ಪುರಾತನ ಕಲ್ಲೇಶ್ವರ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿರುವ ಹೊಯ್ಸಳರ ಕಾಲದ ದೇವಾಲಯವಾಗಿದೆ. ಗ್ರಾಮದ ಆರಾಧ್ಯ ದೈವವಾದ ಕಲ್ಲೇಶ್ವರ ಸ್ವಾಮಿಯು ಭಕ್ತರು ಬೇಡಿದ ವರಗಳನ್ನು ಕರುಣಿಸುತ್ತಾನೆ ಎಂಬ ನಂಬಿಕೆಯಿದೆ. ಈ ದೇವಾಲಯವು ಈ ಭಾಗದ ಅಪಾರ ಮಹಿಮೆ ಹೊಂದಿರುವ ಪುಣ್ಯಕ್ಷೇತ್ರವಾಗಿದೆ. ಕಲ್ಲೇಶ್ವರ ಸ್ವಾಮಿ ಇಲ್ಲಿ ನೆಲೆಸಿರುವ ಕಾರಣದಿಂದಲೇ ಈ ಗ್ರಾಮಕ್ಕೆ “ಕಲ್ಲೇದೇವರಪುರ” ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.
ಪುರಾತನ ಕಲ್ಲೇಶ್ವರ ಸ್ವಾಮಿ ದೇವಾಲಯದ ದೂರಗಳು
- ಬೆಂಗಳೂರು – 224 ಕಿ.ಮೀ
- ದಾವಣಗೆರೆ – 58 ಕಿ.ಮೀ
- ಜಗಳೂರು – 15 ಕಿ.ಮೀ
- ದಾವಣಗೆರೆ ರೈಲ್ವೆ ನಿಲ್ದಾಣ – 59 ಕಿ.ಮೀ
ಈ ದೇಗುಲವು ಗ್ರಾಮದ ಮಧ್ಯಭಾಗದಲ್ಲಿದ್ದು, ಪೂರ್ವಾಭಿಮುಖವಾಗಿ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ 11ನೇ–12ನೇ ಶತಮಾನಗಳಲ್ಲಿ ನಿರ್ಮಿಸಲ್ಪಟ್ಟಿದೆ. ಗರ್ಭಗೃಹ, ಅಂತರಾಳ, ನವರಂಗ, ಮಹಾಮಂಟಪ, ನಂದಿಮಂಟಪ, ಉಯ್ಯಾಲೆಕಂಬ ಹಾಗೂ ಮಹಾದ್ವಾರ ಗೋಪುರಗಳನ್ನು ಒಳಗೊಂಡ ವಿಶಾಲ ದೇವಾಲಯವಾಗಿದೆ.
ಗರ್ಭಗೃಹದಲ್ಲಿ ಒಂದು ಅಡಿ ಎತ್ತರದ ಕಪ್ಪು ಶಿಲೆಯಲ್ಲಿ ಕೆತ್ತಲಾದ ನುಣುಪಾದ ಶಿವಲಿಂಗವಿದೆ. ನವರಂಗದಲ್ಲಿ ಹೊಯ್ಸಳ ಶೈಲಿಯ ನಾಲ್ಕು ಕಂಬಗಳಿವೆ. ಶಿವಲಿಂಗಕ್ಕೆ ಎದುರಾಗಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ, ನವರಂಗದಲ್ಲಿ ಗಣೇಶನ ಮೂರ್ತಿ ಹಾಗೂ ಪಶ್ಚಿಮಾಭಿಮುಖವಾಗಿ ಸ್ಥಾಪಿಸಲಾದ ಸೂರ್ಯನ ಮೂರ್ತಿಯೂ ಇದೆ. ಮುಖಮಂಟಪದ ಎದುರಿನಲ್ಲಿ ನಂದಿಯ ಶಿಲ್ಪವಿದ್ದು, ಇದನ್ನು “ಅಂಕಲಿ ಬಸವಣ್ಣ” ಎಂದು ಕರೆಯುತ್ತಾರೆ.
ನವರಂಗದ ಮುಂಭಾಗದಲ್ಲಿರುವ ಮಹಾಮಂಟಪವನ್ನು ವಿಜಯನಗರೋತ್ತರ ಕಾಲದಲ್ಲಿ ನಿರ್ಮಿಸಲಾಗಿದೆ.
ಮಂಟಪದ ಇಕ್ಕೆಲಗಳಲ್ಲಿ ವೀರಭದ್ರ ಹಾಗೂ ಗೌರಮ್ಮ ದೇವರ ಗರ್ಭಗೃಹಗಳಿವೆ. ಮಹಾಮಂಟಪದ ಬಲಭಾಗದಲ್ಲಿ ವೀರಗಲ್ಲಿದ್ದು, ಇದನ್ನು “ಈರಗಾರ ಹುಚ್ಚೇಶ್ವರ” ಎಂದು ಕರೆಯುತ್ತಾರೆ. ಮುಂಭಾಗದಲ್ಲಿರುವ ಮತ್ತೊಂದು ನಂದಿಯನ್ನು “ತೊಟ್ಟಿಪೇಳೆ ಬಸವಣ್ಣ” ಎಂದು ಕರೆಯಲಾಗುತ್ತದೆ. ಗರ್ಭಗೃಹದ ಮೇಲ್ಭಾಗದಲ್ಲಿ ಪಾಂಸನ ಮಾದರಿಯ ಶಿಖರವಿದೆ.
ದೇವಾಲಯದ ಹಿಂಭಾಗದಲ್ಲಿ ದೊಡ್ಡ ಮಜ್ಜನ ಮಂಟಪವಿದ್ದು, ಇಂತಹ ವಿಶಾಲ ಮಜ್ಜನ ಮಂಟಪ ಬೇರೆಲ್ಲೂ ಇಲ್ಲವೆಂದು ಹೇಳಲಾಗುತ್ತದೆ. ಈ ದೇವರಿಗೆ ಕಾಲಕಾಲಕ್ಕೆ ವಿಶೇಷ ಪೂಜೆಗಳು ನಡೆಯುತ್ತವೆ. ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಷ್ಟೋತ್ತರ ಬಿಲ್ವಾರ್ಚನೆ ಹಾಗೂ ವೇದಮಂತ್ರಗಳ ಘೋಷಗಳು ನಿಯಮಬದ್ಧವಾಗಿ ನಡೆಯುತ್ತವೆ. ಕಾರ್ತಿಕ ಮಾಸದಲ್ಲಿ ದೀಪೋತ್ಸವವನ್ನು ವೈಭವದಿಂದ ಆಚರಿಸಲಾಗುತ್ತದೆ.
ದೇವಾಲಯದ ಇತಿಹಾಸ
ಈ ದೇಗುಲವಿರುವ ಪ್ರದೇಶವು ಒಂದು ಕಾಲದಲ್ಲಿ ಕಾಡು ಮತ್ತು ಪೊದೆಗಳಿಂದ ಆವೃತವಾಗಿತ್ತು. ಪಕ್ಕದ ಬಯಲಿನಲ್ಲಿ ವ್ಯಾಪಾರಿಯೊಬ್ಬನು ನೆಲದಲ್ಲಿದ್ದ ಕಲ್ಲಿಗೆ ಮತ್ತೆರಡು ಕಲ್ಲುಗಳನ್ನು ಇಟ್ಟು ಅಡುಗೆ ತಯಾರಿಸಲು ಯತ್ನಿಸಿದನು. ಆಗ ಮಡಕೆಯಲ್ಲಿದ್ದ ಅನ್ನದೊಂದಿಗೆ ರಕ್ತ ಕಾಣಿಸಿಕೊಂಡಿತು ಎಂದು ಹೇಳಲಾಗುತ್ತದೆ.
ಇದನ್ನು ಕಂಡ ವ್ಯಾಪಾರಿ ಗಾಬರಿಗೊಂಡು ದೇವರನ್ನು ಸ್ಮರಿಸಿದನು. ಆಗ “ನಾನು ಕಲ್ಲಲ್ಲ, ಕಲ್ಲಿನಾಥ, ಕಲ್ಲೇಶ್ವರ” ಎಂಬ ಅಶರೀರವಾಣಿ ಕೇಳಿಸಿತಂತೆ. ನಂತರ “ಸಿಡಿದ ಕಲ್ಲನ್ನು ಪೂಜಿಸಿ ಕೊಡು, ನಿನಗೆ ಮಂಗಳವಾಗುತ್ತದೆ” ಎಂಬ ದೈವವಾಣಿ ಬಂದಿತೆಂದು ಪ್ರತೀತಿ ಇದೆ. ಬಳಿಕ ಅದೇ ವ್ಯಾಪಾರಿ ಮುಂದೆ ಈ ದೇವಾಲಯವನ್ನು ನಿರ್ಮಿಸಿದನು ಎಂದು ಹೇಳಲಾಗುತ್ತದೆ.
ತ್ರಿಕೂಟೇಶ್ವರ(ತ್ರಿಕೂಟಲಿಂಗ)ದೇವಾಲಯ
ಶ್ರೀ ಕಲ್ಲೇಶ್ವರ ದೇವಸ್ಥಾನದ ಆವರಣದಲ್ಲೇ ಪುರಾತನ ತ್ರಿಕೂಟೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಶಿವಲಿಂಗ, ಬ್ರಹ್ಮಲಿಂಗ ಹಾಗೂ ವಿಷ್ಣುಲಿಂಗ ಎಂಬ ಮೂರು ದೇವರ ವಿಗ್ರಹಗಳಿವೆ.
ಭೇಟಿ ನೀಡಿ



