ಮಣಿಪಾಲ್ ಮ್ಯೂಸಿಯಂ ಆಫ್ ಅನಾಟಮಿ & ಪ್ಯಾಥಾಲಜಿ

ಮಣಿಪಾಲ್ ಮ್ಯೂಸಿಯಂ ಆಫ್ ಅನಾಟಮಿ & ಪ್ಯಾಥಾಲಜಿವು ಕರ್ನಾಟಕ ರಾಜ್ಯದ ಉಡುಪಿಯಲ್ಲಿ ಇರುವ, ಅಂಗರಚನಾಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ. ಎಸ್.ಎಸ್. ಗಾಡ್ಬೋಲ್ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾದ ವಸ್ತುಸಂಗ್ರಹಾಲಯವಾಗಿದೆ. ಈ ವಸ್ತುಸಂಗ್ರಹಾಲಯವು 1954 ರಲ್ಲಿ ತೆರೆಯಲಾಯಿತು. ಮಣಿಪಾಲದಲ್ಲಿರುವ ಈ ಅಂಗರಚನಾಶಾಸ್ತ್ರ ಮತ್ತು ರೋಗಶಾಸ್ತ್ರ ವಸ್ತು ಸಂಗ್ರಹಾಲಯವು ಏಷ್ಯಾದಲ್ಲೇ ಅತಿ ದೊಡ್ಡದಾಗಿದೆ.

ಈ ಸಂಗ್ರಹಾಲಯವು ಬೆಂಗಳೂರಿಂದ 393 ಕಿ.ಮೀ ಮತ್ತು ಮಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ. ಹಾಗೂ ಉಡುಪಿಯಿಂದ 05 ಕಿ.ಮೀ ಮತ್ತು ಉಡುಪಿ ರೈಲ್ವೆ ನಿಲ್ದಾಣದಿಂದ ಕೇವಲ 04 ಕಿ.ಮೀ ದೂರದಲ್ಲಿದೆ.

ಭಾರತದ ವಿಶಿಷ್ಟ ವಸ್ತುಸಂಗ್ರಹಾಲಯಗಳಲ್ಲಿ ಒಂದಾದ ಇದು ಜೀವ ವಿಜ್ಞಾನ ವಿದ್ಯಾರ್ಥಿಗಳು ಮತ್ತು ಮಕ್ಕಳಿಗೆ ಬಹಳ ಮಾಹಿತಿಯುಕ್ತವಾಗಿದೆ. ವಯಸ್ಕರಿಗೆ ಟಿಕೆಟ್ ಬೆಲೆ Rs.10/- ಮತ್ತು 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಟಿಕೆಟ್ ಬೆಲೆ Rs.5/- ಶುಲ್ಕ ವಿಧಿಸಲಾಗುತ್ತದೆ. ವಸ್ತುಸಂಗ್ರಹಾಲಯದ ಒಳಗೆ ಛಾಯಾಗ್ರಹಣಕ್ಕೆ ಅನುಮತಿಸಲಾಗುವುದಿಲ್ಲ. ಈ ಸಂಗ್ರಹಾಲಯವ ಬೆಳಿಗ್ಗೆ 9.00 ರಿಂದ ಸಂಜೆ 5.30 ರವರೆಗೆ ತೆರೆದಿರುತ್ತದೆ.

ನವೆಂಬರ್ 2012 ರಲ್ಲಿ ಮಣಿಪಾಲ್ ಮ್ಯೂಸಿಯಂ ಆಫ್ ಅನ್ಯಾಟಮಿ ಅಂಡ್ ಪ್ಯಾಥಾಲಜಿ ಎಂದು ನವೀಕರಿಸಿ ಮರುನಾಮಕರಣ ಮಾಡಲಾಯಿತು, ವಿಸ್ತಾರವಾದ ಅನ್ಯಾಟಮಿ ವಿಭಾಗವು ಮಾನವ ದೇಹದ ತಲೆಯಿಂದ ಕಾಲಿನವರೆಗೆ ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ಉತ್ತಮವಾಗಿ ಸಂರಕ್ಷಿಸಲಾಗಿದೆ. ತುಲನಾತ್ಮಕ ಅಂಗರಚನಾಶಾಸ್ತ್ರದ ವಿಭಾಗವು ವಿವಿಧ ಇತರ ಪ್ರಾಣಿಗಳ ಅಸ್ಥಿಪಂಜರಗಳನ್ನು ಹೊಂದಿದೆ ಮತ್ತು ಎಚ್ಚರಿಕೆಯಿಂದ ರಚಿಸಲಾದ ಮಾದರಿಗಳು ಮತ್ತು ಚಾರ್ಟ್‌ಗಳು ಸಂಪೂರ್ಣ ಅನುಭವವನ್ನು ಹೆಚ್ಚಿಸುತ್ತವೆ.

ವಸ್ತುಸಂಗ್ರಹಾಲಯವನ್ನು ಮುಖ್ಯವಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ

ಅಂಗರಚನಾಶಾಸ್ತ್ರ : ಅಂಗರಚನಾಶಾಸ್ತ್ರ ವಿಭಾಗದಲ್ಲಿ ಮಾನವ ದೇಹದ ವಿವಿಧ ಭಾಗಗಳು ಹಾಗೂ ಅಂಗಗಳ ಮಾದರಿಗಳನ್ನು ಸುಲಭವಾಗಿ ಗ್ರಹಿಸಬಹುದಾದ ರೀತಿಯಲ್ಲಿ ಪ್ರದರ್ಶಿಸಲಾಗಿದೆ. ಈ ವಿಭಾಗದಲ್ಲಿ ತಲೆಯಿಂದ ಕಾಲಿನವರೆಗೆ ದೇಹದ ಪ್ರತಿಯೊಂದು ಅಂಗ ವ್ಯವಸ್ಥೆಯನ್ನು ಪ್ರತ್ಯೇಕ ಘಟಕಗಳಾಗಿ ವಿವರಿಸಲಾಗಿದೆ. ಜೊತೆಗೆ, ತುಲನಾತ್ಮಕ ಅಂಗರಚನಾಶಾಸ್ತ್ರ ವಿಭಾಗವಿರುವುದು ವಿಶಿಷ್ಟವಾಗಿದೆ. ಇಲ್ಲಿ ವಿವಿಧ ಪ್ರಾಣಿಗಳ ಅಸ್ಥಿಪಂಜರಗಳು ಹಾಗೂ ಮೂಳೆಗಳ ಸಮೃದ್ಧ ಸಂಗ್ರಹವನ್ನು ನೋಡಬಹುದು, ಇದು ಮಾನವ ದೇಹದೊಂದಿಗೆ ಹೋಲಿಕೆ ಮಾಡಲು ನೆರವಾಗುತ್ತದೆ.

ರೋಗಶಾಸ್ತ್ರ : ರೋಗಶಾಸ್ತ್ರ ವಿಭಾಗವು ರೋಗಪೀಡಿತ ಅಂಗಗಳು ಮತ್ತು ದೇಹದ ಭಾಗಗಳನ್ನು ಪ್ರದರ್ಶಿಸುತ್ತದೆ. ಈ ವಿಭಾಗದಲ್ಲಿ ಜೀವನಶೈಲಿ ಸಂಬಂಧಿತ ರೋಗಗಳು ಹಾಗೂ ಅವುಗಳ ಪರಿಣಾಮವನ್ನು ಪ್ರತಿಬಿಂಬಿಸುವ ಮಾದರಿಗಳನ್ನು ಕೂಡ ಪ್ರತ್ಯಕ್ಷವಾಗಿ ವೀಕ್ಷಿಸಬಹುದಾಗಿದೆ. ಇದರಿಂದ ಮಾನವರಲ್ಲಿ ಉಂಟಾಗುವ ವಿವಿಧ ರೋಗಗಳ ಬಗ್ಗೆ ಸ್ಪಷ್ಟವಾದ ಅರಿವನ್ನು ಪಡೆಯಬಹುದು.

ಈ ವಸ್ತುಸಂಗ್ರಹಾಲಯದಲ್ಲಿ ಇರುವ ಇತರೆ ಸಂಗ್ರಹಾಲಯಗಳು

  • ಔಷಧಶಾಸ್ತ್ರ ವಸ್ತು ಸಂಗ್ರಹಾಲಯ
  • ಮೂಳೆಚಿಕಿತ್ಸಾ ವಸ್ತು ಸಂಗ್ರಹಾಲಯ
  • ಸಮುದಾಯ ಔಷಧ ವಸ್ತು ಸಂಗ್ರಹಾಲಯ
  • ಜನರಲ್ ಸರ್ಜರಿ ಮ್ಯೂಸಿಯಂ
  • ಫೋರೆನ್ಸಿಕ್ ಮೆಡಿಸಿನ್ ವಸ್ತುಸಂಗ್ರಹಾಲಯ