ನರಗುಂದ ಬೆಟ್ಟವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಇರುವ ಒಂದು ಬೆಟ್ಟವಾಗಿದೆ. ನರಗುಂದ ಗುಡ್ಡವು ನೋಡಲು ಮಲಗಿದ ಸಿಂಹದಂತೆ ಕಾಣುತ್ತದೆ. ಗುಡ್ಡದ ಮೇಲ್ಭಾಗದಲ್ಲಿ ಸಿದ್ದೇಶ್ವರ ದೇವಾಲಯವಿದ್ದು, ಇಳಿಜಾರಿನಲ್ಲಿ ಬೃಹತ್ ವೆಂಕಟೇಶ್ವರ ದೇವಾಲಯವಿದೆ. ಈ ದೇವಾಲಯವು ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದೆ.
ಈ ಸ್ಥಳವು ಬೆಂಗಳೂರಿನಿಂದ 475 ಕಿ.ಮೀ ಮತ್ತು ಗದಗ ನಗರದಿಂದ 50 ಕಿ.ಮೀ ದೂರದಲ್ಲಿದೆ.
ನರಗುಂದದ ಇತಿಹಾಸ
ನರಗುಂದದಲ್ಲಿ ಚಾಲುಕ್ಯರ 3ನೇ ಸೋಮೇಶ್ವರ, 2ನೇ ಜಗದೇಕಮಲ್ಲ ಮತ್ತು 3ನೇ ತೈಲರ ಶಾಸನಗಳಿವೆ. ಆ ಕಾಲದಲ್ಲಿ ನರಗುಂದವು ಒಂದು ಅಗ್ರಹಾರವಾಗಿತ್ತು. ನಂತರ ಇದು 220 ಮಹಾಜನರ ಆಡಳಿತಕ್ಕೆ ಒಳಪಟ್ಟಿತ್ತು. ನರಗುಂದ ಗುಡ್ಡದ ಮೇಲಿನ ಕೋಟೆಯನ್ನು ಮರಾಠ ಛತ್ರಪತಿ ಶಿವಾಜಿ ಮಹಾರಾಜರು ಕ್ರಿ.ಶ. 1674ರಲ್ಲಿ ಕಟ್ಟಿಸಿದರು. ಕ್ರಿ.ಶ. 1785ರಲ್ಲಿ ನರಗುಂದ ಕೋಟೆ ಟಿಪ್ಪು ಸುಲ್ತಾನನ ವಶವಾಯಿತು. ನಂತರ ಮರಾಠ ಪೇಶ್ವೆಗಳು ಕ್ರಿ.ಶ. 1818ರಲ್ಲಿ ನರಗುಂದವನ್ನು ದಾದಾಜಿರಾವ್ ಅಪ್ಪನವರಿಗೆ ನೀಡಿದರು.
ನರಗುಂದವನ್ನು 18ನೇ ಶತಮಾನದಲ್ಲಿ ಪುಣೆಯ ಮರಾಠ ಪೇಶ್ವೆಗಳ ಪರವಾಗಿ ಭಾವೆ ರಾಜವಂಶದ ವೆಂಕಟರಾವ್ ಆಳುತ್ತಿದ್ದನು. ಮೈಸೂರಿನ ಹೈದರ್ ಅಲಿ ಕ್ರಿ.ಶ. 1778ರಲ್ಲಿ ಅದನ್ನು ತನ್ನ ನಿಯಂತ್ರಣಕ್ಕೆ ಒಳಪಡಿಸಿದನು. ಕ್ರಿ.ಶ. 1784ರಲ್ಲಿ ಟಿಪ್ಪು ಸುಲ್ತಾನ್ ನರಗುಂದದ ಮೇಲೆ ದಾಳಿ ಮಾಡಿದನು. ಮರಾಠರು, ಭಾವೆ ಪರಿವಾರ ಮತ್ತು ಅವರ ಲೆಕ್ಕಿಗರಾಗಿದ್ದ ಪೇಠೆ ಪರಿವಾರದವರು ಟಿಪ್ಪು ಸುಲ್ತಾನ್ ಮತ್ತು ಅವರ ಸಹಚರರ ಕೈಯಲ್ಲಿ ಕ್ರೂರ ಹಿಂಸೆ ಮತ್ತು ಅತ್ಯಾಚಾರಗಳ ಮೂಲಕ ತೇಜೋವಧೆಗೊಂಡರು. ಅವರನ್ನು ಕ್ರಿ.ಶ. 1799ರಲ್ಲಿ ಬಿಡುಗಡೆ ಮಾಡುವವರೆಗೆ ಮೈಸೂರಿನ ಕಾರಾಗೃಹದಲ್ಲಿ ಇರಿಸಲಾಯಿತು. ನಂತರ ಅವರು ನರಗುಂದಕ್ಕೆ ಮರಳಿದರು.
ಬ್ರಿಟಿಷ್ ಅಧಿಪತ್ಯದ ವಿರುದ್ಧ ದೇಶದಲ್ಲಿ ಕ್ರಿ.ಶ. 1857ರ ಮೇ 10ರಂದು ನಡೆದ ಮೊದಲ ಹೋರಾಟದ ಸಮಯದಲ್ಲೇ ಬಾಬಾಸಾಹೇಬರ ಮುಂದಾಳುತ್ವದಲ್ಲಿ ಬ್ರಿಟಿಷ್ ಆಳಿಕೆಯ ವಿರುದ್ಧ ಹೋರಾಟದ ಧ್ವನಿ ಮೊಳಗಿತು.
ದಾದಾಜಿರಾಯರ ವಂಶದ ಬಾಬಾಸಾಹೇಬರಿಗೆ ಮಕ್ಕಳಿರಲಿಲ್ಲವಾದ್ದರಿಂದ, ಅವರು ದತ್ತು ಸ್ವೀಕರಿಸಲು ಇಚ್ಛಿಸಿದಾಗ ಬ್ರಿಟಿಷರು ಅದಕ್ಕೆ ಅವಕಾಶ ನೀಡಲಿಲ್ಲ. ಬಾಬಾಸಾಹೇಬರು ಇದನ್ನು ಪ್ರತಿಭಟಿಸಿ ಬಂಡೆದ್ದರು. ಭಾರತದ 1857ರ ಬಂಡಾಯದಲ್ಲಿ ನರಗುಂದವು ಪ್ರಮುಖ ಪಾತ್ರ ವಹಿಸಿತು. ಆಗ ಬ್ರಿಟಿಷರು ನಡೆಸಿದ ಆಕ್ರಮಣವನ್ನು ಇಲ್ಲಿನ ಜನರು ಕೆಚ್ಚಿನಿಂದ ಎದುರಿಸಿದರು. ಕ್ರಿ.ಶ. 1858ರಲ್ಲಿ ಬ್ರಿಟಿಷರು ಬಾಬಾಸಾಹೇಬರನ್ನು ಮಣಿಸಿ ಕೋಟೆಯನ್ನು ಧ್ವಂಸಗೊಳಿಸಿದರು.
ಭೇಟಿ ನೀಡಿ



