ಸುಪಾ ಅಣೆಕಟ್ಟು

ಸುಪಾ ಅಣೆಕಟ್ಟು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಅವೇಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶಗುಡಿ ಗ್ರಾಮದ ಸಮೀಪದಲ್ಲಿರುವ ಪ್ರಮುಖ ಅಣೆಕಟ್ಟಾಗಿದೆ. ಈ ಅಣೆಕಟ್ಟನ್ನು ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಸುಮಾರು 101 ಮೀಟರ್ ಎತ್ತರ ಹೊಂದಿರುವ ಇದು ಕರ್ನಾಟಕದ ಅತಿ ಎತ್ತರದ ಅಣೆಕಟ್ಟಾಗಿದೆ.

ಸುಪಾ ಅಣೆಕಟ್ಟಿನ ದೂರಗಳು

  • ಬೆಂಗಳೂರು – 470 ಕಿ.ಮೀ
  • ಕಾರವಾರ – 108 ಕಿ.ಮೀ
  • ಜೋಯಿಡಾ – 25 ಕಿ.ಮೀ
  • ದಾಂಡೇಲಿ – 20 ಕಿ.ಮೀ

101 ಮೀಟರ್ ಎತ್ತರ ಮತ್ತು 332 ಮೀಟರ್ ಉದ್ದ ಹೊಂದಿರುವ ಈ ಅಣೆಕಟ್ಟು 15 × 10 ಮೀಟರ್ ಗಾತ್ರದ ಮೂರು ರೇಡಿಯಲ್ ಗೇಟ್‌ಗಳನ್ನು ಹೊಂದಿದೆ. ಅಣೆಕಟ್ಟಿನ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 4.178 ಘನ ಕಿಲೋಮೀಟರ್ (ಸುಮಾರು 147 ಟಿಎಂಸಿ) ಆಗಿದೆ.

ಈ ಅಣೆಕಟ್ಟು ಕಾಳಿ ನದಿ ಜಲವಿದ್ಯುತ್ ಯೋಜನೆಯ ಪ್ರಮುಖ ಜಲಾಶಯವಾಗಿದ್ದು, ಒಟ್ಟು 1,180 ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯ ಹೊಂದಿರುವ ವಿದ್ಯುತ್ ಕೇಂದ್ರಗಳಿಗೆ ನೀರು ಪೂರೈಸುತ್ತದೆ. ಇದರಲ್ಲಿ 810 ಮೆಗಾವ್ಯಾಟ್ ಸಾಮರ್ಥ್ಯದ ನಾಗಝರಿ ಜಲವಿದ್ಯುತ್ ಕೇಂದ್ರವೂ ಸೇರಿದೆ.

ಅಣೆಕಟ್ಟಿನ ಬುಡದಲ್ಲಿರುವ ಜಲವಿದ್ಯುತ್ ಕೇಂದ್ರದಲ್ಲಿ ತಲಾ 50 ಮೆಗಾವ್ಯಾಟ್ ಸಾಮರ್ಥ್ಯದ ಎರಡು ವಿದ್ಯುತ್ ಜನರೇಟರ್‌ಗಳಿವೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಕರ್ನಾಟಕದ ವಿವಿಧ ಭಾಗಗಳಿಗೆ ಪೂರೈಸಲಾಗುತ್ತದೆ.

ಈ ಅಣೆಕಟ್ಟನ್ನು ಹಿಂದೂಸ್ತಾನ್ ಸ್ಟೀಲ್ ವರ್ಕ್ಸ್ ಕನ್ಸ್ಟ್ರಕ್ಷನ್ ಲಿಮಿಟೆಡ್ (HSCL) ನಿರ್ಮಿಸಿದ್ದು, ಇದರ ವಿನ್ಯಾಸ, ಮಾಲೀಕತ್ವ ಮತ್ತು ನಿರ್ವಹಣೆಯನ್ನು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) ವಹಿಸಿಕೊಂಡಿದೆ. ಜಲವಿದ್ಯುತ್ ಕೇಂದ್ರವು 1985ರಲ್ಲಿ ಕಾರ್ಯಾರಂಭ ಮಾಡಿದ್ದು, ಈ ಅಣೆಕಟ್ಟನ್ನು ಮುಖ್ಯವಾಗಿ ಜಲವಿದ್ಯುತ್ ಉತ್ಪಾದನೆಗಾಗಿ ಬಳಸಲಾಗುತ್ತಿದೆ.