ಗಂಗೆ ಬಾವಿಯು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಎತ್ತಿನಹಳ್ಳಿ ಗ್ರಾಮದಿಂದ ಸುಮಾರು 2 ಕಿ.ಮೀ ದೂರದಲ್ಲಿದ್ದು, ಈ ಬಾವಿಯು ಪುರಾತನ ಕಾಲಕ್ಕೆ ಸೇರಿದದ್ದು.
ಗಂಗೆ ಭಾವಿ ಎತ್ತಿನಹಳ್ಳಿಯ ದೂರಗಳು
- ಬೆಂಗಳೂರು – 370 ಕಿ.ಮೀ
- ಹಾವೇರಿ – 38 ಕಿ.ಮೀ
- ಶಿಗ್ಗಾಂವ್ – 7 ಕಿ.ಮೀ
- ಹಾವೇರಿ ರೈಲ್ವೆ ನಿಲ್ದಾಣ – 42 ಕಿ.ಮೀ
ಹಿಂದೂ ಪೌರಾಣಿಕ ಗ್ರಂಥವಾದ ಮಹಾಭಾರತದ ಪ್ರಕಾರ, ಗಂಗೆಯು ಸ್ವರ್ಗದಿಂದ ಭೂಮಿಗೆ ಇಳಿಯುವ ಸಂದರ್ಭದಲ್ಲಿ, ಅವಳ ಪ್ರಕ್ಷುಬ್ಧ ಪ್ರವಾಹ ಜಹ್ನು ಋಷಿಯ ಆಶ್ರಮವನ್ನು ಮುಳುಗಿಸಿ ಅವರ ತಪಸ್ಸಿಗೆ ಭಂಗ ಉಂಟುಮಾಡಿತು. ಕೋಪಗೊಂಡ ಜಹ್ನು ಋಷಿಯು ಗಂಗೆಯ ನೀರನ್ನು ಕುಡಿದು ಅವಳ ಪ್ರವಾಹವನ್ನು ನಿಲ್ಲಿಸಿದನು.
ಈ ಘಟನೆಯಿಂದ ಚಿಂತೆಗೀಡಾದ ದೇವತೆಗಳು ಜಹ್ನು ಋಷಿಯನ್ನು ಪ್ರಾರ್ಥಿಸಿ, ಗಂಗೆಯನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿದ ಋಷಿಯು ಗಂಗೆಯನ್ನು ಮತ್ತೆ ಬಿಡುಗಡೆ ಮಾಡಿದರು, ಇದರಿಂದ ಅವಳು ಭೂಮಿಗೆ ಇಳಿಯುವ ಉದ್ದೇಶ ಸಾಧಿತವಾಯಿತು.
ಇದಕ್ಕೂ ಸಂಬಂಧಿಸಿದ ಸ್ಥಳೀಯ ಕಥೆಯ ಪ್ರಕಾರ, ಜಹ್ನು ಋಷಿಯು ಒಮ್ಮೆ ಈ ಪ್ರದೇಶಕ್ಕೆ ಬಂದು ಸಂಧ್ಯಾವಂದನೆಗಾಗಿ ನೀರನ್ನು ಬಯಸಿದನು. ಆಗ ಅವರು ಗಂಗೆಯನ್ನು ಕರೆದಾಗ, ಗಂಗೆಯು ಕಾಶಿಯಿಂದ ಈ ಸ್ಥಳಕ್ಕೆ ಹರಿದು ಬಂದಳು ಎಂದು ನಂಬಲಾಗುತ್ತದೆ.
ಇಲ್ಲಿ ನಿರಂತರವಾಗಿ ನೀರು ಹರಿಯುವ ಎರಡು ಕೊಳಗಳಿದ್ದು, ಅವುಗಳಲ್ಲಿ ದೊಡ್ಡ ಕೊಳವನ್ನು ಗಂಗೆಯ ನೀರಿನ ಮೂಲವೆಂದು ಪರಿಗಣಿಸಲಾಗುತ್ತದೆ. ಗಂಗಾಮಾತೆ ಇಲ್ಲಿ ಹರಿಯುತ್ತಾಳೆ ಎಂಬ ನಂಬಿಕೆಯಿಂದ, ಈ ಪ್ರದೇಶವನ್ನು “ದಕ್ಷಿಣ ಕಾಶಿ” ಎಂದು ಕರೆಯುತ್ತಾರೆ.
ಭೇಟಿ ನೀಡಿ

