ದೇವರಮನೆ ಬೆಟ್ಟ

ದೇವರಮನೆ ಬೆಟ್ಟವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗುತ್ತಿ ಗ್ರಾಮದ ಸಮೀಪದಲ್ಲಿರುವ ಅತ್ಯಂತ ಸುಂದರ ಹಾಗೂ ಪ್ರಶಾಂತವಾದ ಚಾರಣ ತಾಣವಾಗಿದೆ. ದೇವರಮನೆ ವೀಕ್ಷಣಾ ತಾಣದಿಂದ ಸುತ್ತಮುತ್ತಲಿನ ಬೆಟ್ಟಗಳು, ದಟ್ಟ ಹಸಿರು ಕಾಡುಗಳು ಮತ್ತು ತೇಲುವ ಮೋಡಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿನ ರಮಣೀಯವಾದ ರಸ್ತೆಗಳು ಹಾಗೂ ಉಲ್ಲಾಸಕರ ನೈಸರ್ಗಿಕ ಪರಿಸರವು ಪ್ರವಾಸಿಗರಿಗೆ ಮನಮೋಹಕ ಅನುಭವವನ್ನು ನೀಡುತ್ತವೆ.

ದೇವರಮನೆ ಬೆಟ್ಟದ ದೂರಗಳು

  • ಬೆಂಗಳೂರು – 262 ಕಿ.ಮೀ
  • ಚಿಕ್ಕಮಗಳೂರು – 51 ಕಿ.ಮೀ
  • ಮೂಡಿಗೆರೆ– 22 ಕಿ.ಮೀ
  • ಸಕಲೇಶಪುರ ರೈಲ್ವೆ ನಿಲ್ದಾಣ – 45 ಕಿ.ಮೀ

ದೇವರಮನೆ ಬೆಟ್ಟವನ್ನು ತಲುಪುವ ಮೊದಲು ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯವಿದೆ. ಬೆಟ್ಟದ ಮೇಲಿರುವ ಈ ಪ್ರಾಚೀನ ದೇವಾಲಯವು ಶ್ರೀಮಂತ ಇತಿಹಾಸವನ್ನು ಹೊಂದಿದ್ದು, ಪ್ರಶಾಂತವಾದ ನೈಸರ್ಗಿಕ ವಾತಾವರಣದಲ್ಲಿ ನೆಲೆಗೊಂಡಿದೆ. ಈ ದೇವಾಲಯದ ಪಕ್ಕದಲ್ಲಿ ದೇವರಮನೆ ಕೊಳವಿದ್ದು, ಇದನ್ನು “ಬಟ್ಟಲು ಬಾವಿ” ಎಂದು ಕರೆಯಲಾಗುತ್ತದೆ.

ಈ ದೇವಾಲಯವನ್ನು ಪಾಂಡವರು ನಿರ್ಮಿಸಿದರೋ, ಹೊಯ್ಸಳರು ನಿರ್ಮಿಸಿದರೋ ಅಥವಾ ವೇಣೂರಿನ ಅರಸರು ನಿರ್ಮಿಸಿದರೋ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ದೇವಾಲಯದ ನಕ್ಷತ್ರಾಕಾರದ ಜಗಲಿ, ಗುಂಡನೆಯ ಕಂಬಗಳು ಹಾಗೂ ಹೊರಭಾಗದಲ್ಲಿರುವ ದೀಪಸ್ತಂಭಗಳನ್ನು ಗಮನಿಸಿದರೆ, ಇದು ಹೊಯ್ಸಳರ ಕಾಲದ ನಿರ್ಮಾಣವಾಗಿರಬಹುದು ಎಂದು ಊಹಿಸಬಹುದು. ಆದರೆ ದೇವಾಲಯದಲ್ಲಿ ಹೆಚ್ಚಿನ ಕಲಾತ್ಮಕ ಕೆತ್ತನೆಗಳು ಕಂಡುಬರುವುದಿಲ್ಲ.

ಇದಲ್ಲದೆ, ದಕ್ಷಿಣ ಕನ್ನಡ ಭಾಗದಿಂದ ಜನರು ಇಲ್ಲಿಗೆ ಬರುತ್ತಿದ್ದ ನಿದರ್ಶನಗಳಿರುವುದರಿಂದ, ಈ ದೇವಾಲಯವನ್ನು ವೇಣೂರಿನ ಅರಸರು ನಿರ್ಮಿಸಿರಬಹುದು ಎಂಬ ಅಭಿಪ್ರಾಯವೂ ಇದೆ. ಸದ್ಯಕ್ಕೆ ಈ ಕುರಿತು ಯಾವುದೇ ಶಾಸನಾಧಾರಿತ ಮಾಹಿತಿ ಲಭ್ಯವಿಲ್ಲದ ಕಾರಣ, ದೇವಾಲಯದ ನಿಖರ ನಿರ್ಮಾಣ ಕಾಲ ಮತ್ತು ನಿರ್ಮಾತೃಗಳ ಕುರಿತು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ದೇವಾಲಯದ ಹೊಸ್ತಿಲಿನಲ್ಲಿ “ವೆಂಕಣ್ಣನ ನಮಸ್ಕಾರಗಳು” ಎಂಬ ಕನ್ನಡ ಲಿಪಿಯ ಬರಹವಿದೆ. ಈ ಬರಹವು ದೇವಾಲಯದ ಇತಿಹಾಸಕ್ಕೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯನ್ನು ಒದಗಿಸಬಹುದಾದ ಕಾರಣ, ಇದರ ಕಾಲನಿರ್ಣಯ ಹಾಗೂ ಹಿನ್ನೆಲೆಯ ಕುರಿತು ಅಧ್ಯಯನ ನಡೆಸುವುದು ಅಗತ್ಯವಾಗಿದೆ.

ಐತಿಹ್ಯ

ಕೈಲಾಸದಲ್ಲಿ ಶಿವನು ಬಸವನನ್ನು ಕುರಿತು, “ಬಸವ, ಭೂಲೋಕಕ್ಕೆ ಹೋಗಿ ಅಲ್ಲಿರುವ ಜನರು ಸುಖವಾಗಿದ್ದಾರೆಯೇ ಎಂದು ನೋಡಿಕೊಂಡು ಬಾ” ಎಂದು ಕಳುಹಿಸಿದನು. ಅಂತೆಯೇ ಬಸವನು ಭುವಿಗೆ ಇಳಿದು ನೋಡಿದಾಗ, ಜನರೆಲ್ಲರೂ ಕ್ಷಾಮ ಮತ್ತು ಬರಗಾಲದಿಂದ ನರಳುತ್ತಿದ್ದರು. ಆದರೆ ಶಿವನ ಮುಂದೆ ತೆರಳಿದ ಬಸವನು “ಎಲ್ಲರೂ ಚೆನ್ನಾಗಿದ್ದಾರೆ” ಎಂದು ಸುಳ್ಳು ಹೇಳಿದನು.

ಮುಂದೆ ಶಿವನಿಗೆ ನಿಜವಾದ ಸಂಗತಿ ತಿಳಿದುಬಂದಾಗ, ಬಸವನ ತಪ್ಪಿಗೆ ಪ್ರತಿಕಾರವಾಗಿ ಅವನನ್ನು ಭೂಲೋಕಕ್ಕೆ ಅಟ್ಟಿ, ಜನರಿಗೆ ಉಳುಮೆಯಲ್ಲಿ ಸಹಾಯ ಮಾಡುವಂತೆ ಆಜ್ಞಾಪಿಸಿದನು. ಹೀಗೆ ಬಸವನು ಭೂಲೋಕಕ್ಕೆ ಬಂದಾಗ, ಅವನ ಹಿಂದೆಯೇ ಭೈರವನೂ ಬಂದು ದೇವರಮನೆಯಲ್ಲಿ ನೆಲೆಸಿದನು.

ಇದಕ್ಕೂ ಮೊದಲು ಜನರು ತಾವೇ ನೊಗವನ್ನು ಹೊತ್ತು ಉಳುಮೆ ಮಾಡುತ್ತಿದ್ದರು. ಈಗ ಉಳುಮೆಗೆ ಬಸವನು ದೊರೆತುದರ ಪ್ರತೀಕವಾಗಿ, ಇಂದಿಗೂ ಸುಗ್ಗಿಯ ಸಂದರ್ಭದಲ್ಲಿ ‘ಒಳ್ಳೆಮಾತಿನವರು’ ನೊಗವನ್ನು ಎಳೆಯುತ್ತಾರೆ.

ಭುವಿಗೆ ಬಂದ ಭೈರವನ ಪೂಜೆಗೆ ವಕ್ಕಲಿಗರು ತೊಡಗಿಕೊಳ್ಳುತ್ತಾರೆ. ಹೀಗೆ ಕಾಲ ಉರುಳುತ್ತಿರಲು, ಯಾವುದೋ ಒಂದು ಸಂದರ್ಭದಲ್ಲಿ ವಕ್ಕಲಿಗರ ಮನೆತನವೆಲ್ಲ ನಶಿಸಿ, ಒಬ್ಬ ತಾಯಿ ಮತ್ತು 12 ವರ್ಷದ ಮಗು ಮಾತ್ರ ಉಳಿಯುತ್ತಾರೆ.

ಮುಂದೆ ಈ ಬಾಲಕ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಆಗ ಜಲದೇವತೆಯು ಆತನಿಗೆ ಪ್ರತ್ಯಕ್ಷಳಾಗಿ, ಕೈಗೊಂದು ತೆಂಗಿನ ಬಟ್ಟಲನ್ನು ನೀಡಿ, “ಇದರಿಂದ ಈ ಭಾವಿಯಿಂದ ನೀರನ್ನು ತೆಗೆದುಕೊಂಡು ಹೋಗಿ ಶಿವನಿಗೆ ಪೂಜೆ ಮಾಡು” ಎಂದು ಸಲಹೆ ನೀಡುತ್ತಾಳೆ.

ಮುಂದೆ ಇದೇ ಕಾರಣದಿಂದ ಈ ಭಾವಿಯು “ಬಟ್ಟಲು ಬಾವಿ” ಎಂಬ ಹೆಸರನ್ನು ಪಡೆಯುತ್ತದೆ.