ಭೀಮಕೋಲ ಪಂಚವಟಿ ವನ

ಭೀಮಕೋಲ ಪಂಚವಟಿ ವನವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಹಣಕೋಣ ಸಮೀಪದ ಭೀಮಕೋಲ ಪ್ರದೇಶದಲ್ಲಿ, ಸಾಮಾಜಿಕ ಅರಣ್ಯ ಇಲಾಖೆಯ ವಿಶೇಷ ಆಸಕ್ತಿಯಿಂದ ಅಭಿವೃದ್ಧಿಪಡಿಸಲಾದ ಸುಂದರ ಪರಿಸರ ಪ್ರವಾಸಿ ತಾಣವಾಗಿದೆ.

ಭೀಮಕೋಲ ಪಂಚವಟಿ ವನದ ದೂರಗಳು

  • ಬೆಂಗಳೂರು – 531 ಕಿ.ಮೀ
  • ಕಾರವಾರ – 16 ಕಿ.ಮೀ
  • ಕಾರವಾರ ರೈಲ್ವೆ ನಿಲ್ದಾಣ – 22 ಕಿ.ಮೀ

ಪಂಚವಟಿ ವನವು ಪ್ರತಿದಿನ ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ. ಈ ವನಕ್ಕೆ ಪ್ರವೇಶಿಸಲು ಪ್ರತಿ ವ್ಯಕ್ತಿಯು ರೂ. 10/- ಪ್ರವೇಶ ಶುಲ್ಕವನ್ನು ಪಾವತಿಸಬೇಕು.

ಸಾಮಾಜಿಕ ಅರಣ್ಯ ಇಲಾಖೆಯ ಪ್ರಯತ್ನದಿಂದ ಭೀಮಕೋಲ ಪ್ರದೇಶವು ಸುಂದರ ವನವಾಗಿ ರೂಪುಗೊಂಡಿದ್ದು, ಇಲ್ಲಿ ನಿರ್ಮಿಸಲಾದ ಪಂಚವಟಿ ವನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಭೀಮಕೋಲ ಅಣೆಕಟ್ಟಿನ ಸಮೀಪ ಈ ವನವನ್ನು ನಿರ್ಮಿಸಲಾಗಿದೆ.

ರಾಮಾಯಣದಲ್ಲಿ ಉಲ್ಲೇಖವಾಗುವ ಪಂಚವಟಿ ವನದ ಮಾದರಿಯಲ್ಲಿ, ಇಲ್ಲಿ ಆಲ, ಅರಳಿ, ನೆಲ್ಲಿ, ಅತ್ತಿ ಹಾಗೂ ಬಿಲ್ವ ಮರಗಳನ್ನು ನೆಟ್ಟು ವಿಶೇಷ ವನವನ್ನು ಸೃಷ್ಟಿಸಲಾಗಿದೆ. ಇದರೊಂದಿಗೆ ರಾಶಿ ವನ ಹಾಗೂ ಚಿಟ್ಟೆ ಉದ್ಯಾನ ಕೂಡ ಅಭಿವೃದ್ಧಿಪಡಿಸಲಾಗಿದೆ.

ಹಚ್ಚಹಸಿರಿನ ಪ್ರಕೃತಿಯ ಮಧ್ಯೆ ನೆಲೆಗೊಂಡಿರುವ ಭೀಮಕೋಲ್ ಕೆರೆಯು ಪ್ರಕೃತಿ ಪ್ರಿಯರಿಗೆ ಅತ್ಯಂತ ಆಕರ್ಷಕ ತಾಣವಾಗಿದೆ. ಸರೋವರದ ಸೌಂದರ್ಯ, ಸುತ್ತಲಿನ ಹಸಿರು ಕಣಿವೆಗಳು ಹಾಗೂ ಪ್ರಶಾಂತ ವಾತಾವರಣವು ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಭೀಮಕೋಲ ಅಣೆಕಟ್ಟು ಮತ್ತು ಅದರ ಸುತ್ತಮುತ್ತಲಿನ ನೈಸರ್ಗಿಕ ಪರಿಸರವು ಈ ಪ್ರದೇಶದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ.