ಕಗ್ಗಲಡು ಪಕ್ಷಿಧಾಮವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಸಿರಾ ತಾಲೂಕು ಕಗ್ಗಲಡು ಎಂಬ ಗ್ರಾಮದಲ್ಲಿ ಇದೆ. ಈ ಹಳ್ಳಿಯಲ್ಲಿರುವ ಮರಗಳಲ್ಲಿ ಬಣ್ಣದ ಕೊಕ್ಕರೆ (painted storks) ಮತ್ತು ನಾರೇಕ್ಯಾತ ಅಥವಾ ಬೂದುಬಕ (grey herons) ಪಕ್ಷಿಗಳು ವಲಸೆ ಬಂದು ತಮ್ಮ ವಂಶಾಭಿವೃದ್ಧಿ ಮಾಡುವುದರಿಂದ, ಈ ಪ್ರದೇಶವನ್ನು 1999 ರಿಂದ ಇದೊಂದು ಪಕ್ಷಿಧಾಮವೆಂದು ಗುರುತಿಸಲ್ಪಟ್ಟಿದೆ ಮತ್ತು ಈ ಪಕ್ಷಿಧಾಮಕ್ಕೆ ಕಗ್ಗಲಡು ಪಕ್ಷಿಧಾಮ ಎಂದು ಕರೆಯುತ್ತಾರೆ.
ಕಗ್ಗಲಡು ಪಕ್ಷಿಧಾಮವು ಬೆಂಗಳೂರಿಂದ 131 ಕಿ.ಮೀ ದೂರದಲ್ಲಿದೆ ಮತ್ತು ತುಮಕೂರಿನಿಂದ 64 ಕಿ.ಮೀ ದೂರದಲ್ಲಿದೆ ಹಾಗೂ ಸಿರಾ ಪಟ್ಟಣದಿಂದ 10 ಕಿ.ಮೀ ದೂರದಲ್ಲಿದೆ.
ಮಂಡ್ಯ ಜಿಲ್ಲೆಯ ಕೊಕ್ಕರೆ ಬೆಳ್ಳೂರು ಅಭಯಾರಣ್ಯದ ನಂತರ, ಕಗ್ಗಲಡು ದಕ್ಷಿಣ ಭಾರತದ ಎರಡನೇ ಅತಿದೊಡ್ಡ ಬಣ್ಣದ ಕೊಕ್ಕರೆ ಅಭಯಾರಣ್ಯ ಎಂದು ಹೇಳಲಾಗುತ್ತದೆ. ಇಲ್ಲಿ ಪಕ್ಷಿಗಳು ಸಾಮಾನ್ಯವಾಗಿ ಈ ಪಕ್ಷಿಧಾಮದಲ್ಲಿ ಸುಮಾರು ಆರು ತಿಂಗಳ ಕಾಲ ಇರುತ್ತವೆ, ಫೆಬ್ರವರಿಯಲ್ಲಿ ಗೂಡುಕಟ್ಟುವ ಋತುವಿಗಾಗಿ ಗುಂಪು ಗುಂಪುಗಳಾಗಿ ಪಕ್ಷಿಗಳು ಆಗಮಿಸುತ್ತವೆ. ಆಗಸ್ಟ್ ಅಂತ್ಯದ ವೇಳೆಗೆ, ವಲಸೆ ಹಕ್ಕಿಗಳು ನಿರ್ಗಮಿಸುತ್ತವೆ.
1999ರಲ್ಲಿ ಇಲ್ಲಿನ ಪಕ್ಷಿಧಾಮ ತುಮಕೂರಿನ ವೈಲ್ಡ್ ಲೈಫ್ ಅವೇರ್ ನೇಚರ್ ಕ್ಲಬ್ (WANC) ಎಂಬ ಸರ್ಕಾರೇತರ ಸಂಸ್ಥೆಯಿಂದ ಹೊರಜಗತ್ತಿಗೆ ಪರಿಚಯಿಸಲ್ಪಟ್ಟಿತು. ಈ ಪಕ್ಷಿಧಾಮವು ಪಕ್ಷಿ ಪ್ರಿಯರಿಗೆ ಒಂದು ಪ್ರವಾಸಿ ತಾಣವಾಗಿದೆ.
ಭೇಟಿ ನೀಡಿ