ಪುರಾತನ ಶ್ರೀ ಕಲಮೇಶ್ವರ ಸ್ವಾಮಿ ದೇವಸ್ಥಾನವು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡು ಗ್ರಾಮದಲ್ಲಿ ಇದೆ. ಶಾಸನಗಳು ಈ ಗ್ರಾಮವನ್ನು ‘ಬಳ್ಳಾರೆಯ ಬೀಡು’ ಎ೦ದು ಉಲ್ಲೇಖಿಸುತ್ತದೆ.
ಈ ದೇವಾಲಯವು ಬೆಂಗಳೂರಿನಿಂದ ಸುಮಾರು 355 ಕಿ.ಮೀ ಮತ್ತು ಹಾವೇರಿ ನಗರದಿಂದ 32 ಕಿ.ಮೀ ದೂರದಲ್ಲಿದೆ. ಹಾನಗಲ್ ತಾಲೂಕು ನಿಂದ 16 ಕಿ.ಮೀ ಹಾಗೂ ಹಾವೇರಿ ನಗರ ರೈಲ್ವೆ ನಿಲ್ದಾಣದಿಂದ 33 ಕಿ.ಮೀ ದೂರದಲ್ಲಿದೆ.
ಕ್ರಿ.ಶ. ಸುಮಾರು 11-12ನೇ ಶತಮಾನದಲ್ಲಿ ಪೂರ್ವಾಭಿಮುಖವಾಗಿ ನಿರ್ಮಿತಗೊಂಡ ಈ ದೇವಾಲಯದಲ್ಲಿ ಗರ್ಭಗೃಹ, ಅಂತರಾಳ, ನವರಂಗ ಮತ್ತು ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ಶಿವಲಿಂಗವಿದ್ದು, ಅಂತರಾಳ ದ್ವಾರದ ಲಲಾಟ ಬಿಂಬದಲ್ಲಿ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣುವಿನ ಉಬ್ಬುಶಿಲ್ಪಗಳಿವೆ. ನವರಂಗದಲ್ಲಿ ಐದು ದೇವಕೋಷ್ಟಗಳಿದ್ದು, ಎರಡರಲ್ಲಿ ಸಪ್ತಮಾತೃಕೆಯರ ಪಟ್ಟಿಕೆ ಇದ್ದು, ಒಂದರಲ್ಲಿ ಗಣಪತಿ, ಇನ್ನೊಂದರಲ್ಲಿ ಕಾರ್ತಿಕೇಯನ ಶಿಲ್ಪಗಳಿವೆ. ನವರಂಗದಲ್ಲಿ ಹೊಳಪಿನಿಂದ ಕೂಡಿದ ತಿರುಗಣಿ ಯಂತ್ರದಿಂದ ರಚಿಸಿರುವ ಕುಂಭಾಕಾರದ ಕಂಬಗಳು, ಬಳಗಳ ಮತ್ತು ಸೂಕ್ಷ್ಮ ಕೆತ್ತನೆಗಳ ಅಲಂಕರಣಗಳನ್ನು ಹೊಂದಿವೆ.
ಭೇಟಿ ನೀಡಿ




