ಬೆಳಗಾವಿ ಕೋಟೆ

ಬೆಳಗಾವಿ ಕೋಟೆಯು ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಹೃದಯ ಭಾಗದಲ್ಲಿ ನೆಲೆಗೊಂಡಿರುವ ಐತಿಹಾಸಿಕ ಕೋಟೆಯಾಗಿದೆ. ಕ್ರಿಸ್ತ ಶಕ 1204ರಲ್ಲಿ ರಟ್ಟ ರಾಜವಂಶದ ಮಿತ್ರನಾಗಿದ್ದ ಬಿಚಿ ರಾಜ, ಅಂದರೆ ಜಯ ರಾಯ, ಇದನ್ನು ಪ್ರಾರಂಭಿಸಿದರು. ನಂತರದ ಶತಮಾನಗಳಲ್ಲಿ ಈ ಪ್ರದೇಶವನ್ನು ಆಳಿದ ವಿವಿಧ ರಾಜವಂಶಗಳ ಆಡಳಿತಗಾರರು ಕೋಟೆಗೆ ಅನೇಕ ನವೀಕರಣಗಳು ಮತ್ತು ವಿಸ್ತರಣೆಗಳನ್ನು ಮಾಡಿದ್ದಾರೆ. ಕೋಟೆಯ ಆವರಣದಲ್ಲಿ ಹಿಂದೂ ದೇವಾಲಯಗಳು, ಮುಸ್ಲಿಂ ಮಸೀದಿಗಳು, ಜೈನ ಬಸದಿಗಳು ಹಾಗೂ ರಾಮಕೃಷ್ಣ ಆಶ್ರಮವಿದೆ.

ಈ ಕೋಟೆಯು ಬೆಂಗಳೂರು ನಿಂದ 504 ಕಿ.ಮೀ ದೂರದಲ್ಲಿದೆ ಮತ್ತು ಬೆಳಗಾವಿಯಿಂದ 02 ಕಿ.ಮೀ ದೂರದಲ್ಲಿದೆ. ಹಾಗೂ ಬೆಳಗಾವಿ ರೈಲ್ವೆ ನಿಲ್ದಾಣದಿಂದ 2.5 ಕಿ.ಮೀ ದೂರದಲ್ಲಿದೆ.

ಇತಿಹಾಸ

ಬೆಳಗಾವಿ ಕೋಟೆಯ ಇತಿಹಾಸವನ್ನು ರಟ್ಟ ರಾಜವಂಶದ ಕಾಲಕ್ಕೆ ಕೊಂಡೊಯ್ಯಬಹುದು. ರಟ್ಟರು ರಾಷ್ಠ್ರಕೂಟ ವಂಶದವರ ವಂಶಸ್ಥರಾಗಿದ್ದು, ಮೊದಲು ಸೌಂದಟ್ಟಿಯಲ್ಲಿ ಆಳ್ವಿಕೆ ನಡೆಸಿದರು. ನಂತರ ತಮ್ಮ ರಾಜಧಾನಿಯನ್ನು ಬೆಳಗಾವಿಗೆ ಸ್ಥಳಾಂತರಿಸಿದರು. ಆ ಬಳಿಕ ಈ ಕೋಟೆ ವಿಜಯನಗರ ಸಾಮ್ರಾಜ್ಯ, ಬೀಜಾಪುರದ ಸುಲ್ತಾನರು (ಬಹಮನಿಗಳು), ಮರಾಠರು (ಛತ್ರಪತಿ ಶಿವಾಜಿ ಮಹಾರಾಜರು) ಹಾಗೂ ಕೊನೆಗೆ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. ರಟ್ಟರಿಗಿಂತ ಮುಂಚೆ ಶಾತವಾಹನರು, ಚಾಲುಕ್ಯರು ಮತ್ತು ಗೋವಾದ ಕದಂಬರು ಈ ಪ್ರದೇಶವನ್ನು ಆಳಿದ್ದರು.

ಬೆಳಗಾವಿ ಕೋಟೆಯನ್ನು ರಟ್ಟ ವಂಶದ ಅಧಿಕಾರಿಯಾಗಿದ್ದ ಬಿಚಿರಾಜ ಕ್ರಿ.ಶ. 1204ರಲ್ಲಿ ನಿರ್ಮಿಸಿದರು. ಕೋಟೆಯ ಸುತ್ತ ಬೆಳೆದ ಬೆಳಗಾವಿ ನಗರವು ಕ್ರಿ.ಶ. 1210 ರಿಂದ 1250ರವರೆಗೆ ರಟ್ಟರ ರಾಜಧಾನಿಯಾಗಿ ಕಾರ್ಯನಿರ್ವಹಿಸಿತು. ನಂತರ ರಟ್ಟರು ದೇವಗಿರಿಯ ಯಶವಾಡರ ಕೈಗೆ ಸೋತು, ಕೆಲವು ಕಾಲ ಕೋಟೆ ಅವರ ನಿಯಂತ್ರಣದಲ್ಲಿತ್ತು. 14ನೇ ಶತಮಾನದ ಆರಂಭದಲ್ಲಿ ದೆಹಲಿಯ ಖಿಲ್ಜಿಗಳು ಆಕ್ರಮಣ ಮಾಡಿ ಯಾದವರು ಮತ್ತು ಹೊಯ್ಸಳರ ಶಕ್ತಿಯನ್ನು ಕುಗ್ಗಿಸಿದರು. ಆದರೆ ಶಕ್ತಿಶಾಲಿ ಆಡಳಿತವನ್ನು ಸ್ಥಾಪಿಸಲು ವಿಫಲರಾದರು. ಈ ಶೂನ್ಯವನ್ನು 1336ರಲ್ಲಿ ವಿಜಯನಗರ ಸಾಮ್ರಾಜ್ಯ ತುಂಬಿತು.

ಕ್ರಿ.ಶ. 1474ರಲ್ಲಿ ಬಿದರ್‌ನ ಬಹಮನಿ ಸಾಮ್ರಾಜ್ಯದ ವಜೀರ್ ಮಹಮೂದ್ ಗವಾನ್ ಬೆಳಗಾವಿ ಕೋಟೆಯನ್ನು ಜಯಿಸಿದರು. ಕ್ರಿ.ಶ. 1518ರಲ್ಲಿ ಬಹಮನಿ ಸಾಮ್ರಾಜ್ಯವು ಐದು ಭಾಗಗಳಾಗಿ ವಿಭಜನೆಯಾದಾಗ, ಬೆಳಗಾವಿ ಕೋಟೆ ಬೀಜಾಪುರದ ಆದಿಲ್ಶಾಹಿ ಸಾಮ್ರಾಜ್ಯದ ಅಧೀನಕ್ಕೆ ಸೇರಿತು. ಆದಿಲ್ಶಾಹಿ ವಂಶದ ಇಸ್ಮಾಯಿಲ್ ಆದಿಲ್ಶಾಹ ಪರ್ಷಿಯಾದ ಲಾರ್ ಪ್ರಾಂತ್ಯದ ಅಸಾದ್ ಖಾನ್ ಲಾರಿ ಅವರ ಸಹಾಯದಿಂದ ಕೋಟೆಯನ್ನು ಬಲಪಡಿಸಿದರು. ಇಂದಿಗೂ ಇರುವ ಅನೇಕ ಕಟ್ಟಡಗಳು ಕ್ರಿ.ಶ. 1519ರಲ್ಲಿ ನಿರ್ಮಿಸಲಾದವು.

ಬೆಳಗಾವಿಯಲ್ಲಿ ಆದಿಲ್ಶಾಹರ ಆಡಳಿತ ಇಸ್ಮಾಯಿಲ್ ಆದಿಲ್ಶಾಹರಿಂದ ಆರಂಭವಾಯಿತು. ಅಸಾದ್ ಖಾನ್ ಲಾರಿ ಕೋಟೆಯ ಯುದ್ಧದಲ್ಲಿ ನೆರವಾಗಿ, ಕ್ರಿ.ಶ. 1511ರಲ್ಲಿ ಬೆಳಗಾವಿಯನ್ನು ತನ್ನ ಜಾಗೀರ್ ಆಗಿ ಪಡೆದರು. ಕ್ರಿ.ಶ. 1519ರಲ್ಲಿ ಅವರು ಕೋಟೆಯೊಳಗೆ ಸಫಾ ಮಸೀದಿ ನಿರ್ಮಿಸಿದರು.

ಕ್ರಿ.ಶ. 1686ರಲ್ಲಿ ಮುಘಲ್ ಚಕ್ರವರ್ತಿ ಔರಂಗಜೇಬ್ ಬೀಜಾಪುರವನ್ನು ಸೋಲಿಸಿ ಬೆಳಗಾವಿಯನ್ನು ತನ್ನ ಆಳ್ವಿಕೆಗೆ ಸೇರಿಸಿಕೊಂಡರು. ಆದರೆ ಔರಂಗಜೇಬರ ಸಾವಿನ (1707) ನಂತರ ಮುಘಲ್ ಸಾಮ್ರಾಜ್ಯದ ಹಿಡಿತ ಕುಂದಿತು. ಈ ಸಮಯದಲ್ಲಿ ಮರಾಠರ ಪೇಶ್ವಾಗಳು ಬೆಳಗಾವಿಯನ್ನು ತಮ್ಮ ನಿಯಂತ್ರಣಕ್ಕೆ ಪಡೆದರು. ಕ್ರಿ.ಶ. 1776ರಲ್ಲಿ ಮೈಸೂರುನ ಹೈದರ ಅಲಿ ಈ ಪ್ರದೇಶವನ್ನು ಜಯಿಸಿದರೂ, ಅದು ದೀರ್ಘಕಾಲ ಉಳಿಯಲಿಲ್ಲ. ಪೇಶ್ವಾಗಳು ಬ್ರಿಟಿಷರ ಸಹಾಯದಿಂದ ಹೈದರನನ್ನು ಸೋಲಿಸಿ ಬೆಳಗಾವಿಯನ್ನು ಮರಳಿ ತಮ್ಮ ಆಡಳಿತಕ್ಕೆ ಸೇರಿಸಿಕೊಂಡರು.

ಆದರೆ 1818ರಲ್ಲಿ ಬ್ರಿಟಿಷರು ಪೇಶ್ವಾಗಳ ನಿಯಂತ್ರಣದಲ್ಲಿದ್ದ ಬೆಳಗಾವಿ ಕೋಟೆಯ ಮೇಲೆ ದಾಳಿ ನಡೆಸಿದರು. ಮಾರ್ಚ್ 21ರಿಂದ ಏಪ್ರಿಲ್ 12ರವರೆಗೆ ಕೋಟೆಯನ್ನು ಸುತ್ತುವರಿದು, ಕೊನೆಗೆ ತಮ್ಮ ಹಿಡಿತಕ್ಕೆ ಪಡೆದರು ಮತ್ತು ಪೇಶ್ವಾಗಳ ಆಳ್ವಿಕೆಯನ್ನು ಅಂತ್ಯಗೊಳಿಸಿದರು. ಈ ಯುದ್ಧದಲ್ಲಿ ಕಿತ್ತೂರಿನ ದೇಶಾಯಿ ಶಿವಲಿಂಗ ರಾಜು ಬ್ರಿಟಿಷರಿಗೆ ನೆರವಾದರು. ಪ್ರತಿಫಲವಾಗಿ ಬ್ರಿಟಿಷರು ಬೆಳಗಾವಿ ಕೋಟೆ ಮತ್ತು ಪಟ್ಟಣವನ್ನು ದೇಶಾಯಿಗೆ ಆಡಳಿತ ಮಾಡಲು ಅವಕಾಶ ನೀಡಿದರು.

ಕೋಟೆಯ ಆವರಣದಲ್ಲಿ ಇರುವ ಪ್ರಮುಖ ಸ್ಥಳಗಳು:

ಶ್ರೀ ಮಿಲಿಟರಿ ದುರ್ಗಾ ದೇವಿ ದೇವಸ್ಥಾನ

ಈ ಕೋಟೆಯ ಪ್ರವೇಶದ್ವಾರದ ಬಳಿ ಇರುವ ಈ ದೇವಾಲಯವು ಹಿಂದೂ ದೇವಿ ದುರ್ಗಾ ದೇವಿಗೆ ಸಮರ್ಪಿತವಾಗಿದೆ. ಈ ದೇವಾಲಯವು ವಿಶೇಷವಾಗಿರುವುದು ಏಕೆಂದರೆ ಇದನ್ನು ಭಾರತೀಯ ಸೇನೆ ನಿರ್ವಹಿಸುತ್ತದೆ. ಇದನ್ನು “ಆರ್ಮಿ ದೇವಾಲಯ” ಎಂದೂ ಸಹಕರೆಯಲಾಗುತ್ತದೆ ಮತ್ತು ಅನೇಕರ ಸೇನಾ ಸಿಬ್ಬಂದಿ ಹಾಗೂ ಅವರ ಕುಟುಂಬಗಳು ಇಲ್ಲಿ ಪೂಜೆ ಸಲ್ಲಿಸಲು ಬರುತ್ತಾರೆ.

ಈ ದೇವಾಲಯವು ಬ್ರಿಟಿಷರ ಕಾಲಘಟ್ಟದಲ್ಲಿ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗುತ್ತದೆ. ನಂತರದಲ್ಲಿ ಇದನ್ನು ಭಾರತೀಯ ಸೇನೆ ವಶಕ್ಕೆ ಪಡೆದು ನಿರ್ವಹಣೆ ನಡೆಸಿತು. ಸೇನಾ ಸಿಬ್ಬಂದಿಗೆ ಇದು ಪವಿತ್ರ ಸ್ಥಳವಾಗಿದ್ದು, ಅನೇಕರ ಸೈನಿಕರು ಮತ್ತು ಅವರ ಕುಟುಂಬಗಳು ದೇವಿಯ ಆಶೀರ್ವಾದಕ್ಕಾಗಿ ಇಲ್ಲಿ ಭೇಟಿ ನೀಡುತ್ತಾರೆ.

ಶಿವ ದೇವಾಲಯ

ಈ ಕೋಟೆ ಅವರಣದಲ್ಲಿ ನಿರ್ಮಿಸಿರುವ ಈ ಶಿವ ದೇವಾಲಯ ಪೂರ್ವಾಭಿಮುಖವಾಗಿ ರಟ್ಟ ಅರಸೊತ್ತಿಗೆಯ ಕಾಲಾವಧಿಯಲ್ಲಿ ಕಟ್ಟಲ್ಪಟ್ಟ ಈ ದೇವಾಲಯವು ಶಿಖರ ರಹಿತವಾಗಿದೆ. ನಾಲ್ಕು ಪ್ರವೇಶ ದ್ವಾರಗಳಿರುವ ನವರಂಗ ಮಾತ್ರ ಈಗ ಉಳಿದಿದೆ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ಮೂಲತಃ ಈ ದೇವಾಲಯ ಮೂರು ಗರ್ಭಗೃಹಗಳನ್ನು (ತಿಕೂಟಾಟಲಿ) ಹೊಂದಿತ್ತೆಂದು ಅಳಿದುಳಿದ ಅವಶೇಷಗಳಿಂದ ಅರಿಯಬಹುದಾಗಿದೆ. ಹೊರ ಭಿತ್ತಿ ಅಲಂಕಾರ ರಹಿತವಾಗಿದ್ದು ಬಾಗಿಲವಾಡ ಮಾತ್ರ ಸುಂದರ ಕೆತ್ತನೆಗಳಿಂದ ಕೂಡಿದೆ. ಈ ದೇವಾಲಯದಲ್ಲಿ ಬ್ರಹ್ಮ, ವಿಷ್ಣು ಹಾಗೂ ಶಿವನ ಸುಂದರ ಶಿಲ್ಪಗಳಿವೆ.

ರಾಮಕೃಷ್ಣ ಆಶ್ರಮ

ಈ ಕೋಟೆ ಪ್ರದೇಶದಲ್ಲಿರುವ ರಾಮಕೃಷ್ಣ ಮಿಷನ್ ಆಶ್ರಮವು ಒಂದು ಪ್ರಮುಖ ಹಿಂದೂ ಆಧ್ಯಾತ್ಮಿಕ ಕೇಂದ್ರವಾಗಿದೆ. ಈ ಆಶ್ರಮವು ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಸ್ವಾಮಿ ವಿವೇಕಾನಂದರು 1892ರ ಅಕ್ಟೋಬರ್ 19ರಿಂದ 27ರವರೆಗೆ (12 ದಿನಗಳ ಪ್ರವಾಸದೊಳಗೆ 9 ದಿನಗಳು) ಬೆಳಗಾವಿಯಲ್ಲಿ ತಂಗಿದ್ದ ಮನೆಯನ್ನು ಆಧರಿಸಿ ಇದನ್ನು ನಿರ್ಮಿಸಲಾಗಿದೆ.

ಆಶ್ರಮದ ಒಳಗೆ ಸ್ವಾಮಿ ವಿವೇಕಾನಂದರ ಜೀವನದ ಘಟನೆಗಳನ್ನು ಪ್ರತಿಬಿಂಬಿಸುವ ಅಲಂಕಾರಿಕ ಚಿತ್ರಗಳು ಅತಿ ಮನೋಹರವಾಗಿವೆ. ವಿಶಾಲ ಸಂಕೀರ್ಣವಿರುವ ಈ ಆಶ್ರಮವು ಸಣ್ಣ ಪ್ರದರ್ಶನ ಕೊಠಡಿ ಮತ್ತು ಧ್ಯಾನ ಮಂದಿರವನ್ನು ಒಳಗೊಂಡಿದೆ. ಇಲ್ಲಿನ ಪುಸ್ತಕ ಮಳಿಗೆಯಲ್ಲಿ ರಾಮಕೃಷ್ಣ ಪರಮಹಂಸರ ಹಾಗೂ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕತೆ ಮತ್ತು ತತ್ವಶಾಸ್ತ್ರ ಸಂಬಂಧಿಸಿದ ಅನೇಕ ಗ್ರಂಥಗಳು ಲಭ್ಯವಿವೆ.

ಆಶ್ರಮವು ಪ್ರತಿದಿನ ಬೆಳಿಗ್ಗೆ 7:00 AM ಗಂಟೆಯಿಂದ ಸಂಜೆ 7:00 PM ಗಂಟೆಯವರೆಗೆ ಸಾರ್ವಜನಿಕರಿಗೆ ತೆರೆಯಲ್ಪಟ್ಟಿರುತ್ತದೆ.

ಸಫಾ ಮಸಿದಿ

ಬಿಜಾಪುರ ಆದಿಲ್‌ ಷಾಹಿಗಳ ಸುಲ್ತಾನನಾಗಿದ್ದ ಅಸದ್ ಖಾನನು ಸಾಫಾ ಮಸೀದಿಯನ್ನು ಕ್ರಿ.ಶ. 1518 ರಲ್ಲಿ ಕಟ್ಟಿಸಿದನು.

ಪೂರ್ವಾಭಿಮುಖವಾದ ಈ ಮಸೀದಿಗೆ ಕಮಾನಿನಾಕಾರದ ಮೂರು ಪ್ರವೇಶದ್ವಾರಗಳಿವೆ. ವಿಶಾಲವಾದ ಕೋಟೆಯ ಆವರಣದಲ್ಲಿ ನಿರ್ಮಿಸಲಾಗಿರುವ ಇದು ಮೊಘಲ್ ಹಾಗೂ ದಖನ್ ವಾಸ್ತು ಶೈಲಿಯ ಲಕ್ಷಣಗಳನ್ನೊಳಗೊಂಡಿದೆ. ಮಸೀದಿಯ ಮುಂಭಾಗದ ಮೇಲ್ಬಾಗದಲ್ಲಿ ಎರಡು ಎತ್ತರವಾದ ಮಿನಾರಗಳನ್ನು ಹಾಗೂ ವಿಶಾಲವಾದ ಕಟ್ಟಿಗೆ ಬಾಗಿಲುಗಳನ್ನು ಹೊಂದಿದೆ. ಈ ಬಾಗಿಲಗಳು ಹೂ ಬಳ್ಳಿಗಳ ಅಲಂಕಾರ ಹೊಂದಿದೆ.

ಈ ಮಸೀದಿಗೆ ಮೇಲ್ಗಡೆ ಕೈಸಾಲೆ ಇದ್ದು ಇದನ್ನು ತಲುಪಲು ಮೆಟ್ಟಿಲುಗಳಿವೆ. ಮಸೀದಿಯ ಒಳಗಡೆ ಪ್ರಾರ್ಥನೆಗೆ ವಿಶಾಲವಾದ ಸ್ಥಳವಿದೆ. ಇಲ್ಲಿ ಅರೆಗಂಬ, ಕಮಾನುಗಳು ಮತ್ತು ಪರ್ಶಿಯನ್ ಭಾಷೆಯ ಶಾಸನಗಳಿವೆ. ಈ ಮಸೀದಿಯ ಒಳಗಡೆ ದೇವಾಲಯದ ನುಣುಪಾದ ಹಾಗೂ ದುಂಡಾದ ಕಂಬಗಳ ಅವಶೇಷಗಳಿದ್ದು ಅವು ಹಳಗನ್ನಡದ ಶಿಲಾ ಶಾಸನಗಳನ್ನು (ಕಿ.ಶ.1000 ಹನ1261) ಹೊಂದಿವೆ, ಇಲ್ಲಿಯ ಪರ್ಶಿಯನ್ ಶಾಸನ ಕುರಾನ್ ಉಲ್ಲೇಖನಗಳನ್ನು ತಿಳಿಸುತ್ತದೆ.

ಪ್ರಾಚೀನ ಮಸೀದಿ

ಕೋಟೆಯ ಒಳಗೆ ಹಳೆ ಕಾಲದ ಮಸೀದಿ ಇದ್ದು , ಈ ಮಸೀದಿಯು ಪ್ರಸ್ತುತ ಪಾಳು ಬಿದ್ದಿದೆ.

ಕಮಲಾ ಬಸದಿ

ಈ ಬಸದಿಯನ್ನು ರಟ್ಟ ರಾಜವಂಶದ ಕಾರ್ತವೀರ್ಯ IV ರ ಆಸ್ಥಾನದಲ್ಲಿ ಜೈನ ಸನ್ಯಾಸಿ ಸುಭಚಂದ್ರಭಟ್ಟಾರಕದೇವರ ಮಾರ್ಗದರ್ಶನದಲ್ಲಿ ಅಧಿಕಾರಿಯಾಗಿದ್ದ ಬಿರ್ಚಿರಾಜ, (ಜಯ ರಾಯ ಎಂದೂ ಕರೆಯಲ್ಪಡುವ ಬಿರ್ಚಿರಾಜ) ನಿರ್ಮಿಸಿದನು.

ಈ ಬಸದಿಗೆ ಕಮಲ ಬಸದಿ ಎಂದು ಬಂದಿರುವುದು ಈ ಬಸದಿಯ ಮಧ್ಯದ ಛಾವಣಿಯ ಗುಮ್ಮಟದಿಂದ ವಿಸ್ತರಿಸಿರುವ ಕಮಲದ ಕೆತ್ತನೆಗಳಿಂದ ಕಮಲ ಬಸದಿ ಎಂದು ಹೆಸರು ಬಂದಿದೆ. ಕಮಲವು 72 ದಳಗಳನ್ನು ಹೊಂದಿದ್ದು, ಭೂತ, ವರ್ತಮಾನ ಮತ್ತು ಭವಿಷ್ಯದ 24 ತೀರ್ಥಂಕರರನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ.

ಈ ದೇವಾಲಯದ ಗೋಡೆಗಳು ಸಂಕೀರ್ಣವಾದ ವಿನ್ಯಾಸಗಳು, ಗಡಿಗಳು ಮತ್ತು ಶಿಲ್ಪಗಳಿಂದ ಕೆತ್ತಲ್ಪಟ್ಟಿವೆ. ದೇವಾಲಯದ ಗೋಡೆಯು ಪ್ರತಿ ಆವರಣದ ಕೊನೆಯಲ್ಲಿ ನಾಗರಹಾವಿನ ಕೆತ್ತನೆಯೊಂದಿಗೆ ಕಂಬಗಳಿಂದ ಬೆಂಬಲಿತವಾಗಿದೆ. ಕಂಬಗಳನ್ನು ಅಲಂಕಾರಗಳಿಂದ ಚೆನ್ನಾಗಿ ಕೆತ್ತಲಾಗಿದೆ ಮತ್ತು ಅಂದವಾಗಿ ಹೊಳಪು ಮಾಡಲಾಗಿದೆ. ದೇವಾಲಯವು ಸಮೃದ್ಧವಾಗಿ ಕೆತ್ತಿದ ದ್ವಾರವನ್ನು ಹೊಂದಿದೆ. ಒಟ್ಟು ಐದು ಸಣ್ಣ ಕೋಶಗಳಿವೆ, ಇದರಲ್ಲಿ ತೀರ್ಥಂಕರರ ವಿಗ್ರಹಗಳಿವೆ. ಈ ಕೋಶಗಳ ನಡುವೆ ನಾಲ್ಕು ಯಕ್ಷ ಮತ್ತು ಯಕ್ಷಿಯರು ಸಣ್ಣ ಮೇಲಾವರಣದ ಅಡಿಯಲ್ಲಿ ನಿಂತಿರುವ ಭಂಗಿಯಲ್ಲಿದ್ದಾರೆ. ಗರ್ಭಗೃಹದ ಒಳಗಿನ ಕಂಬಗಳು ಚೌಕಾಕಾರ ಮತ್ತು ಬೃಹತ್ ಪ್ರಮಾಣದಲ್ಲಿವೆ. ಬಾಗಿಲಿನ ಪ್ರತಿ ಬದಿಯಲ್ಲಿ, ಜೈನ ದೇವತೆಗಳ ಕೆತ್ತನೆಗಳನ್ನು ಹೊಂದಿರುವ ಗೋಡೆಯಲ್ಲಿ ಗೂಡುಗಳಿವೆ.

ದೇವಾಲಯದ ಮುಖಮಂಟಪವನ್ನು ವಾಸ್ತುಶಿಲ್ಪದ ಮೇರುಕೃತಿ ಎಂದು ಪರಿಗಣಿಸಲಾಗಿದೆ. ದೇವಾಲಯದ ಮಧ್ಯದ ಛಾವಣಿಯಲ್ಲಿ ಮಧ್ಯಭಾಗದಲ್ಲಿ ಒಂದು ಪೆಂಡೆಂಟ್ ಇದ್ದು, ಕಂಬಗಳ ಪ್ರತಿ ಮೂಲೆಯಲ್ಲಿ ಅಷ್ಟ-ದಿಕ್ಪಾಲಕರ ಕೆತ್ತನೆಗಳು ಅಲಂಕರಿಸಿರುವವು. ಅಲ್ಲದೆ ಎಂಟು ಮಕರ ಆವರಣಗಳು ಹಾಗೂ ಗುಮ್ಮಟದ ಕೆಳಗಿನ ಅಷ್ಟಭುಜಾಕೃತಿಯ ಭಾಗದಲ್ಲಿ ಪದ್ಮಾಸನ ಮತ್ತು ಕಾಯೋತ್ಸರ್ಗ ಭಂಗಿಯ ತೀರ್ಥಂಕರರ ಮೂರ್ತಿಗಳು ಕೆತ್ತಲಾಗಿದೆ.

ದೇವಾಲಯದ ಮೂಲದೇವತೆ ನೇಮಿನಾಥನ ಕಪ್ಪು ಬಣ್ಣದ ವಿಗ್ರಹವಾಗಿದೆ. ಜೊತೆಗೆ, ಪದ್ಮಾಸನ ಭಂಗಿಯಲ್ಲಿರುವ ಋಷಭನಾಥ, ಕಾಯೋತ್ಸರ್ಗ ಭಂಗಿಯಲ್ಲಿರುವ ಸುಮತಿನಾಥ ಹಾಗೂ ತಲೆಯ ಮೇಲೆ ಏಳು ತಲೆಯ ಸರ್ಪವನ್ನು ಧರಿಸಿರುವ ಪಾರ್ಶ್ವನಾಥರ ವಿಗ್ರಹಗಳೂ ಇಲ್ಲಿವೆ.

ಇದೇ ರೀತಿ, ದೇವಾಲಯವು ಒಂಬತ್ತು ತೀರ್ಥಂಕರರನ್ನು ಪ್ರತಿನಿಧಿಸುವ ನವಗ್ರಹದ ಏಕಶಿಲೆಯ ವಿಗ್ರಹವನ್ನೂ ಹೊಂದಿದೆ.

ದೇವಾಲಯದ ಮೂಲ ಬಾಗಿಲಿನಿಂದ ಒಳಗೆ ಪ್ರವೇಶಿಸಿದಾಗ ಕಾಣುವ ಸಭಾಂಗಣದ ದ್ವಾರವು ಸಮೃದ್ಧವಾಗಿ ಕೆತ್ತಲ್ಪಟ್ಟಿದ್ದು, ಅದರ ಮಧ್ಯದಲ್ಲಿ ಕುಳಿತಿರುವ ಜಿನನ ಶಿಲ್ಪ ಅಲಂಕರಿಸಲಾಗಿದೆ.

ಶ್ರೀ ಚಿಕ್ಕ ಜೈನ ಬಸದಿ

ಕಮಲ ಬಸದಿಯ ಪಕ್ಕದಲ್ಲೇ, ಮತ್ತೊಂದು ಪಾಳುಬಿದ್ದ ಜೈನ ದೇವಾಲಯ ಚಿಕ್ಕಿ ಬಸದಿ ಇದೆ. ಇದು ಶ್ರೀಮಂತ ವಾಸ್ತುಶಿಲ್ಪವನ್ನು ಹೊಂದಿದೆ. ಪ್ರಸ್ತುತ ಈ ಬಸದಿಯಲ್ಲಿ ಅವಶೇಷಗಳಲ್ಲಿದ್ದರೂ, ಇದನ್ನು ಜೈನ ವಾಸ್ತುಶಿಲ್ಪದ ಗಮನಾರ್ಹ ತುಣುಕು ಎಂದು ಪರಿಗಣಿಸಲಾಗಿದೆ. ಇದರ ಮುಂಭಾಗವು ಸಂಕೀರ್ಣವಾಗಿ ಕೆತ್ತಿದ ನೃತ್ಯ ಪ್ರತಿಮೆಗಳು, ಸಂಗೀತಗಾರರು ಮತ್ತು ಅಲಂಕೃತ ಹೂವುಗಳಿಂದ ಅಲಂಕರಿಸಲ್ಪಟ್ಟ ಅಲಂಕಾರದ ಸಾಲುಗಳ ಸೊಗಸಾದ ಪ್ರದರ್ಶನವನ್ನು ಪ್ರದರ್ಶಿಸುತ್ತದೆ.