ಹೊಸದುರ್ಗ ಕೋಟೆಯು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನಲ್ಲಿ ಇರುವ ಕೋಟೆಯಾಗಿದೆ. ಚಿತ್ರದುರ್ಗದ ಪಾಳೆಗಾರ ಚಿಕ್ಕಣ್ಣ ನಾಯಕನು ಪಟ್ಟಣದ ದಕ್ಷಿಣ ಭಾಗಕ್ಕಿರುವ ಹನುಮನಕೊಂಬೆ ಬೆಟ್ಟದ ಮೇಲೆ ಕ್ರಿ.ಶ.1675ರಲ್ಲಿ ಈ ಕೋಟೆಯನ್ನು ನಿರ್ಮಿಸಿದನು.
ಈ ಕೋಟೆಯು ಬೆಂಗಳೂರಿನಿಂದ 214 ಕಿ.ಮೀ ದೂರದಲ್ಲಿದೆ ಮತ್ತು ಚಿತ್ರದುರ್ಗದಿಂದ 65 ಕಿ.ಮೀ ದೂರದಲ್ಲಿದೆ. ಹಾಗೂ ಹೊಸದುರ್ಗ ದಿಂದ 1 ಕಿ.ಮೀ ಮತ್ತು ಹೊಸದುರ್ಗ ರೋಡ್ ರೈಲ್ವೆ ನಿಲ್ದಾಣದಿಂದ ಕೇವಲ 20 ಕಿ.ಮೀ ದೂರದಲ್ಲಿದೆ.
ಇತಿಹಾಸ
ಶಿರಾ ಮಹಮದೀಯರ ವಶದಲ್ಲಿದ್ದ ಸಂಪದ್ಭರಿತ ಬಾಗೂರು ಕೋಟೆಯನ್ನು ವಶಪಡಿಸಿಕೊಳ್ಳಲು ಚಿತ್ರದುರ್ಗದ ಪಾಳೆಗಾರ ಚಿಕ್ಕಣ್ಣ ನಾಯಕನು ಪಟ್ಟಣದ ದಕ್ಷಿಣ ಭಾಗಕ್ಕಿರುವ ಹನುಮನಕೊಂಬೆ ಬೆಟ್ಟದ ಮೇಲೆ ಕ್ರಿ.ಶ.1675ರಲ್ಲಿ ಕೋಟೆ, ಮದ್ದಿನ ಉಗ್ರಾಣ, ದೇವಾಲಯ, ಅರಮನೆ, ಸೈನಿಕರ ವಸತಿಗಳನ್ನು ನಿರ್ಮಿಸಿಕೊಂಡು ಸೇನೆಯೊಂದಿಗೆ ಬಂದು ನೆಲೆಸಿದ್ದ. ಚಿಕ್ಕಣ್ಣನಾಯಕನು ನಿರ್ಮಿಸಿದ್ದ ಕೋಟೆಗೆ ತನ್ನ ಮೂಲ ಕೋಟೆಯ ಹೆಸರಾದ ಚಿತ್ರದುರ್ಗದ ಹೆಸರನ್ನೇ ನೆನಪಿಸುವ ‘ಹೊಸದಾದ ದುರ್ಗ’ಕ್ಕೆ ಹೊಸದುರ್ಗ ಎಂದು ಹೆಸರು ಬಂದಿದೆ. ಚಿಕ್ಕಣ್ಣ ನಾಯಕನ ತರುವಾಯ ದಂಡಿನ ಜಂಪಣ್ಣ ನಾಯಕ ಆಳ್ವಿಕೆ ನಡೆಸಿದ್ದ. ಮುಂದೆ ಹೈದರಾಲಿ ದುರ್ಗದ ಮೇಲಿನ ಸೇಡಿಗಾಗಿ ಬಾಗೂರು ಮತ್ತು ಹೊಸದುರ್ಗ ಕೋಟೆಗಳನ್ನು ಲೂಟಿ ಮಾಡಿದ ಎಂದು ಇತಿಹಾಸಕಾರರು ಹೇಳುತ್ತಾರೆ.
ಪಟ್ಟಣದ ದಕ್ಷಿಣಕ್ಕಿರುವ ಹನುಮನ ಕೊಂಬೆ ಬೆಟ್ಟದಲ್ಲಿ ದುರ್ಗದ ಪಾಳೇಗಾರರ ಕಾಲದಲ್ಲಿ ನಿರ್ಮಿಸಿದ್ದ ಕೋಟೆಗಳು, ಗುಡಿ, ವೀರಗಲ್ಲು, ದೇವರ ವಿಗ್ರಹಗಳು ಇಲ್ಲಿ ಪತ್ತೆಯಾಗಿವೆ. ಐದು ಸುತ್ತಿನ ಕೋಟೆ, ಮೂರು ಸುತ್ತಿನ ಕೋಟೆಯ ನಂತರ ವೀರಭದ್ರಸ್ವಾಮಿ ಹಾಗೂ ಕಾಳಿಕಾದೇವಿ ದೇವಸ್ಥಾನ, ಪಕ್ಕದಲ್ಲೇ ಹುಣಸೆಹೊಂಡ ಇದೆ. ಎಂತಹ ಬೇಸಿಗೆಯಲ್ಲೂ ಈ ಹೊಂಡದಲ್ಲಿ ನೀರು ಬತ್ತುವುದಿಲ್ಲ. ಅಲ್ಲಿಂದ ಮುಂದೆ ಸಾಗಿದರೇ ಕಲ್ಲಿನಲ್ಲಿ ನಿರ್ಮಿಸಿರುವ ನಾಗಪ್ಪ ಕಾಣುತ್ತದೆ. ಬೆಟ್ಟದ ಮೇಲೆ, ಕೋಟೆಯ ಸ್ಥಳದಲ್ಲಿ ಶ್ರೀ ಕಾಲಭೈರೇಶ್ವರ ಸ್ವಾಮಿ ದೇವಾಲಯವಿದೆ.
ಚಿತ್ರದುರ್ಗ ಕೋಟೆಯಲ್ಲಿ ಇರುವಂತೆ ಹೊಸದುರ್ಗ ಕೋಟೆಯಲ್ಲೂ ನಾಗರಕಲ್ಲುಗಳಿವೆ. ಹಲವು ವರ್ಷಗಳ ಹಿಂದೆ ಕೋಟೆಯಲ್ಲಿ ನಿಲ್ಲಿಸಿದ್ದ ನಾಗರಕಲ್ಲು ಕೆಳಗೆ ಬಿದ್ದಿದ್ದವು. ಅಂದಿನಿಂದ ತಾಲ್ಲೂಕಿನಲ್ಲಿ ಬರಗಾಲ ಆವರಿಸಿತ್ತು. ಅಂದಿನ ಮಂಡಲ ಪಂಚಾಯಿತಿ ಅಧ್ಯಕ್ಷ ಅಂಜನಕುಮಾರ್ ಅವರು ಸುತ್ತಲಿನ ದೇವರ ಸಮ್ಮುಖದಲ್ಲಿ ಬಿದ್ದಿದ್ದ ನಾಗರಕಲ್ಲುಗಳನ್ನು ಮತ್ತೆ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ನಡೆಸಿದರು. ಆಗ ಮಳೆ ಸುರಿಯಲಾರಂಭಿಸಿತು ಎಂಬುದು ಪ್ರತೀತಿ.
ಭೇಟಿ ನೀಡಿ








