ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ

ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯವು ಎತ್ತರದ ದಟ್ಟವಾದ ಅರಣ್ಯದಿಂದ ಸುತ್ತುವರಿದ ಬಿಳಿಗಿರಿರಂಗ ಬೆಟ್ಟಗಳ ಮದ್ಯೆ ನೆಲೆಗೊಂಡಿರುವ ಭಗವಾನ್ ರಂಗನಾಥ ಅಥವಾ ವೆಂಕಟೇಶ ದೇವರ ಪ್ರಸಿದ್ಧ ದೇವಾಲಯವಾಗಿದೆ. ಈ ಬೆಟ್ಟವು ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಗೆ ಸೇರಿದೆ. ಭಗವಾನ್ ರಂಗನಾಥನನ್ನು ನಿಂತಿರುವ ಭಂಗಿಯಲ್ಲಿ ಚಿತ್ರಿಸಿದ ದೇಶದ ಏಕೈಕ ದೇವಾಲಯವಾಗಿದೆ.

ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯವು ಬೆಂಗಳೂರಿನಿಂದ 175 ಕಿ.ಮೀ ಮತ್ತು ಮೈಸೂರಿನಿಂದ ಸುಮಾರು 84 ಕಿ.ಮೀ ದೂರದಲ್ಲಿದೆ. ಹಾಗೂ ಚಾಮರಾಜನಗರದಿಂದ 44 ಕಿ.ಮೀ ದೂರದಲ್ಲಿದೆ .

ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನವು ‘ಬಿಳಿ ಬಂಡೆಯ’ ಮೇಲೆ ನೆಲೆಗೊಂಡಿದೆ. ಇದು ಬೆಟ್ಟಕ್ಕೆ ಬಿಳಿಗಿರಿ ಹೆಸರನ್ನು ನೀಡಿದೆ. ದೇವತೆಯ ಸ್ಥಳೀಯ ರೂಪವನ್ನು ಬಿಳಿಗಿರಿ ರಂಗ ಎಂದು ಕರೆಯಲಾಗುತ್ತದೆ ಮತ್ತು ವಿಶಿಷ್ಟವಾಗಿ ನಿಂತಿರುವ ಬಂಗಿಯಲ್ಲಿರುವ ಮೂರ್ತಿಯ ವಿಗ್ರಹ ವಾಗಿದೆ. ಇಲ್ಲಿ 5 ಅಡಿ ಎತ್ತರ ಇರುವ ಮೂಲ ದೇವರನ್ನು ಬ್ರಹ್ಮರ್ಷಿಗಳಾದ ವಾಸಿಷ್ಠರೇ ಪ್ರತಿಷ್ಠಾಪಿಸಿದರು ಎಂದು ಸ್ಥಳಪುರಾಣ ಹೇಳುತ್ತದೆ. ನವರಂಗದ ಬಲಭಾಗದಲ್ಲಿರುವ ಮೂರು ಗೂಡುಗಳಲ್ಲಿ ಲೋಹದಿಂದ ನಿರ್ಮಿಸಿದ ರಂಗನಾಥ, ಹನುಮಂತ ಮತ್ತು ಮಣವಾಳ ಮಹಾಮುನಿಯ ಮೂರ್ತಿಗಳಿವೆ. ಪಕ್ಕದಲ್ಲೇ ಅಲಮೇಲು ಮಂಗಮ್ಮ, ದೇವಿ ಸನ್ನಿಧಿ ಕೂಡ ಇದೆ. ನವರಂಗದ ಎಡಭಾಗದಲ್ಲಿರುವ ಗೂಡುಗಳಲ್ಲಿ ರಾಮಾನುಜಾಚಾರ್ಯ, ನಮ್ಮಾಳ್ವಾರ್ ಮೂರ್ತಿಗಳಿವೆ. ವೇದಾಂತಾಚಾರ್ಯರ ಮೂರ್ತಿಯನ್ನೂ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಹಿಂದಿನ ಮೈಸೂರು ಸಂಸ್ಥಾನದ ಒಡೆಯರ್ ಕಾಲದ ಪೂರ್ಣಯ್ಯ ದೇವರಿಗೆ ‘ದತ್ತಿ’ ಯ ರೂಪದಲ್ಲಿ ಈ ಪ್ರದೇಶವನ್ನು ನೀಡಲಾಯಿತು.

ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯವು ಸಂಪೂರ್ಣವಾಗಿ ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾದ ಇದು 500 ವರ್ಷಗಳ ಇತಿಹಾಸವನ್ನು ಹೊಂದಿರುವ ಐತಿಹಾಸಿಕ ದೇವಾಲಯವಾಗಿದೆ. ದೇವಾಲಯವನ್ನು ತಲುಪಲು ನೀವು ಸುಮಾರು 150 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ . ರಂಗನಾಥನ ಮುಖ್ಯ ದೇವಾಲಯದ ಸಮೀಪದಲ್ಲಿ ಮಹಾಲಕ್ಷ್ಮಿ .ಶ್ರೀ ಗಂಗಾಧರೇಶ್ವರ ದೇವಾಲಯ, ಶ್ರೀ ಆಂಜನೇಯಸ್ವಾಮಿ ದೇವಾಲಯ ಮತ್ತು ಶ್ರೀ ಗಜೇಂದ್ರಸ್ವಾಮಿ ದೇವಾಲಯಗಳಂತಹ ಇತರ ದೇವಾಲಯಗಳಿವೆ. ಈ ರೂಪವು ಶ್ರೀ ವೈಷ್ಣವ ಸಮುದಾಯಕ್ಕೆ ನಿರ್ದಿಷ್ಟ ಪ್ರಾಮುಖ್ಯತೆಯನ್ನು ಹೊಂದಿದೆ. ಸಂಸ್ಕೃತದಲ್ಲಿ ಅವರ ಹೆಸರಿನ ಅರ್ಥ “ಸಭೆಯ ಸ್ಥಳದ ನಾಯಕ”, ರಂಗ (ಸ್ಥಳ) ಮತ್ತು ನಾಥ (ಪ್ರಭು ಅಥವಾ ನಾಯಕ) ಎಂಬ ಎರಡು ಸಂಸ್ಕೃತ ಪದಗಳಿಂದ ರಚಿಸಲಾಗಿದೆ.

ಏಪ್ರಿಲ್ ತಿಂಗಳಿನಲ್ಲಿ “ವೈಶಾಖ” ಸಮಯದಲ್ಲಿ ನಡೆಯುವ ದೇವತೆಯ ಉತ್ಸವವು ಈ ಪ್ರದೇಶದಲ್ಲಿ ಪ್ರಸಿದ್ಧವಾಗಿದೆ ಮತ್ತು ಇತರ ಸ್ಥಳಗಳಿಂದ ಹಲವಾರು ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಸೋಲಿಗ ಆದಿವಾಸಿಗಳು ರಥೋತ್ಸವದ ಸಮಯದಲ್ಲಿ ಮತ್ತು ದೇವಾಲಯದ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಾರೆ. ಸ್ಥಳೀಯ ಬುಡಕಟ್ಟು ಜನಾಂಗದವರು ಎರಡು ವರ್ಷಗಳಿಗೊಮ್ಮೆ ಶ್ರೀ ರಂಗನಾಥಸ್ವಾಮಿಗೆ 01 ಅಡಿ ಮತ್ತು 9 ಇಂಚು ಅಳತೆಯ ದೊಡ್ಡ ಚಪ್ಪಲಿಯನ್ನು ಅರ್ಪಿಸುತ್ತಾರೆ.

ಭೇಟಿ ನೀಡಿ
ಯಳಂದೂರು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಚಾಮರಾಜನಗರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section