ಪುರಾತನ ಶ್ರೀ ಪ್ರಸನ್ನ ಸೋಮೇಶ್ವರ ದೇವಸ್ಥಾನವು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗ್ರಾಮದಲ್ಲಿರುವ ಐತಿಹಾಸಿಕ ದೇವಾಲಯವಾಗಿದೆ. ಈ ಗ್ರಾಮವು ಚೋಳರ ಕಾಲದ ಶಿಲ್ಪಕಲೆ ಮತ್ತು ಪುರಾತನ ದೇವಾಲಯಗಳಿಗೆ ಪ್ರಸಿದ್ಧವಾಗಿದೆ.
ಸುಮಾರು 1,300 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯದ ಪ್ರಮುಖ ವಿಶೇಷತೆಯೆಂದರೆ, ಇದು ಯಾವುದೇ ಅಡಿಪಾಯವಿಲ್ಲದೆ ನೈಸರ್ಗಿಕ ಬಂಡೆಯ ಮೇಲೆಯೇ ನಿರ್ಮಾಣಗೊಂಡಿದೆ. ದೇವಾಲಯದ ವಾಸ್ತುಶಿಲ್ಪ, ಶಿಲ್ಪಕಲೆ ಹಾಗೂ ಪ್ರಾಚೀನ ನಿರ್ಮಾಣ ಶೈಲಿಯು ಆ ಕಾಲದ ಕಲಾತ್ಮಕ ವೈಭವವನ್ನು ಪ್ರತಿಬಿಂಬಿಸುತ್ತದೆ.
ದೇವಾಲಯದ ಆವರಣದ ಎಡಭಾಗದಲ್ಲಿ ಶ್ರೀ ಕ್ಷಮದಾಂಬ ದೇವಿಯ ದೇವಾಲಯವೂ ಇದ್ದು, ಭಕ್ತರು ಸೋಮೇಶ್ವರ ಸ್ವಾಮಿಯ ದರ್ಶನದೊಂದಿಗೆ ದೇವಿಯ ದರ್ಶನವನ್ನೂ ಪಡೆಯುತ್ತಾರೆ. ಈ ಪವಿತ್ರ ಕ್ಷೇತ್ರವು ಧಾರ್ಮಿಕ ಮಹತ್ವದ ಜೊತೆಗೆ ಐತಿಹಾಸಿಕ ಹಾಗೂ ವಾಸ್ತುಶಿಲ್ಪದ ದೃಷ್ಟಿಯಿಂದಲೂ ವಿಶೇಷ ಸ್ಥಾನವನ್ನು ಹೊಂದಿದೆ.
ಕುರುಡುಮಲೆ ಶ್ರೀ ಸೋಮೇಶ್ವರನ ದೇವಸ್ಥಾನದ ದೂರಗಳು
- ಬೆಂಗಳೂರು – 104 ಕಿ.ಮೀ
- ಕೋಲಾರ – 35 ಕಿ.ಮೀ
- ಮುಳಬಾಗಿಲು – 10 ಕಿ.ಮೀ
- ಕೋಲಾರ ರೈಲ್ವೆ ನಿಲ್ದಾಣ – 35 ಕಿ.ಮೀ
- ಬೆಂಗಳೂರು ವಿಮಾನ ನಿಲ್ದಾಣ – 106 ಕಿ.ಮೀ
ಈ ದೇವಾಲಯವು ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ಅದರ ಗೋಡೆಗಳು ಹಾಗೂ ಸ್ತಂಭಗಳ ಮೇಲಿರುವ ಸೂಕ್ಷ್ಮ ಕೆತ್ತನೆಗಳು ನೋಡುಗರನ್ನು ಆಕರ್ಷಿಸುತ್ತವೆ. ಸ್ಥಳೀಯರ ಪ್ರಕಾರ, ಈ ಪ್ರದೇಶದಲ್ಲಿ ಹಿಂದೆ 15ರಿಂದ 20ಕ್ಕೂ ಹೆಚ್ಚು ದೇವಾಲಯಗಳು ಇದ್ದವು. ಕಾಲಕ್ರಮೇಣ ಅವುಗಳಲ್ಲಿ ಹೆಚ್ಚಿನವು ನಾಶವಾಗಿದ್ದು, ಅದರ ಪುರಾವೆಯಾಗಿ ಸೋಮೇಶ್ವರ ದೇವಾಲಯದ ಆವರಣದ ಸಮೀಪದಲ್ಲಿರುವ ಎರಡು ಪುರಾತನ ದೇವಾಲಯಗಳ ಅವಶೇಷಗಳನ್ನು ಇಂದಿಗೂ ಕಾಣಬಹುದು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೊರೆತ ಅನೇಕ ಪುರಾತನ ವಿಗ್ರಹಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರಸ್ತುತ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಇರಿಸಲಾಗಿದೆ.
ಭೇಟಿ ನೀಡಿ









