ಗುಮ್ಮನಾಯಕನ ಕೋಟೆವು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ವಸಂತಪುರ ಗ್ರಾಮದಲ್ಲಿ ಇರುವ ಐತಿಹಾಸಿಕ ಕೋಟೆಯಾಗಿದೆ. ಒಂದು ಕಾಲದಲ್ಲಿ ಈ ಪ್ರದೇಶವು ಇಮ್ಮಡಿ ಕದಿರಪ್ಪನಾಯಕರ ಆಳ್ವಿಕೆಯಲ್ಲಿ ಪ್ರಮುಖ ಆಡಳಿತ ಕೇಂದ್ರವಾಗಿತ್ತು ಎಂದು ತಿಳಿದುಬರುತ್ತದೆ.
ಕೋಟೆಯ ತಪ್ಪಲಿನಲ್ಲಿ ಶ್ರೀ ಆಂಜನೇಯಸ್ವಾಮಿ ಹಾಗೂ ಶ್ರೀ ಗಣಪತಿ ಅವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಕೋಟೆಯ ಶಿಖರದ ಮಧ್ಯಭಾಗದಲ್ಲಿ ಶ್ರೀ ವೆಂಕಟೇಶ್ವರಸ್ವಾಮಿ ಅವರ ಉದ್ಭವ ಮೂರ್ತಿಯನ್ನು ಹೊಂದಿರುವ ಪ್ರಾಚೀನ ದೇವಾಲಯವಿದ್ದು, ಇದು ಭಕ್ತರು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಧಾರ್ಮಿಕ ತಾಣವಾಗಿದೆ.
ಗುಮ್ಮನಾಯಕನ ಕೋಟೆಯ ದೂರಗಳು
- ಬೆಂಗಳೂರು – 130 ಕಿ.ಮೀ
- ಚಿಕ್ಕಬಳ್ಳಾಪುರ – 70 ಕಿ.ಮೀ
- ಬಾಗೇಪಲ್ಲಿ – 26 ಕಿ.ಮೀ
- ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣ – 70 ಕಿ.ಮೀ
ಇತಿಹಾಸ
ಗುಮ್ಮನಾಯಕನ ಕೋಟೆವು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಹೋಬಳಿಯ ತೊಳಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮನಾಯಕನ ಪಾಳ್ಯದಲ್ಲಿ ಇದೆ. ಇದು ಜಿಲ್ಲೆಯ ಪ್ರಮುಖ ಪಾಳೇಗಾರರ ಮನೆತನಗಳಲ್ಲಿ ಒಂದಾಗಿದ್ದು, ಜಿಲ್ಲೆಯಲ್ಲೇ ಮೊದಲ ಏಳು ಸುತ್ತಿನ ಕೋಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 700 ವರ್ಷಗಳ ಕಾಲ ಈ ಪ್ರದೇಶವನ್ನು ಪಾಳೇಗಾರರು ಆಳಿದರೆಂದು ತಿಳಿದುಬರುತ್ತದೆ.
ಇತಿಹಾಸದ ಪ್ರಕಾರ, ಈ ಪಾಳೇಗಾರರು ಮೂಲತಃ ಇಂದಿನ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲೆ ಪ್ರದೇಶದವರಾಗಿದ್ದರು. ಈ ಕೋಟೆಯ ನಿರ್ಮಾಣವು ಕ್ರಿ.ಶ. 1242ರ ಸುಮಾರಿಗೆ ಆರಂಭಗೊಂಡಿತು ಎಂದು ಹೇಳಲಾಗುತ್ತದೆ. ಇವರ ವಂಶದ ಮೂಲಪುರುಷ ಖಾದ್ರಿಪತಿ ನಾಯಕ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.
ನಂತರ ಲಕ್ಕ ನಾಯಕ ಅವರು ಕ್ರಿ.ಶ. 1364ರಲ್ಲಿ ಬೆಟ್ಟದ ಸುತ್ತಲೂ ಕೋಟೆ ಹಾಗೂ ಬುರುಜುಗಳನ್ನು ನಿರ್ಮಿಸಿ, ತಮ್ಮ ಅಣ್ಣ ಗುಮ್ಮರೆಡ್ಡಿ ನಾಯಕ ಅವರ ಹೆಸರನ್ನು ಊರಿಗೆ ಇಟ್ಟರು. ಪಾತಪಾಳ್ಯದ ಸಮೀಪದ ಕಾಮಸಾನಪಲ್ಲಿ ಗ್ರಾಮದಲ್ಲಿ ವಾಸಿಸುತ್ತಿದ್ದ ಗುಮ್ಮರೆಡ್ಡಿ ನಾಯಕ ಅವರ ಆಶ್ರಯ ಪಡೆದಿದ್ದ ನೆನಪಿಗಾಗಿ, ಈ ಕೋಟೆಗೆ “ಗುಮ್ಮನಾಯಕನ ಕೋಟೆ” ಎಂದು ಹೆಸರು ಇಡಲಾಯಿತು ಎಂದು ಸ್ಥಳೀಯ ಇತಿಹಾಸ ಹೇಳುತ್ತದೆ.
ಈ ಕೋಟೆಯನ್ನು ಆಳಿದ ಪಾಳೇಗಾರರಲ್ಲಿ ಚಿನ್ನಮ್ಮ ನಾಯಕ, ಗುಮ್ಮ ನಾಯಕ, ದೊಡ್ಡ ವಸಂತ ನಾಯಕ, ಇಮ್ಮಡಿ ಕದಿರಪ್ಪ ನಾಯಕ ಹಾಗೂ ಸಿಂಗಪ್ಪ ನಾಯಕ ಪ್ರಮುಖರಾಗಿದ್ದರು ಎಂದು ಐತಿಹಾಸಿಕ ದಾಖಲೆಗಳು ತಿಳಿಸುತ್ತವೆ.
ಬಾಗೇಪಳ್ಳಿಯಲ್ಲಿ ದೊರೆತಿರುವ ಕ್ರಿ.ಶ. 1336ರ ಹರಿಹರನ ತಾಮ್ರಶಾಸನದ ಪ್ರಕಾರ, ಗುಮ್ಮನಾಯಕನ ಪಾಳೇಗಾರರು ವಿಜಯನಗರ ಸಾಮ್ರಾಜ್ಯದ ಅರಸರೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಎಂದು ತಿಳಿದುಬರುತ್ತದೆ. ಸ್ಥಳೀಯ ಐತಿಹಾಸಿಕ ಉಲ್ಲೇಖಗಳ ಪ್ರಕಾರ, ವಿಜಯನಗರ ಸಾಮ್ರಾಜ್ಯ ಮತ್ತು ಕಲಬುರಗಿ ಸುಲ್ತಾನರ ನಡುವಿನ ಯುದ್ಧದಲ್ಲಿ ವಿಜಯನಗರದ ವಿಜಯಕ್ಕೆ ಗುಮ್ಮನಾಯಕನ ಪಾಳ್ಯದ ಹಿರಿಶಿಂಗಪ್ಪ ನಾಯಕ ಮಹತ್ವದ ಕೊಡುಗೆ ನೀಡಿದ್ದನೆಂದು ಹೇಳಲಾಗುತ್ತದೆ.
ಬಾಗೇಪಳ್ಳಿ ತಾಲ್ಲೂಕನ್ನು ಆಳಿದ ಗುಮ್ಮನಾಯಕನ ಪಾಳೇಗಾರರನ್ನು ಇತಿಹಾಸಕಾರರು ಸಾಮಾನ್ಯವಾಗಿ ಸಣ್ಣ ಪಾಳೇಗಾರರ ವಂಶವೆಂದು ಪರಿಗಣಿಸಿ ಹೆಚ್ಚಿನ ಮಹತ್ವ ನೀಡಿಲ್ಲ. ಆದರೆ, ಈ ವಂಶವು ವಿಜಯನಗರ ಸಾಮ್ರಾಜ್ಯದ ಬೆಳವಣಿಗೆ ಮತ್ತು ವೈಭವದಲ್ಲಿ ಗಮನಾರ್ಹ ಪಾತ್ರ ವಹಿಸಿತ್ತು ಎಂಬುದಕ್ಕೆ ತಾಲೂಕಿನ ವಿವಿಧ ಭಾಗಗಳಲ್ಲಿ ದೊರೆತಿರುವ ಸುಮಾರು 85 ಶಿಲಾಶಾಸನಗಳು, ವೀರಗಲ್ಲುಗಳು ಹಾಗೂ ಮಾಸ್ತಿಕಲ್ಲುಗಳು ಸಾಕ್ಷಿಯಾಗಿವೆ.
ಏಳುಸುತ್ತಿನ ಕೋಟೆಯ ವೈಭವ
ಮೊದಲನೇ ಸುತ್ತಿನ ಕೋಟೆಯ ಆರಂಭದಲ್ಲಿ ಶಾಪಗ್ರಸ್ತ ಬಾವಿಯಿದೆ. ಈ ಬಾವಿಯನ್ನು ವಿಶಾಲವಾಗಿ ನಿರ್ಮಿಸಲಾಗಿದ್ದು, ಅದರೊಂದಿಗೆ ಸ್ನಾನಗೃಹಗಳನ್ನೂ ನಿರ್ಮಿಸಲಾಗಿದೆ. ಬಾವಿಗೆ ನಾಲ್ಕು ಪ್ರವೇಶದ್ವಾರಗಳಿದ್ದು, ಪೂರ್ವ ದಿಕ್ಕಿನ ಪ್ರವೇಶದ್ವಾರವು ವಿಶಿಷ್ಟ ಶಿಲ್ಪಕಲೆಯಿಂದ ಅಲಂಕರಿಸಲ್ಪಟ್ಟಿದೆ. ಪಾಳೇಗಾರರ ಧಾರ್ಮಿಕತೆ ಹಾಗೂ ಕಲಾಪ್ರೇಮಕ್ಕೆ ಸಾಕ್ಷಿಯಾಗಿ ಇಲ್ಲಿ ಇರುವ ಶ್ರೀ ಸೀತಾರಾಮ–ಲಕ್ಷ್ಮಣ–ಹನುಮಂತ ದೇವಾಲಯ ಪ್ರಸಿದ್ಧವಾಗಿದೆ. ದೇವಾಲಯದ ಸುತ್ತಮುತ್ತ ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳನ್ನು ಬಿಂಬಿಸುವ ಉಬ್ಬುಶಿಲ್ಪಗಳು ಕೆತ್ತಲಾಗಿದ್ದು, ವಿಶೇಷವಾಗಿ ಶ್ರೀರಾಮ–ಸೀತೆಯ ಕಲ್ಯಾಣೋತ್ಸವದ ಶಿಲ್ಪಗಳು ಪ್ರವಾಸಿಗರ ಗಮನ ಸೆಳೆಯುತ್ತವೆ.
ಎರಡನೇ ಸುತ್ತಿನ ಕೋಟೆಯಲ್ಲಿ ಕೋಟೆಯ ವಿವಿಧ ಅವಶೇಷಗಳು ಹಾಗೂ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಕಾಣಬಹುದು.
ಮೂರನೇ ಸುತ್ತಿನ ಕೋಟೆಯೊಳಗೆ ಕಲ್ಲಿನ ಕಂಬಗಳಿಂದ ನಿರ್ಮಿಸಲಾದ ಶ್ರೀ ಆಂಜನೇಯಸ್ವಾಮಿ ದೇವಾಲಯವಿದೆ. ಪಾಳೇಗಾರರು ದೇವರಿಗೆ ಕವಚ ಹಾಗೂ ಪಾದಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದರು ಎಂದು ಹೇಳಲಾಗುತ್ತದೆ. ದೇವರ ಬಲಪಾದದ ಪ್ರತಿಮೆಯನ್ನು ಬೆಟ್ಟದ ಕೆಳಭಾಗದಲ್ಲಿರುವ ಶ್ರೀ ಸೇತುವೆ ನರಸಿಂಹಸ್ವಾಮಿ ದೇವಾಲಯದಲ್ಲಿ ಕಾಣಬಹುದು.
ನಾಲ್ಕನೇ ಸುತ್ತಿನ ಕೋಟೆಯ ಆವರಣವು ವಿಶಾಲವಾಗಿದೆ. ಇಲ್ಲಿ ಉದ್ಭವಮೂರ್ತಿ ಶ್ರೀ ವೆಂಕಟರಮಣಸ್ವಾಮಿ ಅವರ ಶಂಖ, ಚಕ್ರ ಮತ್ತು ತಿರುನಾಮದ ಗುರುತುಗಳನ್ನು ಕಾಣಬಹುದು. ಇದೇ ಆವರಣದಲ್ಲಿ ಆನೆಗಳನ್ನು ಕಟ್ಟುವ ಲಾಯ, ಮಂತ್ರಿಗಳು ಸಮಾಲೋಚನೆ ನಡೆಸುತ್ತಿದ್ದ ಗುಪ್ತಸ್ಥಳ, ಪಾಳೇಗಾರರು ವಿಹರಿಸುತ್ತಿದ್ದ ಬುರುಜು, ಹುಣಸಮಾರಮ್ಮ ದೇವಾಲಯ, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆ, ನೀರಿನ ಟ್ಯಾಂಕ್‌ಗಳು ಹಾಗೂ ಬಾವಿಗಳನ್ನು ವೀಕ್ಷಿಸಬಹುದು. ಕೋಟೆಯ ಮುಖ್ಯ ಪ್ರವೇಶದ್ವಾರದ ಜೊತೆಗೆ ರಾತ್ರಿ ಕಾವಲುಗಾರರ ಸಂಚಾರಕ್ಕಾಗಿ ಒಂದು ಸಣ್ಣ ಕಿರುಬಾಗಿಲನ್ನೂ ನಿರ್ಮಿಸಲಾಗಿದೆ.
ಐದನೇ ಸುತ್ತಿನ ಕೋಟೆಯಲ್ಲಿ ಪಾಳೇಗಾರರ ಆರಾಧ್ಯದೈವವಾದ ಶ್ರೀ ನರಸಿಂಹಸ್ವಾಮಿ ಅವರ ಉದ್ಭವಮೂರ್ತಿ ಇದೆ. ಇಲ್ಲಿರುವ ವಿಶಾಲವಾದ ದೊರಲ ಬಾವಿ ಮತ್ತು ಅದರ ಸಮೀಪದ ಶಾಸನವು ಐತಿಹಾಸಿಕ ಮಹತ್ವವನ್ನು ಹೊಂದಿದೆ.
ಆರನೇ ಸುತ್ತಿನ ಕೋಟೆಯಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸುತ್ತಿದ್ದ ಕೊಠಡಿಯನ್ನು ಕಾಣಬಹುದು. ಅದರ ಸಮೀಪದಲ್ಲೇ ಮತ್ತೊಂದು ವಿಶಾಲವಾದ ದೊರಲ ಬಾವಿ ಹಾಗೂ ಬಂಡೆಯ ಮೇಲೆ ಕೆತ್ತಲಾದ ಶಾಸನವಿದೆ.
ಏಳನೇ ಸುತ್ತಿನ ಕೋಟೆಯಲ್ಲಿ ವಿಶಾಲವಾದ ಬಂಡೆಯ ಮೇಲೆ ಎರಡು ದೊಡ್ಡ ಕಲ್ಲುಗಳಿವೆ. ಸ್ಥಳೀಯ ನಂಬಿಕೆಯ ಪ್ರಕಾರ, ಪಾಳೇಗಾರರು ಇಲ್ಲಿಂದ ಶತ್ರುಗಳ ಚಲನವಲನವನ್ನು ಗಮನಿಸುತ್ತಿದ್ದರು. ಅಲ್ಲದೆ, ಬಂಡೆಯ ಮೇಲೆ ಸೈನಿಕರು ತುಪಾಕಿಗಳಿಗಾಗಿ ಮದ್ದುಗುಂಡು ತಯಾರಿಸಲು ಬಳಸುತ್ತಿದ್ದ ತಟ್ಟೆಯಾಕಾರದ ಕುಳಿಗಳನ್ನೂ ಕಾಣಬಹುದು.
ಇದರ ಸಮೀಪದಲ್ಲಿ ನೀರಿನ ದೊಣೆ (ಜಲಾಶಯ) ಇದೆ. ಬೆಟ್ಟದ ಮೇಲಿನ ಕೋಟೆಯನ್ನು ಇಟ್ಟಿಗೆ ಹಾಗೂ ಗಾರೆಯಿಂದ ನಿರ್ಮಿಸಲಾಗಿದೆ. ಕೋಟೆಯ ರಕ್ಷಣೆಯ ಉದ್ದೇಶದಿಂದ ಸುಮಾರು ಹತ್ತು ಹೆಜ್ಜೆಗೊಬ್ಬರಂತೆ ಸೈನಿಕರು ನಿಲ್ಲುವ ವ್ಯವಸ್ಥೆ ಹಾಗೂ ಪಿರಂಗಿಗಳನ್ನು ಇರಿಸಲು ಸ್ಥಳಗಳನ್ನು ನಿರ್ಮಿಸಲಾಗಿತ್ತು. ಶತ್ರುಗಳ ವಿರುದ್ಧ ರಕ್ಷಣೆಗೆ ಕೋಟೆಯ ಗೋಡೆಗಳಲ್ಲಿ ಸುಮಾರು 5 ಅಡಿ ಅಗಲ ಮತ್ತು 10 ಅಡಿ ಉದ್ದದ ರಕ್ಷಣಾತ್ಮಕ ರಂಧ್ರಗಳನ್ನು ನಿರ್ಮಿಸಿರುವುದನ್ನು ಇಂದಿಗೂ ಕಾಣಬಹುದು.
ಭೇಟಿ ನೀಡಿ









