ಕೊಡದಗುಡ್ಡ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನವು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕೊಡದಗುಡ್ಡ ಎಂಬ ಸ್ಥಳದಲ್ಲಿರುವ ದೇವಾಲಯವಾಗಿದೆ. ಅತ್ಯಂತ ಪ್ರಾಚೀನ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಈ ಕ್ಷೇತ್ರವನ್ನು ಸುಮಾರು 800 ವರ್ಷಗಳ ಹಿಂದೆ ಹರಪನಹಳ್ಳಿ ಪಾಳೇಗಾರರು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ.
ಕೊಡದಗುಡ್ಡ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ದೂರಗಳು
- ಬೆಂಗಳೂರು – 251 ಕಿ.ಮೀ
- ದಾವಣಗೆರೆ – 43 ಕಿ.ಮೀ
- ಜಗಳೂರು – 14 ಕಿ.ಮೀ
- ದಾವಣಗೆರೆ ರೈಲ್ವೆ ನಿಲ್ದಾಣ – 42 ಕಿ.ಮೀ
ಸ್ಥಳಪುರಾಣದ ಪ್ರಕಾರ, ವೀರಭದ್ರ ದೇವರು ಕೊಟ್ಟೂರಿನಲ್ಲಿ ನೆಲೆಸಿದ್ದ ಸಂದರ್ಭದಲ್ಲಿ ಕೊಟ್ಟೂರೇಶ್ವರರು ಆಶ್ರಯವನ್ನು ಕೋರಿದರು. ಆಗ ವೀರಭದ್ರಸ್ವಾಮಿ ದೇವರು ಅವರಿಗೆ ಸ್ಥಳಾವಕಾಶವನ್ನು ಕಲ್ಪಿಸಿದರು. ನಂತರ ಕೊಟ್ಟೂರಿನಲ್ಲಿ ಕೊಟ್ಟೂರೇಶ್ವರರು ನೆಲೆಸಿ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದರು.
ಕೊಟ್ಟೂರು ಕ್ಷೇತ್ರದಲ್ಲೇ ತಮ್ಮ ಪ್ರಭಾವ ಹೆಚ್ಚಾಗುತ್ತಿದೆ ಎಂದು ವೀರಭದ್ರಸ್ವಾಮಿಗಳು ತಿಳಿದಾಗ, ಕೊಟ್ಟೂರೇಶ್ವರ ದೇವರು “ಇದು ಶಿವನ ಇಚ್ಛೆ. ನೀವು ಕೊಡದಗುಡ್ಡದ ಮೇಲೆ ನೆಲೆಸಿರಿ; ನೀವು ನೆಲೆಸುವ ಆ ಸ್ಥಳವು ಪುಣ್ಯಕ್ಷೇತ್ರವಾಗುತ್ತದೆ” ಎಂದು ಹೇಳಿದರು. ಅದರಂತೆ ವೀರಭದ್ರಸ್ವಾಮಿ ಕೊಡದಗುಡ್ಡದಲ್ಲಿ ನೆಲೆನಿಂತರು ಎಂದು ಹೇಳಲಾಗುತ್ತದೆ.
ಗುಡ್ಡದ ತುದಿಯಲ್ಲಿರುವ ಈ ದೇವಾಲಯಕ್ಕೆ ಸುಮಾರು 300 ಮೆಟ್ಟಿಲುಗಳಿದ್ದು, ಇಲ್ಲಿ 8 ಅಡಿ ಎತ್ತರದ ವೀರಭದ್ರಸ್ವಾಮಿ ದೇವರ ಮೂರ್ತಿಯನ್ನು ಕಾಣಬಹುದು. ದೇವಾಲಯದ ಪ್ರಾಂಗಣದಲ್ಲಿ ಹೊಯ್ಸಳ ಮತ್ತು ಚಾಲುಕ್ಯ ಶೈಲಿಯ ಸರಳ ಕೆತ್ತನೆಯ ಕಂಬಗಳನ್ನು ಕಾಣಬಹುದು. ದೇವಸ್ಥಾನವು ಗರ್ಭಗುಡಿ ಹಾಗೂ ವಿಶಾಲ ಪ್ರಾಂಗಣವನ್ನು ಒಳಗೊಂಡಿದೆ.
ಗುಡ್ಡದ ತುದಿಯಲ್ಲಿ ದೇವರು ನೆಲೆಸಿರುವುದರಿಂದ, ಇಲ್ಲಿಗೆ ಬರುವ ಭಕ್ತಾದಿಗಳು ಮೇಲಿನಿಂದ ಕಾಣುವ ಪ್ರಕೃತಿಯ ವಿಹಂಗಮ ನೋಟವನ್ನು ನೋಡಿ ಆನಂದಿಸುತ್ತಾರೆ. ಮೆಟ್ಟಿಲುಗಳನ್ನು ಏರುತ್ತಾ ಹೋದಾಗ ಕಾಳಿ ದೇವಸ್ಥಾನ, ನವಗ್ರಹ, ನಂದಿ, ಗಣೇಶ ಹಾಗೂ ಶಿವನ ವಿಗ್ರಹಗಳನ್ನು ಕಾಣಬಹುದಾಗಿದೆ.
ಭೇಟಿ ನೀಡಿ





