ಪ್ರಾಚೀನ ಹೊಯ್ಸಳ ಶ್ರೀ ಕೇದಾರೇಶ್ವರ ಸ್ವಾಮಿ ದೇವಸ್ಥಾನ

ಪ್ರಾಚೀನ ಹೊಯ್ಸಳ ಶ್ರೀ ಕೇದಾರೇಶ್ವರ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ನಾಗಲಾಪುರದಲ್ಲಿ ಇರುವ ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ದೇವಾಲಯವಾಗಿದೆ. ಹೊಯ್ಸಳರ ಕಾಲದಲ್ಲಿ ನಿರ್ಮಿತಗೊಂಡ ಎರಡು ದೇವಾಲಯಗಳು ಈ ನಾಗಲಾಪುರ ಗ್ರಾಮದಲ್ಲಿದೆ. ಇನ್ನೊಂದು ದೇವಾಲಯವೆಂದರೆ ಪ್ರಾಚೀನ ಹೊಯ್ಸಳ ಚೆನ್ನಕೇಶವ ದೇವಾಲಯ.

ಈ ದೇವಾಲಯ ಬೆಂಗಳೂರಿನಿಂದ 128 ಕಿ.ಮೀ ಮತ್ತು ತುಮಕೂರು ನಗರದಿಂದ 68 ಕಿ.ಮೀ ದೂರದಲ್ಲಿದೆ. ಹಾಗೂ ತುರುವೇಕೆರೆ ನಗರದಿಂದ 11 ಕಿ.ಮೀ ದೂರದಲ್ಲಿದೆ.

ಪೂರ್ವಾಭಿಮುಖವಾಗಿ ಗರ್ಭಗೃಹ, ಅಂತರಾಳ ಹಾಗೂ ನವರಂಗನ್ನು ಹೊಂದಿದೆ. ದೇವಾಲಯಕ್ಕೆ ದಕ್ಷಿಣದಿಂದ ಪ್ರವೇಶಾವಕಾಶ ಕಲ್ಪಿಸಲಾಗಿದ್ದು, ಚೌಕಾಕಾರದ ಗರ್ಭಗುಡಿಯಿದ್ದು, ಮಧ್ಯಭಾಗದಲ್ಲಿ ಸಣ್ಣಗಾತ್ರದ ಕೇದಾರೇಶ್ವರ ಲಿಂಗವಿದೆ. ಅಂತರಾಳದ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರು ಹಾಗೂ ನಡುವೆ ತಾಂಡವೇಶ್ವರನ ಅಂದವಾದ ಶಿಲ್ಪಗಳಿವೆ. ಸುಕನಾಸಿಯ ಬಾಗಿಲ ಬಳಿಯ ಎರಡು ಭಾಗದಲ್ಲಿ ಉಮಾಮಹೇಶ್ವರ ನಟರಾಜನ ಆಕರ್ಷಣೀಯ ಕೆತ್ತನೆಯ ಮೂರ್ತಿಗಳಿವೆ.

ನವರಂಗದಲ್ಲಿ ಅತ್ಯಂತ ನವಿರಾದ ಕೆತ್ತನೆಗಳಿಂದ ಕೂಡಿದ 4 ಕಂಬಗಳಿಗೆ, ಈ ಕಂಬಗಳ ಮೇಲಿನ ಮಣಿಸರಗಳು, ಆ ಕಾಲದ ಶಿಲ್ಪಕಲಾ ಕೌಶಲಕ್ಕೆ ಹಿಡಿದ ಕನ್ನಡಿಯಾಗಿದೆ. ನವರಂಗ ಮಧ್ಯದ ಭುವನೇಶ್ವರಿಯು ಬಹುಕಲಾತ್ಮಕವಾಗಿ ಮೂಡಿಬಂದಿದೆ. ಸುತ್ತಾ ಅಷ್ಟದಿಕ್ಪಾಲಕರು, ಯಕ್ಷ -ಯಕ್ಷ ಕನ್ನಿಕೆಯರು ಸುತ್ತುವರಿದಿದ್ದು, ಮಧ್ಯೆ ಬೃಹತ್‌ ಕಮಲದ ಕೆತ್ತನೆಯಿದೆ. ದೇವಾಲಯದ ಒಳಾಂಗಣದ ಬದಿಯಲ್ಲಿ ಗಣೇಶ ಸೂರ್ಯ, ಮಹಿಷಮರ್ದಿನಿ, ನಂದಿಯ ಶಿಲ್ಪಗಳಿವೆ, ದೇವಾಲಯದ ಹೊರಬಿತ್ತಿ ಸಹ ಬಹು ಸೊಗಸಾಗಿ ನಕ್ಷ ತ್ರಾಕಾರದ ತಳಹದಿಯಿದ್ದು, ಪ್ರವಾಸಿಗರು, ಭಕ್ತರು ಸುತ್ತಲೂ ಪ್ರದಕ್ಷಿಣೆ ಮಾಡಿ ವಿಗ್ರಹಗಳನ್ನು ವೀಕ್ಷಿಸಲು ಜಗುಲಿಯಿದೆ.

ಭೇಟಿ ನೀಡಿ
ತುರುವೇಕೆರೆ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು