ಮೈಸೂರು ಪಾಕ್

ಮೈಸೂರುಪಾಕ್ ಯಾರಿಗೇ ಗೊತ್ತಿಲ್ಲ ಹೇಳಿ! ಇದು ಕರ್ನಾಟಕದ ಒಂದು ಪ್ರಸಿದ್ಧ ಸಿಹಿ. ಸಿಹಿ ತಿನಿಸಿನ ಅಂಗಡಿಗೆ ಹೋದ ತಕ್ಷಣ ತಲೆಗೆ ಬರುವ ಎಷ್ಟೋ ಸಿಹಿಗಳಲ್ಲಿ ಮೈಸೂರು ಪಾಕ್ ಕೂಡೊಂದಾಗಿದೆ. ಹದವಾದ ಸಿಹಿಯನ್ನು ಹೊಂದಿರುವ ಈ ಮೈಸೂರುಪಾಕ್ ಎಲ್ಲರ ಮನಸನ್ನೂ ಗೆದ್ದಿದೆ. ತುಪ್ಪ, ಸಕ್ಕರೆ, ಕಡಲೆಹಿಟ್ಟು ಮತ್ತು ಏಲಕ್ಕಿ ಬಳಸಿ ತಯಾರಿಸುವ ಈ ಮೈಸೂರುಪಾಕ್ ಮೈಸೂರಿನ ಅರಮನೆಯ ಪಾಕಶಾಲೆಯಲ್ಲಿಯೇ ಹುಟ್ಟಿಕೊಂಡದ್ದು.

ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜ ಒಡೆಯರ್ ಆಡಳಿತಕಾಲದಲ್ಲಿ ಮೈಸೂರಿನ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪನವರು ಈ ಹೊಸ ರೀತಿಯ ಸಿಹಿಯನ್ನು ಮಹಾರಾಜರಿಗಾಗಿ ತಯಾರಿಸಿದರು. ಅನಂತರ ಮಹಾರಾಜರು ಇದಕ್ಕೆ “ಮೈಸೂರು ಪಾಕ” ಎಂದು ಹೆಸರಿಟ್ಟರು. ಮೈಸೂರಿನ ಹೆಸರನ್ನು ಹೊತ್ತಿರುವ ಮೈಸೂರು ಪಾಕ್ ದೇಶ–ವಿದೇಶಗಳಲ್ಲಿ ಪ್ರಸಿದ್ಧಿಯನ್ನೂ ಪಡೆದಿದೆ. ವಿಶ್ವದ ಬೀದಿ ಆಹಾರಗಳ ಪಟ್ಟಿಯಲ್ಲಿ ಮೈಸೂರು ಪಾಕ್ 14ನೇ ಸ್ಥಾನ ಪಡೆದು ಜಾಗತಿಕ ಮನ್ನಣೆ ಗಳಿಸಿದೆ.