ಸಾತೋಡಿ ಜಲಪಾತವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಪ್ರಕೃತಿ ತಾಣವಾಗಿದೆ. ಹಲವಾರು ಸಣ್ಣ ಝರಿಗಳಿಂದ ಹರಿದುಬರುವ ನೀರು ಒಂದಾಗಿ ಸೇರಿ ಸುಮಾರು 15 ಮೀಟರ್ ಎತ್ತರದಿಂದ ಧುಮ್ಮಿಕ್ಕುವುದರಿಂದ ಈ ಅದ್ಭುತ ಜಲಪಾತ ನಿರ್ಮಾಣಗೊಂಡಿದೆ. ಹಚ್ಚಹಸಿರಿನ ಅರಣ್ಯದ ಮಧ್ಯೆ ನೆಲೆಗೊಂಡಿರುವ ಈ ಜಲಪಾತವು ಪ್ರಕೃತಿ ಪ್ರಿಯರು ಮತ್ತು ಪ್ರವಾಸಿಗರನ್ನು ತನ್ನ ಸೌಂದರ್ಯದಿಂದ ಆಕರ್ಷಿಸುತ್ತದೆ.
ಸಾತೋಡಿ ಜಲಪಾತದ ದೂರಗಳು
- ಬೆಂಗಳೂರು – 447 ಕಿ.ಮೀ
- ಕಾರವಾರ – 119 ಕಿ.ಮೀ
- ಯಲ್ಲಾಪುರ – 27 ಕಿ.ಮೀ
ಈ ಜಲಪಾತವು ದಾಂಡೇಲಿ ಸಂರಕ್ಷಿತ ಅರಣ್ಯದ ವ್ಯಾಪ್ತಿಯಲ್ಲಿ ದಟ್ಟ ಕಾಡಿನ ಮಧ್ಯೆ ನೆಲೆಗೊಂಡಿದೆ. ಹಲವಾರು ಝರಿಗಳಿಂದ ಹರಿದುಬರುವ ನೀರು ಒಂದಾಗಿ ಸೇರಿ ಸುಮಾರು 15 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ. ನಂತರ ಈ ನೀರು ಕೊಡಸಳ್ಳಿ ಜಲಾಶಯದ ಮೂಲಕ ಕಾಳಿನದಿಯನ್ನು ಸೇರುತ್ತದೆ.
ಇಲ್ಲಿನ ತಂಪಾದ ವಾತಾವರಣ, ಹಚ್ಚಹಸಿರಿನ ವನಸಿರಿ, ಬಣ್ಣಬಣ್ಣದ ವಿವಿಧ ಜಾತಿಯ ಹಕ್ಕಿಗಳ ಚಿಲಿಪಿಲಿ ಕಲರವ ಹಾಗೂ ಬಂಡೆಗಳ ನಡುವೆ ಚಿಮ್ಮುತ್ತಾ ಕೆಳಗೆ ಹರಿಯುವ ಜಲರಾಶಿಯ ದೃಶ್ಯವು ನೋಡುಗರ ಮನಸೂರೆಗೊಳ್ಳುತ್ತದೆ.
ವರ್ಷಪೂರ್ತಿ ತನ್ನ ಸೊಬಗಿನಿಂದ ಕಂಗೊಳಿಸುವ ಸಾತೋಡಿ ಜಲಪಾತವು ಮಳೆಗಾಲದಲ್ಲಿ ಮತ್ತಷ್ಟು ವೈಭವದಿಂದ ಕಂಗೊಳಿಸುತ್ತದೆ. ಆ ಸಮಯದಲ್ಲಿ ಅದರ ಸೌಂದರ್ಯ ಮತ್ತು ಮೋಹಕತೆ ಹಲವು ಪಟ್ಟು ಹೆಚ್ಚಾಗಿ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ. ನಿಸರ್ಗದ ಮಡಿಲಲ್ಲಿ ಹಾಲಿನ ನೊರೆಯಂತೆ ಧುಮ್ಮಿಕ್ಕುವ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರತಿದಿನ ಅನೇಕ ಪ್ರವಾಸಿಗರು ಇಲ್ಲಿ ಆಗಮಿಸುತ್ತಾರೆ.



