನಿಲ್ದಾಣ – 3 ಕಿ.ಮೀ
ಇತಿಹಾಸ
ತನ್ನ ಮೃತ ಮಗ ತಿರುಮಲರಾಯನ ಸ್ಮರಣಾರ್ಥವಾಗಿ ಕೃಷ್ಣದೇವರಾಯನು ಈ ಗ್ರಾಮವನ್ನು ನಿರ್ಮಿಸಿ, ಅದಕ್ಕೆ ಶ್ರೀ ತಿರುಮಲ ಮಹಾರಾಯಪುರ ಎಂಬ ಹೆಸರನ್ನು ನೀಡಿದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಪ್ರಸ್ತುತ ಈ ಗ್ರಾಮವು ಅನಂತಶಯನಗುಡಿ ಎಂದು ಕರೆಯಲ್ಪಡುತ್ತದೆ. ದೇವಾಲಯದಲ್ಲಿ ನಿತ್ಯಪೂಜೆ ಮತ್ತು ಇತರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ವೈಖಾನಸ ಆಗಮ ಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದ ಅರ್ಚಕರ ಸಮೂಹವನ್ನು ಇಲ್ಲಿ ನೇಮಿಸಲಾಗಿತ್ತು ಎಂಬ ಮಾಹಿತಿಯೂ ಶಾಸನಗಳಲ್ಲಿ ಉಲ್ಲೇಖವಾಗಿದೆ.
ದೇವಾಲಯದ ವಿನ್ಯಾಸ
ಉತ್ತರಾಭಿಮುಖವಾಗಿರುವ ಈ ಬೃಹತ್ ದೇವಾಲಯವು ಆಯತಾಕಾರದ ಗರ್ಭಗುಡಿಯನ್ನು ಹೊಂದಿದೆ. ಗರ್ಭಗುಡಿಯಲ್ಲಿರುವ ಮೂಲಮೂರ್ತಿಯ ದರ್ಶನ ಪಡೆಯಲು ಮೂರು ದ್ವಾರಗಳಿವೆ. ಗರ್ಭಗುಡಿಯೊಳಗೆ ಶಯನರೂಪಿ ವಿಷ್ಣುವಿನ ಬೃಹತ್ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಿರ್ಮಿಸಿರುವ ವಿಶಾಲವಾದ ಪೀಠವಿದೆ.
ಗರ್ಭಗುಡಿಯ ಮೇಲಿರುವ ಸುಮಾರು 10 ಮೀಟರ್ ಎತ್ತರದ ಶಾಲಾ ಶಿಖರವು ವಿಜಯನಗರ ವಾಸ್ತುಶಿಲ್ಪದ ಕಟ್ಟಡ ವಿನ್ಯಾಸದ ವೈಶಿಷ್ಟ್ಯವನ್ನು ಪ್ರತಿಬಿಂಬಿಸುತ್ತದೆ. ದೇವಾಲಯದ ಪೂರ್ವ ಭಾಗದಲ್ಲಿ ಉತ್ಸವ ಮಂಟಪವಿದ್ದು, ನೈಋತ್ಯ ಭಾಗದಲ್ಲಿ ದೇವಿಯ ದೇವಾಲಯವಿದೆ. ಮುಖ್ಯ ದೇವಾಲಯದ ಗರ್ಭಗುಡಿಯ ಉತ್ತರ ದಿಕ್ಕಿನಲ್ಲಿ ಎತ್ತರವಾದ ಸ್ತಂಭಗಳನ್ನು ಹೊಂದಿರುವ ಸಭಾಮಂಟಪವಿದೆ.
ಭೇಟಿ ನೀಡಿ
ಭೇಟಿ ನೀಡಿ














