ಹೊಳೆದಂಡೆ ಶ್ರೀ ಛಾಯಾಭಗವತಿ ಅಮ್ಮನವರ ದೇವಾಲಯ

ಹೊಳೆದಂಡೆ ಶ್ರೀ ಛಾಯಾಭಗವತಿ ಅಮ್ಮನವರ ದೇವಾಲಯವು ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಕೃಷ್ಣಾ ನದಿಯ ದಡದಲ್ಲಿರುವ ಪವಿತ್ರ ದೇವಾಲಯವಾಗಿದೆ. ಸೂರ್ಯದೇವನ ಪತ್ನಿಯಾದ ಸಂಜ್ಞಾ ದೇವಿಯ ಪ್ರತಿರೂಪವೇ ಛಾಯಾ ದೇವಿ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಛಾಯಾ ದೇವಿಯನ್ನು ಆರಾಧಿಸುವ ದೇವಾಲಯಗಳು ಅತ್ಯಂತ ವಿರಳವಾಗಿದ್ದು, ಅಂತಹ ಅಪರೂಪದ ದೇವಾಲಯಗಳಲ್ಲಿ ಯಾದಗಿರಿ ಜಿಲ್ಲೆಯ ನಾರಾಯಣಪುರದಲ್ಲಿರುವ ಕೃಷ್ಣಾ ನದಿಯ ದಡದ ಸುಕ್ಷೇತ್ರ ಛಾಯಾಭಗವತಿ ದೇವಾಲಯ ಪ್ರಮುಖವಾಗಿದೆ.

ಹೊಳೆದಂಡೆ ಶ್ರೀ ಛಾಯಾಭಗವತಿ ಅಮ್ಮನವರ ದೇವಾಲಯದ ದೂರಗಳು

  • ಬೆಂಗಳೂರು – 443 ಕಿ.ಮೀ
  • ಯಾದಗಿರಿ – 113 ಕಿ.ಮೀ
  • ಹುಣಸಗಿ– 37 ಕಿ.ಮೀ
  • ಯಾದಗಿರಿ ರೈಲ್ವೆ ನಿಲ್ದಾಣ – 112 ಕಿ.ಮೀ

ಈ ದೇವಾಲಯದ ವಿಶೇಷವೆಂದರೆ, ವರ್ಷದ ನಿರ್ದಿಷ್ಟ ದಿನಗಳಲ್ಲಿ ಮಾತ್ರ ಸೂರ್ಯಾಸ್ತದ ಕಿರಣಗಳು ನೇರವಾಗಿ ದೇವಿಯ ವಿಗ್ರಹದ ಮೇಲೆ ಬೀಳುತ್ತವೆ. ಇದು ಈ ಕ್ಷೇತ್ರದ ಅಪರೂಪದ ವೈಶಿಷ್ಟ್ಯವಾಗಿದೆ. ದೇವಾಲಯದ ಮುಂಭಾಗದಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ, ಕೆಲವೊಮ್ಮೆ ದೇವಾಲಯದ ಭಾಗವು ನೀರಿನಲ್ಲಿ ಮುಳುಗುತ್ತದೆ.

ಇಲ್ಲಿನ ಮತ್ತೊಂದು ವಿಶೇಷವೆಂದರೆ, ಕೃಷ್ಣಾ ನದಿಯ ಮಧ್ಯಭಾಗದಲ್ಲಿ ಉತ್ತರವಾಹಿನಿ, ಸೂರ್ಯತೀರ್ಥ, ಚಂದ್ರತೀರ್ಥ, ಬ್ರಹ್ಮವೇಣಿ, ವಿಷ್ಣುವೇಣಿ, ರುದ್ರವೇಣಿ, ಗೋಮುಖ, ಬ್ರಹ್ಮತೀರ್ಥ, ಸ್ವರ್ಗತೀರ್ಥ, ನರಕತೀರ್ಥ, ವಶಿಷ್ಠತೀರ್ಥ, ಗದಾತೀರ್ಥ, ಪದ್ಮತೀರ್ಥ, ರಾಮಗಯಾ, ಕಪಿಲತೀರ್ಥ, ಧನುಷ್ಕೋಟಿ, ಕನ್ಯಾಹೃದಯ ಹಾಗೂ ಇಂದ್ರಪ್ರಸ್ಥ ಎಂಬ ಹದಿನೆಂಟು ಪವಿತ್ರ ತೀರ್ಥಗಳಿವೆ.

ಬೇಸಿಗೆಯ ವೇಳೆಯಲ್ಲಿ ನದಿಯ ನೀರಿನ ಮಟ್ಟ ಕಡಿಮೆಯಾದಾಗ ಈ ತೀರ್ಥಗಳನ್ನು ಸ್ಪಷ್ಟವಾಗಿ ಕಾಣಬಹುದು. ಸ್ಥಳೀಯ ನಂಬಿಕೆಯ ಪ್ರಕಾರ, ಶ್ರೀರಾಮಚಂದ್ರರು ವನವಾಸದ ಸಂದರ್ಭದಲ್ಲಿ ಇಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಆದ್ದರಿಂದ ಪ್ರತಿವರ್ಷ ಅಕ್ಷಯ ತೃತೀಯೆಯಂದು ಸಾವಿರಾರು ಭಕ್ತರು ಇಲ್ಲಿ ಆಗಮಿಸಿ ಹದಿನೆಂಟು ಪವಿತ್ರ ತೀರ್ಥಗಳಲ್ಲಿ ಸ್ನಾನ ಮಾಡಿ ಪುನೀತರಾಗುತ್ತಾರೆ.

ಸ್ಥಳ ವಿಶೇಷ

ಸ್ಥಳೀಯ ಪುರಾಣದ ಪ್ರಕಾರ, ಸೂರ್ಯದೇವನ ಶಾಪದಿಂದ ಛಾಯಾ ದೇವಿಯು ಮಾನವ ರೂಪವನ್ನು ಧರಿಸುತ್ತಾಳೆ. ವಿಷ್ಣುವನ್ನು ಮೋಹಿನಿ ರೂಪದಲ್ಲಿ ದರ್ಶನ ಮಾಡಿದಾಗ ಮಾತ್ರ ಶಾಪ ವಿಮೋಚನೆ ದೊರೆಯುತ್ತದೆ ಎಂದು ಸೂರ್ಯದೇವನು ತಿಳಿಸುತ್ತಾನೆ. ತಪಸ್ಸಿಗಾಗಿ ಅನೇಕ ಸ್ಥಳಗಳಲ್ಲಿ ಪ್ರಯತ್ನಿಸಿದರೂ ಏಕಾಗ್ರತೆ ಸಿಗದ ಛಾಯಾ ದೇವಿಗೆ, ದೇವರ್ಷಿ ನಾರದರು ಕೃಷ್ಣಾ ನದಿಯ ತೀರದಲ್ಲಿ ತಪಸ್ಸು ಮಾಡುವಂತೆ ಸಲಹೆ ನೀಡುತ್ತಾರೆ.

ನಾರದರ ಸೂಚನೆಯಂತೆ ಕೃಷ್ಣಾ ನದಿಯ ದಡದಲ್ಲಿ ಕಠಿಣ ತಪಸ್ಸು ಆಚರಿಸಿದ ಛಾಯಾ ದೇವಿಯ ಭಕ್ತಿಗೆ ಸಂತುಷ್ಟನಾದ ಶ್ರೀ ಮಹಾವಿಷ್ಣುವು ಮೋಹಿನಿ ರೂಪದಲ್ಲಿ ಪ್ರತ್ಯಕ್ಷನಾಗಿ ಆಕೆಗೆ ಶಾಪ ವಿಮೋಚನೆ ನೀಡುತ್ತಾನೆ. ವಿಷ್ಣುವು ಮೋಹಿನಿ ಎಂಬ ಸ್ತ್ರೀ ರೂಪದಲ್ಲಿ ದರ್ಶನ ನೀಡಿದ ಕಾರಣದಿಂದಲೇ ಈ ಕ್ಷೇತ್ರವು ಛಾಯಾಭಗವತಿ ಕ್ಷೇತ್ರ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ ಎಂದು ಸ್ಥಳ ಮಹಾತ್ಮ್ಯದಲ್ಲಿ ಉಲ್ಲೇಖಿಸಲಾಗಿದೆ.

ಯಾದಗಿರಿ
ಹುಣಸಿಗಿ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಯಾದಗಿರಿ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section