ನಮ್ಮ ಪುರಾಣಗಳ ಪ್ರಕಾರ, ಭೂಮಿಯ ಮೇಲೆ 108 ತಿರುಪತಿಗಳು ಇದ್ದು, ಈ ಎಲ್ಲ ಪುಣ್ಯಸ್ಥಳಗಳಲ್ಲಿ ವಿಷ್ಣುವು ವೆಂಕಟೇಶ್ವರನ ಸೌಮ್ಯ ರೂಪದಲ್ಲಿ ನೆಲೆಸಿದ್ದಾರೆ ಎಂದು ನಂಬಲಾಗುತ್ತದೆ. ಅಂತಹ ಪವಿತ್ರ ತಿರುಪತಿಗಳಲ್ಲಿ ಬಂಗಾರ ತಿರುಪತಿ ಕೂಡ ಒಂದು ಮಹತ್ವದ ಕ್ಷೇತ್ರವಾಗಿದೆ. ಇಲ್ಲಿ ಬೆಟ್ಟದ ಮೇಲೆ ಪದ್ಮಾವತಿ ಸಮೇತವಾಗಿ ಶ್ರೀನಿವಾಸ ನೆಲೆಸಿದ್ದಾರೆ.
ಈ ಕ್ಷೇತ್ರವು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಗುಟ್ಟಹಳ್ಳಿ ಗ್ರಾಮದಲ್ಲಿದೆ. ಇಲ್ಲಿನ ಬೆಟ್ಟಗುಡ್ಡ ಪ್ರದೇಶದಲ್ಲಿ ತಿರುಪತಿ ಸ್ವಾಮಿಯು ನೆಲೆಸಿದ್ದು, ಇಲ್ಲಿನ ಭಕ್ತಿಭಾವ ಹಾಗೂ ದೈವೀಸಾನ್ನಿಧ್ಯದಿಂದ ಈ ಸ್ಥಳವು ಒಂದು ಮಹತ್ವದ ಪುಣ್ಯಕ್ಷೇತ್ರವೆಂದು ಪರಿಗಣಿಸಲಾಗುತ್ತದೆ.
ಈ ದೇವಾಲಯವು ಬೆಂಗಳೂರಿಂದ 103 ಕಿ.ಮೀ ಮತ್ತು ಕೋಲಾರದಿಂದ 42 ಕಿ.ಮೀ ದೂರದಲ್ಲಿದೆ. ಹಾಗೂ ಕೆಜಿಎಫ್ ನಿಂದ 18 ಕಿ.ಮೀ ದೂರದಲ್ಲಿದೆ.
ಈ ಸ್ಥಳವು ಪುರಾಣ ಕಾಲದಿಂದಲೂ ಭೃಗು ಮಹರ್ಷಿಗಳ ಧ್ಯಾನಸ್ಥಳವಾಗಿತ್ತು. ಈ ಕ್ಷೇತ್ರದಲ್ಲಿ ಶ್ರೀನಿವಾಸದೇವರು ಒಂದು ಬೆಟ್ಟದಲ್ಲಿ ನೆಲೆಸಿದ್ದಾರೆ. ಲಕ್ಷ್ಮೀ ಹಾಗು ಪದ್ಮಾವತಿಯರು ಮತ್ತೊಂದು ಬೆಟ್ಟದಲ್ಲಿ ನೆಲೆಸಿದ್ದಾರೆ. ಶ್ರೀನಿವಾಸದೇವರು ಇಲ್ಲಿ ಒಬ್ಬರೇ ನೆಲೆಸಿರುವುದು ಈ ಕ್ಷೇತ್ರದ ವಿಶೇಶತೆ ಆಗಿದೆ. ಅದರಿಂದ ಈ ಶ್ರೀನಿವಾಸ ದೇವರಿಗೆ ಏಕಾಂತ ಶ್ರೀನಿವಾಸ ಎಂದು ಸಹ ಕರೆಯುತ್ತಾರೆ.
ಇಲ್ಲಿಗೆ ಬರುವ ಭಕ್ತಾದಿಗಳು ಮೊದಲು ಏಕಾಂತ ಶ್ರೀನಿವಾಸ ದೇವಾಲಯಕ್ಕೆ ಭೇಟಿ ನೀಡಿ ನಂತರ ಪದ್ಮಾವತಿ ದೇವಿಯ ದೇವಾಲಯಕ್ಕೆ ಭೇಟಿ ನೀಡುವುದು ಇಲ್ಲಿಯ ವಾಡಿಕೆ. ಇಲ್ಲಿ ನೆಲೆಸಿರುವ ಶ್ರೀನಿವಾಸ ದೇವರನ್ನು ಉಡುಪಿಯ ಶ್ರೀಕೃಷ್ಣನನ್ನು ಕನಕನ ಕಿಂಡಿಯಲ್ಲಿ ನೋಡುವಂತೆ ನೋಡಬೇಕು. ಶ್ರೀನಿವಾಸನನ್ನು ಹೀಗೆ ನೋಡುವುದಕ್ಕೆ ನೇತ್ರ ದರ್ಶನ ಎಂದೂ ಹೆಸರು ಕೂಡ ಇದೆ.
ಭೇಟಿ ನೀಡಿ






