ಬಸವಕಲ್ಯಾಣ ಕೋಟೆಯು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನಲ್ಲಿ ಇರುವ ಚಾಲುಕ್ಯರ ಕಾಲದ 10ನೇ ಶತಮಾನದ ಐತಿಹಾಸಿಕ ಕೋಟೆಯಾಗಿದೆ. ಕ್ರಿಸ್ತಶಕದ 10ನೇ ಶತಮಾನದಲ್ಲಿ ಪಶ್ಚಿಮ ಚಾಲುಕ್ಯರು ತಮ್ಮ ರಾಜಧಾನಿಯನ್ನು ಮಂಗಳವಾಡದಿಂದ ಕಲ್ಯಾಣಕ್ಕೆ (ಇಂದಿನ ಬಸವಕಲ್ಯಾಣ) ಸ್ಥಳಾಂತರಿಸಿದರು. ಬಸವಕಲ್ಯಾಣ ಪಟ್ಟಣದ ಅವಿಭಾಜ್ಯ ಅಂಗವಾಗಿರುವ ಈ ಕೋಟೆಯು ಆ ಕಾಲದ ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿತ್ತು. ಇದೇ ಸ್ಥಳವು ಬಸವಣ್ಣನವರ ಸಮಾಜ ಸುಧಾರಣಾ ಚಳವಳಿಯ ಕರ್ಮಭೂಮಿಯಾಗಿದ್ದು, ನೂರಾರು ಲಿಂಗಾಯತ ಶರಣರು ತಮ್ಮ ತತ್ವಚಿಂತನೆ ಮತ್ತು ಸಾಮಾಜಿಕ ಕ್ರಾಂತಿಗೆ ಇಲ್ಲಿ ನೆಲೆ ಹಾಕಿದ್ದರು.
ಈ ಕೋಟೆಯು ಬೆಂಗಳೂರಿನಿಂದ 717 ಕಿ.ಮೀ (NH50 ಮೂಲಕ), 732 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 82 ಕಿ.ಮೀ ದೂರದಲ್ಲಿದೆ. ಹಾಗೂ ಬಸವಕಲ್ಯಾಣ ಪಟ್ಟಣದಿಂದ 2 ಕಿ.ಮೀ ದೂರದಲ್ಲಿದೆ.
ಚಾಲುಕ್ಯರ ತೈಲಪ II ನೇತೃತ್ವದಲ್ಲಿ ಚಾಲುಕ್ಯರು ರಾಷ್ಟ್ರಕೂಟರನ್ನು ಸೋಲಿಸಿದರು. ವಿಜಯದ ನಂತರ ಅವರು ತಮ್ಮ ರಾಜಧಾನಿಯನ್ನು ಕಲ್ಯಾಣದಲ್ಲಿ (ಇಂದಿನ ಬಸವಕಲ್ಯಾಣ) ಸ್ಥಾಪಿಸಿದರು. ಕೋಟೆಯಲ್ಲಿರುವ ಶಾಸನಗಳು ಈ ಸಂಗತಿಯನ್ನು ಸೂಚಿಸುತ್ತವೆ. ಭಾರತದ ಸ್ವಾತಂತ್ರ್ಯದ ನಂತರ ಅಧಿಕೃತವಾಗಿ ಬೀದರ್ ಜಿಲ್ಲೆಯಲ್ಲಿ ಕಲ್ಯಾಣವನ್ನು ಬಸವಕಲ್ಯಾಣ ಎಂದು ಮರುನಾಮಕರಣ ಮಾಡಲಾಯಿತು.
ಬಸವಕಲ್ಯಾಣ ಕೋಟೆಯನ್ನು ಕಲ್ಯಾಣಿ ಚಾಲುಕ್ಯ ರಾಜವಂಶದ ಸೋಮೇಶ್ವರ I, ಸೋಮೇಶ್ವರ II, ವಿಕ್ರಮಾದಿತ್ಯ VI, ಸೋಮೇಶ್ವರ III, ಜಗದೇಕ ಮಲ್ಲ III ಮತ್ತು ತೈಲಪ III ರಾಜರುಗಳು, ಕಲಚೂರಿ ರಾಜವಂಶದ ಬಿಜ್ಜಳ ದೇವ, ಯಾದವರು ಆಳಿದರು. ನಂತರದ ಆಡಳಿತಗಾರರಾದ ಮುಹಮ್ಮದ್ ಬಿನ್ ತುಘಲಕ್, ಬಹಮನಿ ಸುಲ್ತಾನರು, ಬೀದರ್ ಸುಲ್ತಾನರು, ಬಿಜಾಪುರ ಸುಲ್ತಾನರು, ಅಹ್ಮದ್‌ನಗರದ ಸುಲ್ತಾನರು, ವಿಜಯನಗರ ಸಾಮ್ರಾಜ್ಯ, ಮೊಘಲರು ಮತ್ತು ನಿಜಾಮರು ಕೋಟೆಯನ್ನು ನಿಯಂತ್ರಿಸಿದರು ಮತ್ತು ನವೀಕರಿಸಿದರು.
ಕೋಟೆಗೆ ಏಳು ದ್ವಾರಗಳಿವೆ, ಅವುಗಳಲ್ಲಿ ಐದು ಉತ್ತಮ ಸ್ಥಿತಿಯಲ್ಲಿವೆ. ಕೋಟೆಯ ಪ್ರವೇಶದ್ವಾರದಲ್ಲಿ, ಎರಡು ಪಾರ್ಶ್ವಗಳಲ್ಲಿ ಬಾಲ್ಕನಿಗಳನ್ನು ಹೊಂದಿರುವ ಘನ ಕಮಾನು ಇದೆ, ಎರಡೂ ಬದಿಗಳಲ್ಲಿ ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದು. ಕೇಂದ್ರ ಅಂಗಳವನ್ನು ಸುತ್ತುವರೆದಿರುವ ಕೋಟೆಯ ಗೋಡೆಗಳು ಕಾವಲು ಕೊಠಡಿಗಳನ್ನು ಹೊಂದಿವೆ, ಇವುಗಳನ್ನು ಕಾವಲುಗೋಪುರ ಅಥವಾ ಬುರುಗುಗಳೊಂದಿಗೆ ನಿರ್ಮಿಸಲಾಗಿದೆ ಮತ್ತು ಫಿರಂಗಿಗಳನ್ನೂ ಜೋಡಿಸಲಾಗಿದೆ. ಕೋಟೆಗೆ ಹೋಗುವ ಮಾರ್ಗದಲ್ಲಿ ಫಿರಂಗಿಗಳನ್ನು ಸಹ ಸಾಲಾಗಿ ಇರಿಸಲಾಗಿದೆ.
ಬಸವಕಲ್ಯಾಣ ವಸ್ತುಸಂಗ್ರಹಾಲಯ
ಚಾಲುಕ್ಯರ ಆಳ್ವಿಕೆಯಲ್ಲಿ ಜೈನ ಧರ್ಮವು ಪ್ರವರ್ಧಮಾನಕ್ಕೆ ಬಂದಿತು. ಚಾಲುಕ್ಯ ರಾಜರು ನಿರ್ಮಿಸಿದ ಕೋಟೆಯ ಗೋಡೆಗಳ ಮೇಲೆ ಹೆಚ್ಚಿನ ಸಂಖ್ಯೆಯ ಜೈನ ಚಿತ್ರಗಳಿವೆ. ಕೋಟೆಯ ಪಕ್ಕದಲ್ಲಿರುವ ವಸ್ತುಸಂಗ್ರಹಾಲಯವು 10 ಮತ್ತು 11ನೇ ಶತಮಾನಗಳಿಗೆ ಸೇರಿದ ಹಲವಾರು ಜೈನ ವಿಗ್ರಹಗಳನ್ನು ಹೊಂದಿದೆ. ಈಗ ಶಿಥಿಲಗೊಂಡಿರುವ ಜೈನ ದೇವಾಲಯವೂ ಇಲ್ಲಿ ಕಂಡುಬರುತ್ತದೆ.
ಬಸವಕಲ್ಯಾಣ ಮರುನಾಮಕರಣ ಇತಿಹಾಸ
12 ನೇ ಶತಮಾನದ ಕಲ್ಯಾಣವು ಸಮಾಜ ಸುಧಾರಕ ಬಸವೇಶ್ವರರಿಂದಾಗಿ ಬಸವಕಲ್ಯಾಣ ಎಂದು ಕರೆಯಲಾಯಿತು, ಬಸವಕಲ್ಯಾಣವು ದೊಡ್ಡ ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿಯ ಕೇಂದ್ರವಾಗಿತ್ತು. ಇದು ಕಲಿಕೆಯ ಕೇಂದ್ರವಾಯಿತು. ಬಸವೇಶ್ವರ, ಅಕ್ಕ ಮಹಾದೇವಿ, ಚನ್ನಬಸವಣ್ಣ, ಸಿದ್ಧರಾಮ ಮತ್ತು ಇನ್ನೂ ಅನೇಕ ಶರಣರು ಬಸವಕಲ್ಯಾಣದೊಂದಿಗೆ ಸಂಬಂಧ ಹೊಂದಿದ್ದಾರೆ.
ಕವಿಸೋಮೇಶ್ವರ, ಕಾಶ್ಮೀರದ ಕವಿ ಬಿಲ್ಹಣ ಮತ್ತು ಕವಿವಿಜ್ಞಾನೇಶ್ವರರು ಎರಡನೇ ವಿಕ್ರಮಾದಿತ್ಯನ ಕಾಲದಲ್ಲಿ ಕಲ್ಯಾಣದ ರಾಜಸಭೆಯಲ್ಲಿ ಪ್ರಮುಖ ಪಂಡಿತರಾಗಿದ್ದರು. ಕ್ರಿಸ್ತಶಕ 12ನೇ ಶತಮಾನದಲ್ಲಿ ರಾಜ ಬಿಜ್ಜಳನ ಆಳ್ವಿಕೆಯಲ್ಲಿ ಪ್ರಧಾನಿಯಾಗಿ ಸೇವೆಸಲ್ಲಿಸಿದ ಬಸವೇಶ್ವರರು ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ ಮತ್ತು ಲಿಂಗಭೇದವನ್ನು ನಿವಾರಿಸಲು ಕಲ್ಯಾಣದಲ್ಲಿ ಮಹತ್ವದ ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ರಾಂತಿಯನ್ನು ಪ್ರಾರಂಭಿಸಿದರು. ಅವರ ನೇತೃತ್ವದಲ್ಲಿ ವೀರಶೈವ ತತ್ವಶಾಸ್ತ್ರವು ಕಲ್ಯಾಣದಲ್ಲಿ ಪ್ರಬಲವಾಗಿ ಬೆಳೆದಿತು ಮತ್ತು ಸಮಾಜ ಸುಧಾರಣೆಯ ನವಯುಗಕ್ಕೆ ನಾಂದಿಯಾಗಿತು.
ಭೇಟಿ ನೀಡಿ




















