ಪುರಾತನ ಶ್ರೀ ಕಲಮೇಶ್ವರ ಸ್ವಾಮಿ ದೇವಸ್ಥಾನವು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಹಾನಗಲ್ಲ (ಹಾನಗಲ್) ತಾಲ್ಲೂಕಿನ ಬಾಳಂಬೀಡು ಗ್ರಾಮದಲ್ಲಿರುವ ಐತಿಹಾಸಿಕ ಶಿವ ದೇವಾಲಯವಾಗಿದೆ. ಈ ಗ್ರಾಮದ ಪ್ರಾಚೀನ ಹೆಸರನ್ನು ಶಾಸನಗಳಲ್ಲಿ “ಬಳ್ಳಾರೆಯ ಬೀಡು” ಎಂದು ಉಲ್ಲೇಖಿಸಲಾಗಿದೆ.
ಬಾಳಂಬೀಡು ಶ್ರೀ ಕಲಮೇಶ್ವರ ಸ್ವಾಮಿ ದೇವಸ್ಥಾನದ ದೂರಗಳು
- ಬೆಂಗಳೂರು – 354 ಕಿ.ಮೀ
- ಹಾವೇರಿ – 22 ಕಿ.ಮೀ
- ಹಾನಗಲ್ – 17 ಕಿ.ಮೀ
- ಹಾವೇರಿ ರೈಲ್ವೆ ನಿಲ್ದಾಣ – 23 ಕಿ.ಮೀ
ಕ್ರಿ.ಶ. 11–12ನೇ ಶತಮಾನದಲ್ಲಿ ಪೂರ್ವಾಭಿಮುಖವಾಗಿ ನಿರ್ಮಿಸಲಾದ ಈ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಹಾಗೂ ಸಭಾಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಶಿವಲಿಂಗವು ಪ್ರತಿಷ್ಠಾಪಿತವಾಗಿದ್ದು, ಅಂತರಾಳದ ದ್ವಾರದ ಲಲಾಟಬಿಂಬದಲ್ಲಿ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣುವಿನ ಉಬ್ಬುಶಿಲ್ಪಗಳನ್ನು ಸುಂದರವಾಗಿ ಕೆತ್ತಲಾಗಿದೆ.
ನವರಂಗದಲ್ಲಿ ಐದು ದೇವಕೋಷ್ಟಗಳಿದ್ದು, ಅವುಗಳಲ್ಲಿ ಎರಡರಲ್ಲಿ ಸಪ್ತಮಾತೃಕೆಯರ ಶಿಲಾಪಟ್ಟಿಕೆಗಳಿವೆ. ಉಳಿದ ಕೋಷ್ಟಗಳಲ್ಲಿ ಒಂದರಲ್ಲಿ ಗಣಪತಿಯ ಹಾಗೂ ಇನ್ನೊಂದರಲ್ಲಿ ಕಾರ್ತಿಕೇಯನ ಶಿಲ್ಪಗಳನ್ನು ಪ್ರತಿಷ್ಠಾಪಿಸಲಾಗಿದೆ. ನವರಂಗದ ಕಂಬಗಳು ತಿರುಗಣಿ (ಲೇತ್) ಯಂತ್ರದಿಂದ ರೂಪುಗೊಂಡ ಹೊಳಪುಳ್ಳ ಕುಂಭಾಕಾರದ ವಿನ್ಯಾಸವನ್ನು ಹೊಂದಿದ್ದು, ಬಳೆಗಳು ಹಾಗೂ ಸೂಕ್ಷ್ಮ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿವೆ. ಇವು ದೇವಾಲಯದ ವಾಸ್ತುಶಿಲ್ಪದ ನೈಪುಣ್ಯವನ್ನು ಪ್ರತಿಬಿಂಬಿಸುತ್ತವೆ.
ಭೇಟಿ ನೀಡಿ




