ಮೈಸೂರುಪಾಕ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇದು ಕರ್ನಾಟಕದ ಒಂದು ಪ್ರಸಿದ್ದ ಸಿಹಿಯಾಗಿದೆ. ಸಿಹಿ ತಿನಸಿನ ಅಂಗಡಿಗೆ ಹೋದ ತಕ್ಷಣ ತಲೆಗೆ ಬರುವಂತಹ ಎಷ್ಟೋ ಸಿಹಿಗಳಲ್ಲಿ ಈ ಮೈಸೂರಿಪಾಕ್ ಕೂಡ ಒಂದಾಗಿರುತ್ತದೆ. ಹದವಾಗಿ ಸಿಹಿ ಹೊಂದಿರುವ ಈ ಮೈಸೂರ್ ಪಾಕ್ ಎಲ್ಲರ ಮನಸನ್ನು ಕದ್ದಿದ್ದೇ. ತುಪ್ಪ, ಸಕ್ಕರೆ, ಕಡಲೆ ಹಿಟ್ಟು, ಏಲಕ್ಕಿ ಬಳಸಿ ತಯಾರಿಸುವ ಈ ಮೈಸೂರುಪಾಕ್ ಹುಟ್ಟಿಕೊಂಡಿದ್ದು ಮೈಸೂರ್ ಅರಮನೆಯ ಪಾಕಶಾಲೆಯಲ್ಲಿ.
ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಮೈಸೂರ್ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪನವರು ಈ ಹೊಸ ರೀತಿಯ ಸಿಹಿಯನ್ನು ಮಹಾರಾಜರಿಗೋಸ್ಕರ ತಯಾರಿಸಿದ್ದು. ಅನಂತರ ಮಹಾರಾಜರು ಇದಕ್ಕೆ ಮೈಸೂರು ಪಾಕ ಎಂದು ಹೆಸರಿಟ್ಟರು. ಮೈಸೂರಿನ ಹೆಸರಿನ ಮೈಸೂರು ಪಾಕ್ ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ವಿಶ್ವದ ಬೀದಿ ಆಹಾರದಲ್ಲಿ ಮೈಸೂರು ಪಾಕ್ 14 ನೇ ಸ್ಥಾನದಲ್ಲಿದ್ದು, ಜಾಗತಿಕ ಮನ್ನಣೆ ಗಳಿಸಿದೆ.