ಗದಗ ಸರ್ಕಾರಿ ವಸ್ತು ಸಂಗ್ರಹಾಲಯ

ಗದಗ ಸರ್ಕಾರಿ ವಸ್ತು ಸಂಗ್ರಹಾಲಯವು 1998 ರಂದು ಪ್ರಾರಂಭಗೊಂಡಿತು. ಇತಿಹಾಸದ ಯೋಗ್ಯ ಪ್ರತೀಕವಾಗಿರುವ ಈ ವಸ್ತು ಸಂಗ್ರಹಾಲಯವು ಪ್ರಸ್ತುತ ಸುಮಾರು 700 ಪ್ರಾಚ್ಯವಸ್ತುಗಳ ಸಂಗ್ರಹವಿದ್ದು, ಪ್ರಮುಖವಾಗಿ ನಾಡಿನ ಇತಿಹಾಸವನ್ನು ಬಿಂಬಿಸುವ ಮಹತ್ವದ ಮೂರ್ತಿಶಿಲ್ಪಗಳು, ಶಾಸನಗಳು, ವೀರಗಲ್ಲುಗಳು, ಉತ್ಖನನದ ಅವಶೇಷಗಳು, ಆಧುನಿಕ ವರ್ಣಚಿತ್ರ ಕಲಾಕೃತಿಗಳನ್ನು ಹೊಂದಿದೆ.

ಈ ಸಂಗ್ರಹಾಲಯವು ಬೆಂಗಳೂರಿನಿಂದ 416 ಕಿ.ಮೀ ಮತ್ತು ಗದಗ ನಗರದಿಂದ ಕೇವಲ 550 ಮೀ ದೂರದಲ್ಲಿದೆ.

ಈ ವಸ್ತು ಸಂಗ್ರಹಾಲಯದಲ್ಲಿ ಇತಿಹಾಸ ಪೂರ್ವಕಾಲ ಹಾಗೂ ಆರಂಭಿಕ ಇತಿಹಾಸ ಕಾಲದ ಪ್ರಾಚ್ಯಾವಶೇಷಗಳು, ಲಕ್ಕುಂಡಿ ಗ್ರಾಮದಲ್ಲಿ ಇಲಾಖೆಯಿಂದ ಕೈಗೊಂಡ ಉತ್ಖನನ ಕಾರ್ಯದಲ್ಲಿ ದೊರೆತ ಪ್ರಾಚ್ಯವಸ್ತುಗಳನ್ನು ಪ್ರದರ್ಶಿಸಲಾಗಿದೆ. ನೂತನ ಶಿಲಾಯುಗದ ಆಯುಧಗಳು, ಬೃಹತ್‍ಶಿಲಾಯುಗದ ಮಣ್ಣಿನ ಪಾತ್ರೆಗಳು, ಶಾತವಾಹನ ಕಾಲದ ಮಣ್ಣಿನ ಪಾತ್ರೆಗಳು, ಹಾಗೂ ವಿವಿಧ ಆಕಾರ, ಬಣ್ಣದ ಮಣಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ಈ ವಸ್ತುಸಂಗ್ರಹಾಲಯದಲ್ಲಿ 19 ರಿಂದ 20ನೇ ಶತಮಾನದ 50 ಬೆಳ್ಳಿಯ ನಾಣ್ಯಗಳ ಸಂಗ್ರಹವಿದೆ. ಇವುಗಳಲ್ಲಿ 34 ನಾಣ್ಯಗಳು ವಿಕ್ಟೋರಿಯಾ ರಾಣಿ, 05 ನಾಣ್ಯಗಳು ಚಕ್ರವರ್ತಿ 7ನೇ ಎಡ್ವರ್ಡ್‍ನ ಹಾಗೂ ಚಕ್ರವರ್ತಿ 5ನೇ ಜಾರ್ಜ್ ರಾಜನ 11 ನಾಣ್ಯಗಳಿವೆ.

ಈ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಲಾದ ಶಾಸನಗಳಲ್ಲಿ ಕ್ರಿ.ಶ. 1007ರ ದಾನ ಚಿಂತಾಮಣಿ ಅತ್ತಿಮಬ್ಬೆಯು ಜೈನ ಬಸದಿ ಕಟ್ಟಿಸಿ, ದಾನ ನೀಡಿದ ಶಾಸನವು ಪ್ರಮುಖವಾಗಿದೆ.

ಗದಗ ಜಿಲ್ಲೆಯ ವಿವಿಧ ಭಾಗಗಳಿಂದ ಸಂಗ್ರಹಿಸಲಾದ ಅನೇಕ ಶಿಲ್ಪಗಳನ್ನು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಕಲ್ಯಾಣ ಚಾಲುಕ್ಯ ಹೊಯ್ಸಳ ಸಮ್ಮಿಶ್ರಣ ಉತ್ತಮ ಮಾದರಿಗಳಾದ ಶಿಲ್ಪಗಳನ್ನು ದೇವಾಲಯದ ಭಾಗಗಳನ್ನು ಇಲ್ಲಿ ನೋಡಬಹುದು. ಶೈವ, ವೈಷ್ಣವ, ಜೈನ ಧರ್ಮಗಳನ್ನು ಪ್ರತಿಬಿಂಬಿಸುವ ಅನೇಕ ಮೂರ್ತಿಶಿಲ್ಪಗಳನ್ನು ವೀಕ್ಷಿಸಬಹುದು. ಕ್ರಿ.ಶ.ಸು. 9ನೇ ಶತಮಾನದ ರಾಷ್ಟ್ರಕೂಟರ ಕಾಲದ ಗಜಲಕ್ಷ್ಮೀ ಪಟ್ಟಿಕೆ, ಕ್ರಿ.ಶ.ಸು. 11-12ನೇ ಶತಮಾನದ ಕಲ್ಯಾಣ ಚಾಲುಕ್ಯ ಕಾಲದ ವೀರಭದ್ರ, ಉಮಾಮಹೇಶ್ವರ, ಮಹಿಷಾಸುರ ಮರ್ದಿನಿ, ಕುಬೇರ, ಗರುಡ, ಸೂರ್ಯ, ವಿಷ್ಣು, ವಾಸುಕಿ, ಮಿಥುನ ಶಿಲ್ಪಗಳು, ಮಹಾವೀರ ಶಿಲ್ಪ, ಚಾಮರಧಾರಿ ಜೈನ ಶಿಲ್ಪ, ಹುನಗುಂದದಿಂದ ಸಂಗ್ರಹಿಸಲಾದ ಆದಿನಾಥ ಶಿಲ್ಪ ಹಾಗೂ ಜೈನ ತೀರ್ಥಂಕರ ಶಿಲ್ಪಗಳು ಈ ವಸ್ತುಸಂಗ್ರಹಾಲಯದ ಅತ್ಯಂತ ಆಕರ್ಷಣೆಗಳಾಗಿವೆ. ಹಾಗೆಯೇ ಅನೇಕ ವೀರಗಲ್ಲುಗಳು, ಶಾಸನಗಳು, ಅವುಗಳಲ್ಲಿ ಮುಖ್ಯವಾಗಿ ದಾನ ಚಿಂತಾಮಣಿ ಅತ್ತಿಮಬ್ಬೆಯು ಜೈನ ಬಸದಿ ಕಟ್ಟಿಸಲು ನೀಡಿದ ದಾನ ಶಾಸನ, ಡಂಬಳದಲ್ಲಿ ದೊರೆತ ಪಾರ್ಶ್ವನಾಥ ಶಿಲ್ಪ ಇದರ ಪಾದ ಪೀಠದ ಮೇಲೆ ಬಸದಿಯ ನಿರ್ಮಾಣ ತಿಳಿಸುವ 10ನೇ ಶತಮಾನದ ಕನ್ನಡ ಶಾಸನ ಇದೆ. ಕ್ರಿ.ಶ.ಸು. 17ನೇ ಶತಮಾನದ ಮರದಲ್ಲಿ ಕೆತ್ತಲ್ಪಟ್ಟ ಗೋವರ್ಧನ ಹಾಗೂ ಲಕ್ಷ್ಮೀ ಮೂರ್ತಿಗಳನ್ನು ಈ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ.

ಭೇಟಿ ನೀಡಿ
ಗದಗ ತಾಲೂಕು ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ಗದಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು