ಅಂತರಗಂಗೆ ಒಂದು ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಸ್ಥಳವಾಗಿದ್ದು, ಇದು ಕರ್ನಾಟಕ ರಾಜ್ಯದ ಕೋಲಾರದ ವಿಭೂತಿಪುರ ಎಂಬ ಗ್ರಾಮದಲ್ಲಿ ಇದೆ. ಈ ಸ್ಥಳದ ಬಳಿ ಇರುವ ಅಂತರಗಂಗೆ ಬೆಟ್ಟವು ಚಾರಣಾಸಕ್ತರಿಗಾಗಿ ಜನಪ್ರಿಯ ಗಿರಿಧಾಮವಾಗಿದೆ. ಈ ಸ್ಥಳವನ್ನು ದಕ್ಷಿಣ ಭಾರತದಲ್ಲಿ ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 4026 ಅಡಿ ಎತ್ತರದಲ್ಲಿದೆ.
ಈ ಸ್ಥಳವು ಬೆಂಗಳೂರಿಂದ 70 ಕಿ.ಮೀ ಮತ್ತು ಕೋಲಾರದಿಂದ 03 ಕಿ.ಮೀ ದೂರದಲ್ಲಿದೆ. ಹಾಗೂ ಕೋಲಾರ ರೈಲ್ವೆ ನಿಲ್ದಾಣದಿಂದ 05 ಕಿ.ಮೀ ದೂರದಲ್ಲಿದೆ.
ಬೆಟ್ಟದ ಮೇಲೆ ಪುರಾತನವಾದ ಕಾಶಿ ವಿಶ್ವೇಶ್ವರನ ಸನ್ನಿಧಿ ಇದೆ. ವಿಶೇಷವಾದ ಕೆತ್ತನೆಗಳೇನೂ ಇಲ್ಲದ ಸಾಧಾರಣ ಗುಡಿಯ ಗರ್ಭಗೃಹದಲ್ಲಿರುವ ಕಾಶಿ ವಿಶ್ವೇಶ್ವರನ ಲಿಂಗ ಮನಮೋಹಕವಾಗಿದೆ. ಪಕ್ಕದಲ್ಲಿ ಕಲ್ಯಾಣಿ ಇದ್ದು, ಗಣಪತಿಯ ಪುಟ್ಟ ಗುಡಿ ಇದೆ. ಅದೇ ಪ್ರಕಾರದಲ್ಲಿ ಮಂಟಪದಲ್ಲಿ ಎರಡು ನಂದಿಯ ವಿಗ್ರಹಗಳಿದ್ದು, ಒಂದು ನಂದಿಯ ಬಾಯಿಂದ ನಿರಂತರವಾಗಿ ಜಲಧಾರೆ ಹರಿಯುತ್ತದೆ. ಪಕ್ಕದಲ್ಲೇ ಆಂಜನೇಯನ ಮೂರ್ತಿಯೂ ಇದೆ. ಪಕ್ಕದಲ್ಲೇ ಉರುಟುಕಲ್ಲುಗಳ ಬೆಟ್ಟದಲ್ಲಿ ವೀಕ್ಷಣಾಗೋಪುರವೂ ಇದೆ.
ಈ ಬೆಟ್ಟದ ಮೇಲೆ ಇರುವ ದೇವಾಲಯದ ವಿಶೇಶತೆ ಏನೆಂದರೆ, ಎತ್ತರದ ಬೆಟ್ಟದ ಮೇಲೆ ದೇವಾಲಯದ ಪಕ್ಕದಲ್ಲಿ ಕಟ್ಟಲಾಗಿರುವ ಮಂಟಪದಲ್ಲಿ ಪ್ರತಿಷ್ಠಾಪಿತನಾದ ಶಿವನ ವಾಹನ ಬಸವಣ್ಣನ ಬಾಯಿಂದ ವರ್ಷದ 365 ದಿನವು ಸಿಹಿನೀರು ಅವ್ಯಾಹತವಾಗಿ ಹರಿಯುತ್ತಿರುತ್ತದೆ. ಬರಗಾಲವಿರಲಿ, ಕ್ಷಾಮವೇ ಇರಲಿ ಇಲ್ಲಿನ ಬಸವನ ಬಾಯಿಂದ ನೀರು ಬರುತ್ತದೆ. ಆದರೆ ಈ ನಂದಿಯ ಬಾಯಿಂದ ಬರುವ ಜಲ ಮೂಲವು ಎಲ್ಲಿದೆ ಎಂಬುದು ಯಾರಿಗೂ ತಿಳಿದಿಲ್ಲ.
ಭೇಟಿ ನೀಡಿ




