ಸಾವನದುರ್ಗ ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ, ಏಷ್ಯಾದಲ್ಲೇ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟವಾಗಿದೆ. ಈ ಬೆಟ್ಟವು ಸಮುದ್ರಮಟ್ಟದಿಂದ 1,226 ಮೀಟರ್ ಎತ್ತರದಲ್ಲಿದ್ದು, ಡೆಕ್ಕನ್ ಪ್ರಸ್ಥಭೂಮಿಯ ಒಂದು ಭಾಗವಾಗಿದೆ.
ಈ ಬೆಟ್ಟವು ಬೆಂಗಳೂರಿನಿಂದ 46 ಕಿ.ಮೀ ಹಾಗೂ ಬೆಂಗಳೂರು ದಕ್ಷಿಣ (ರಾಮನಗರ)ದಿಂದ 27 ಕಿ.ಮೀ ದೂರದಲ್ಲಿದೆ. ಚನ್ನಪಟ್ಟಣ ನಗರದಿಂದ ಇದು ಕೇವಲ 10 ಕಿ.ಮೀ ದೂರದಲ್ಲಿದೆ.
ಬೆಟ್ಟದ ಬುಡದಲ್ಲಿ ಸಾವಂದಿ ವೀರಭದ್ರೇಶ್ವರಸ್ವಾಮಿ ಮತ್ತು ನರಸಿಂಹಸ್ವಾಮಿ ದೇವಾಲಯಗಳಿವೆ. ಈ ದೇವಾಲಯಗಳು ಕ್ರಿ.ಶ. 1340ರ ಹಿಂದಿನವುಗಳಾಗಿದ್ದು, ಹೊಯ್ಸಳ ದೊರೆಗಳಿಂದ ನಿರ್ಮಿಸಲ್ಪಟ್ಟಿವೆ ಎಂದು ನಂಬಲಾಗಿದೆ.
ಸಾವನದುರ್ಗ ಬೆಟ್ಟದ ಚಾರಣಕ್ಕಾಗಿ ಅರಣ್ಯ ಇಲಾಖೆ ಆರಂಭಿಸಿದ aranyavihaara.com ಮೂಲಕ ನೋಂದಣಿ ಮಾಡಿಕೊಳ್ಳಬಹುದು. ವಾರದ ದಿನಗಳಲ್ಲಿ ಒಬ್ಬ ವ್ಯಕ್ತಿಗೆ ರೂ. 300/- ಹಾಗೂ ವಾರಾಂತ್ಯ ಮತ್ತು ಇತರೆ ರಜೆ ದಿನಗಳಲ್ಲಿ ರೂ. 400/- ಟಿಕೆಟ್ ದರ ನಿಗದಿಪಡಿಸಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಲಾ ರೂ. 150/- ಹಾಗೂ ರಜೆ ದಿನಗಳಲ್ಲಿ ರೂ. 200/- ನಿಗದಿಪಡಿಸಲಾಗಿದೆ.
ಸಾವನದುರ್ಗ ಬೆಟ್ಟ ಚಾರಣಕ್ಕೆ ಆನ್‌ಲೈನ್ ಮೂಲಕ ನೋಂದಣಿ ಮಾಡಲು ಕೆಳಗಿನ ಲಿಂಕ್ ಅನ್ನು ಉಪಯೋಗಿಸಿ.
ಸಾವನದುರ್ಗ ಹೆಸರಿನ ಉಗಮ
ಈ ಸ್ಥಳದ ಮೊದಲ ಉಲ್ಲೇಖವು ಕ್ರಿ.ಶ. 1340 ರ ಹಿಂದಿನದು. ಈ ದಾಖಲೆ ಮೋಡಬಾಳದ ಹೊಯ್ಸಳ ಬಲ್ಲಾಳ -III ರದ್ದಾಗಿದ್ದು, ಅಲ್ಲಿ ಈ ಸ್ಥಳವನ್ನು “ಸಾವಂಡಿ” ಎಂದು ಕರೆಯಲಾಗಿದೆ. ನಂತರದ ದಾಖಲೆಗಳಲ್ಲಿಯೂ ಈ ಹೆಸರನ್ನು ಉಲ್ಲೇಖಿಸಲಾಗಿದೆ. “ಸಾವನದುರ್ಗ” ಎಂಬ ಹೆಸರು, ಮಾಗಡಿಯ ಅಚ್ಯುತರಾಯನ ಆಳ್ವಿಕೆಯಲ್ಲಿ ರಾಜ್ಯಪಾಲನಾಗಿದ್ದ ಸಾವಂತರಾಯನಿಂದ ಬಂದ “ಸಾವಂತದುರ್ಗ” ಎಂಬ ನಾಮದಿಂದ ಹುಟ್ಟಿಕೊಂಡಿರಬಹುದು ಎಂಬ ಅಭಿಪ್ರಾಯವಿದೆ.
ಕ್ರಿ.ಶ. 1638ರಲ್ಲಿ ಕೆಂಪೇಗೌಡನು ತನ್ನ ರಾಜಧಾನಿಯನ್ನು ಬೆಂಗಳೂರಿನಿಂದ ಸಾವನದುರ್ಗಕ್ಕೆ ಸ್ಥಳಾಂತರಿಸಿ ಅದನ್ನು ಬಲಪಡಿಸಿದನು. ಕ್ರಿ.ಶ. 1728ರವರೆಗೆ ಇದು ಕೆಂಪೇಗೌಡನ ಉತ್ತರಾಧಿಕಾರಿಗಳ ಆಳ್ವಿಕೆಯಲ್ಲಿ ಇತ್ತು. ಕ್ರಿ.ಶ. 1728ರಲ್ಲಿ ದಳವಾಯಿ ದೇವರಾಜನು ಈ ಪ್ರದೇಶವನ್ನು ಆಳುತ್ತಿದ್ದನು. ನಂತರ ಹೈದರ್ ಅಲಿ ಮತ್ತು ಅವನ ಮಗ ಟಿಪ್ಪು ಸುಲ್ತಾನ್ ಸಾವನದುರ್ಗವನ್ನು ವಶಪಡಿಸಿಕೊಂಡರು.
ಟಿಪ್ಪು ಸುಲ್ತಾನನು ಅಪರಾಧಿಗಳನ್ನು ಬೆಟ್ಟದ ತುದಿಯಿಂದ ತಳ್ಳುವ ಮೂಲಕ ಮರಣದಂಡನೆ ವಿಧಿಸುತ್ತಿದ್ದನೆಂದು ಹೇಳಲಾಗುತ್ತದೆ. ಆದ್ದರಿಂದ ಈ ಸ್ಥಳವನ್ನು “ಸಾವಿನ ದುರ್ಗ” ಎಂದು ಕರೆಯಲಾಯಿತು. ನಂತರ ಕ್ರಿ.ಶ. 1791ರಲ್ಲಿ ಲಾರ್ಡ್ ಕಾರ್ನ್‌ವಾಲಿಸ್ ಟಿಪ್ಪು ಸುಲ್ತಾನನಿಂದ ಸಾವನದುರ್ಗವನ್ನು ವಶಪಡಿಸಿಕೊಂಡನು. ಕ್ರಿ.ಶ. 1799ರಲ್ಲಿ ನಡೆದ ನಾಲ್ಕನೇ ಆಂಗ್ಲ–ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನನು ಬ್ರಿಟಿಷರಿಂದ ಕೊಲ್ಲಲ್ಪಟ್ಟನು. ನಂತರದ ವರ್ಷಗಳಲ್ಲಿ ಬ್ರಿಟಿಷರು ಈ ಸ್ಥಳವನ್ನು ಮೈಸೂರು ಆಡಳಿತಗಾರರಿಗೆ ಹಸ್ತಾಂತರಿಸಿದರು. ಭಾರತದ ಸ್ವಾತಂತ್ರ್ಯದ ನಂತರವೂ ಸಾವನದುರ್ಗ ಮತ್ತು ಮಾಗಡಿಯನ್ನು ಅವರು ಮೈಸೂರಿನ ಭಾಗವಾಗಿ ಆಳುತ್ತಿದ್ದರು.
ಭೇಟಿ ನೀಡಿ



