ಕುರುಡುಮಲೆ ಗಣೇಶ ದೇವಸ್ಥಾನವು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆ ಮುಳುಬಾಗಿಲು ತಾಲೂಕು ಕುರುಡುಮಲೆ ಗ್ರಾಮದಲ್ಲಿ ಇರುವ ಪುರಾತನ ದೇವಾಲಯವಾಗಿದ್ದು, ಇಲ್ಲಿ ಇರುವ ವಿಗ್ರಹವು ಸುಮಾರು 13.5 ಅಡಿ ಎತ್ತರವಿದ್ದು, ಈ ಶಿಲೆಯು ಇಡೀ ಭಾರತದಲ್ಲಿ ಸಾಲಿಗ್ರಾಮ ಶಿಲೆಯಿಂದ ಕೆತ್ತಲ್ಪಟ್ಟ ಏಕಶಿಲಾ ಮೂರ್ತಿಯಾಗಿದೆ. ಈ ಗಣೇಶ ವಿಗ್ರಹವು ಸುಮಾರು 1800 ವರ್ಷಕ್ಕೂ ಹೆಚ್ಚು ಕಾಲ ಹಳೆಯದಾಗಿದೆ. ಕುರುಡುಮಲೆಯು ಚೋಳ ರಾಜನ ಕಾಲದ ಶಿಲ್ಪಕಲೆಯುಳ್ಳ ದೇವಸ್ಥಾನಗಳಿಗೆ ಮನೆಯಾಗಿದೆ.
ಈ ದೇವಾಲಯವು ಬೆಂಗಳೂರಿಂದ 105 ಕಿ.ಮೀ ಮತ್ತು ಕೋಲಾರದಿಂದ 35 ಕಿ.ಮೀ ದೂರದಲ್ಲಿದೆ. ಹಾಗೂ ಮುಳುಬಾಗಿಲು ತಾಲೂಕುನಿಂದ 11 ಕಿ.ಮೀ ಮತ್ತು ಕೋಲಾರ ರೈಲ್ವೆ ನಿಲ್ದಾಣದಿಂದ 35 ಕಿ.ಮೀ ದೂರದಲ್ಲಿದೆ.
ಇತಿಹಾಸ
ಕುರುಡುಮಲೆ ಶ್ರೀ ಲಕ್ಷ್ಮೀಗಣಪತಿಯನ್ನು ಕೃತಯುಗದಲ್ಲಿ ತ್ರಿಪುರಾಸುರ ಎಂಬ ರಾಕ್ಷಸನ ಸಂಹಾರಕ್ಕಾಗಿ ಬ್ರಹ್ಮ, ವಿಷ್ಣು, ಮಹೇಶ್ವರ ಈ ಮೂರು ತ್ರಿಮೂರ್ತಿಗಳಿಂದ ಸಾಲಿಗ್ರಾಮ ಶಿಲೆಯ 13.5 ಅಡಿಯ ಶ್ರೀ ಲಕ್ಷ್ಮೀಗಣಪತಿಯನ್ನು ಪ್ರತಿಷ್ಠಾಪನೆ ಮಾಡಿರುವುದರಿಂದ ಈ ಕ್ಷೇತ್ರಕ್ಕೆ ಕೂಟಾದ್ರಿ ಅಥವಾ ಕೂಡುಮಲೆ ಎಂದು ಹೆಸರು ಬಂದಿತು, ಅದನ್ನು ಜನರು ಆಡು ಭಾಷೆಯಲ್ಲಿ ಕುರುಡುಮಲೆ ಎಂದು ಕರೆಯುತ್ತಾರೆ.
ತ್ರೇತಾಯುಗ ದಲ್ಲಿ ಶ್ರೀ ರಾಮನು ರಾವಣಾಸುರನ ಮೇಲೆ ಯುದ್ಧ ಮಾಡುವುದಕ್ಕೆ ಮೊದಲು ಶ್ರೀ ಲಕ್ಷ್ಮೀಗಣಪತಿಗೆ ಪೂಜೆಯನ್ನು ಮಾಡಿ ನಂತರ ರಾವಣಾಸುರನ ಮೇಲೆ ಯುದ್ಧ ಮಾಡಿದನೆಂದು ಪ್ರತೀತಿ ಇದೆ.
“ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನಿಗೆ ಶಮಂತಕಮಣಿಯ ಅಪವಾದ ಬಂದಾಗ, ಅಪವಾದ ಪರಿಹಾರಕ್ಕಾಗಿ, ಶ್ರೀ ಕೃಷ್ಣನು ಶ್ರೀ ಲಕ್ಷ್ಮೀ ಗಣಪತಿಗೆ ಪೂಜೆ ಮಾಡಿದ್ದಾರೆ ಎಂದು ಹೇಳುತ್ತಾರೆ. ನಂತರ ಪಂಚ ಪಾಂಡವರು ವನವಾಸ ಮುಗಿಸಿ ಕೌರವರ ಮೇಲೆ ಯುದ್ಧ ಮಾಡುವುದಕ್ಕೆ ಮುಂಚೆ ಶ್ರೀ ಲಕ್ಷ್ಮೀ ಗಣಪತಿಯ ಪೂಜೆ ಮಾಡಿ ನಂತರ ಕೌರವರ ಮೇಲೆ ಯುದ್ಧ ಮಾಡಿ ಜಯಗಳಿಸಿದರೆಂದು ಹೇಳುತ್ತಾರೆ.
ಕಲಿಯುಗದಲ್ಲಿ ವಿಜಯ ನಗರದ ಅರಸರಾದ ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ಶ್ರೀ ಕೃಷ್ಣದೇವರಾಯರು ಶ್ರೀ ಲಕ್ಷ್ಮೀಗಣಪತಿ ದೇವರು ಬಯಲಲ್ಲಿ ಇರುವುದನ್ನು ಕಂಡು ನಂತರ ಶ್ರೀ ಲಕ್ಷ್ಮೀ ಗಣಪತಿ ದೇವರಿಗೆ ಆಲಯವನ್ನು ನಿರ್ಮಿಸಿದರು ಎಂದು ಹೇಳುತ್ತಾರೆ. ದೇವಾಲಯದ ಸುತ್ತಲೂ ಹಲವು ಶಾಸನಗಳು ಇರುತ್ತವೆ.
ಭೇಟಿ ನೀಡಿ








