ಮಹ್ಮದ್ ಗವಾನ್ ಮದರಸಾವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನಲ್ಲಿರುವ 15ನೇ ಶತಮಾನದ ಐತಿಹಾಸಿಕ ವಿದ್ಯಾಸಂಸ್ಥೆಯಾಗಿದೆ. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಮಹ್ಮದ್ ಗವಾನ್ ಅವರು ಇದನ್ನು ಕ್ರಿ.ಶ. 1472ರಲ್ಲಿ ನಿರ್ಮಿಸಿದರು. ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾದ ಈ ಮದರಸಾವು ಆ ಕಾಲದಲ್ಲಿ ಬೀದರ್‌ನ ಪ್ರಮುಖ ವಿದ್ಯಾಕೇಂದ್ರಗಳಲ್ಲಿ ಒಂದಾಗಿತ್ತು.
ಮಹಮ್ಮದ್ ಗವಾನ್ ಮದರಸಾದ ದೂರಗಳು
- ಬೆಂಗಳೂರು – 672 ಕಿ.ಮೀ
- ಬೀದರ್ – 4 ಕಿ.ಮೀ
- ಬೀದರ್ ರೈಲ್ವೆ ನಿಲ್ದಾಣ – 3 ಕಿ.ಮೀ
- ಬೀದರ್ ವಿಮಾನ ನಿಲ್ದಾಣ – 5 ಕಿ.ಮೀ
ಕೋಟೆಯ ಇತಿಹಾಸ
ಮಹ್ಮದ್ ಗವಾನ್ ಮದರಸಾವು, ಕ್ರಿ.ಶ. 1458ರಿಂದ 1481ರವರೆಗೆ ಬಹಮನಿ ಸಾಮ್ರಾಜ್ಯದ ಪ್ರಧಾನ ಮಂತ್ರಿಯಾಗಿದ್ದ ಪರ್ಷಿಯನ್ ಮೂಲದ ಮಹ್ಮದ್ ಗವಾನ್ ಅವರು ಕ್ರಿ.ಶ. 1472ರಲ್ಲಿ ನಿರ್ಮಿಸಿದ ಐತಿಹಾಸಿಕ ಸ್ಮಾರಕವಾಗಿದೆ. ಮಧ್ಯ ಏಷ್ಯಾದ ಮದರಸಾ ವಾಸ್ತುಶೈಲಿಯ ಪ್ರಭಾವವನ್ನು ಹೊಂದಿರುವ ಈ ಮದರಸಾವು ಭಾರತದಲ್ಲೇ ವಿಶಿಷ್ಟವಾಗಿದೆ. ಮೂರು ಮಹಡಿಗಳಲ್ಲಿ ನಿರ್ಮಿಸಲಾದ ಈ ಕಟ್ಟಡವು ಎತ್ತರದ ಪೀಠದ ಮೇಲೆ ನಿರ್ಮಾಣಗೊಂಡಿದೆ. ಮದರಸಾದ ಪ್ರವೇಶದ್ವಾರವನ್ನು ತಲುಪಲು ಎರಡು ಕಮಾನುಗಳ ಮೂಲಕ ಮುಖಮಂಟಪವನ್ನು ಪ್ರವೇಶಿಸಬೇಕು. ಅಲ್ಲಿಂದ ಒಳಭಾಗಕ್ಕೆ ಮುಚ್ಚಿದ ಹಾದಿಗಳ ಮೂಲಕ ಹೋಗಬಹುದು.
ಮದರಸಾದ ಪ್ರವೇಶದ್ವಾರದಲ್ಲಿ ಎರಡು ಎತ್ತರದ ಸ್ತಂಭಗೋಪುರಗಳಿದ್ದವು. ಅವುಗಳಲ್ಲಿ ಈಶಾನ್ಯ ದಿಕ್ಕಿನ ಸ್ತಂಭಗೋಪುರ ಮಾತ್ರ ಇಂದಿಗೂ ಉಳಿದಿದೆ. ಮೂರು ಹಂತಗಳನ್ನು ಹೊಂದಿರುವ ಈ ಸ್ತಂಭಗೋಪುರಗಳಲ್ಲಿ ಪರ್ಷಿಯನ್ ಶೈಲಿಯ ಮೊಗಸಾಲೆಗಳು ಹಾಗೂ ಚಾಚುತೊಲೆಗಳನ್ನು ಕಾಣಬಹುದು. ಭಾರತೀಯ ವಾಸ್ತುಶೈಲಿಯಂತೆ ಇವುಗಳಿಗೆ ನೆಲಮಟ್ಟದ ಚಾಚುಪೀಠಗಳ ಆಧಾರವಿಲ್ಲ. ಹಸಿರು, ನೀಲಿ ಮತ್ತು ಬಿಳಿ ಬಣ್ಣದ ಹಾಸುಬಿಲ್ಲೆಗಳಿಂದ ಅಲಂಕರಿಸಲ್ಪಟ್ಟ ಸ್ತಂಭಗೋಪುರಗಳು ಹಾಗೂ ಮುಂಭಾಗದ ಗೋಡೆಗಳು ಮದರಸಾದ ಭವ್ಯತೆಯನ್ನು ಹೆಚ್ಚಿಸಿದ್ದವು. ಇಂದಿಗೂ ಆ ಅಲಂಕಾರಗಳ ಕೆಲವು ಕುರುಹುಗಳನ್ನು ಕಾಣಬಹುದು.
ಒಂದು ಕಾಲದಲ್ಲಿ ಈ ಮದರಸಾವು ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿ ಮತಧರ್ಮಶಾಸ್ತ್ರ, ತತ್ತ್ವಶಾಸ್ತ್ರ, ಖಗೋಳ ವಿಜ್ಞಾನ, ಗಣಿತ, ಅರಬಿ ಮತ್ತು ಪರ್ಷಿಯನ್ ಭಾಷೆಗಳನ್ನು ಬೋಧಿಸಲಾಗುತ್ತಿತ್ತು. ವಿದೇಶಗಳಿಂದ ಬಂದ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸುಮಾರು 1,000 ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅವರಿಗೆ ಉಚಿತ ವಸತಿ, 3,000ಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿದ್ದ ಗ್ರಂಥಾಲಯ, ಮಸೀದಿ, ಉಪನ್ಯಾಸ ಸಭಾಂಗಣಗಳು ಹಾಗೂ ವಸತಿ ಕೊಠಡಿಗಳಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು.
ಕ್ರಿ.ಶ. 1696ರಲ್ಲಿ ಔರಂಗಜೇಬನ ನೇತೃತ್ವದ ಮೊಘಲ್ ಸೇನೆಯು ಮದರಸಾದಲ್ಲಿ ತಂಗಿದ್ದಾಗ ಸಂಭವಿಸಿದ ಆಕಸ್ಮಿಕ ಸ್ಫೋಟದಿಂದ ಕಟ್ಟಡದ ಬಹುಭಾಗಕ್ಕೆ ತೀವ್ರ ಹಾನಿಯಾಯಿತು. ಇಂದಿಗೂ ಮದರಸಾದ ಒಂದು ಭಾಗವು ಪಾಠಶಾಲೆ ಹಾಗೂ ಮಸೀದಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಭೇಟಿ ನೀಡಿ








