ಶ್ರೀ ಕೇದಾರೇಶ್ವರ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ನಾಗಲಾಪುರ ಗ್ರಾಮದಲ್ಲಿರುವ ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಪುರಾತನ ಶಿವ ದೇವಾಲಯವಾಗಿದೆ. ಈ ದೇವಾಲಯವು ಹೊಯ್ಸಳರ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ.
ನಾಗಲಾಪುರ ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ಎರಡು ಪ್ರಮುಖ ದೇವಾಲಯಗಳಿವೆ. ಅವುಗಳಲ್ಲಿ ಒಂದು ಶ್ರೀ ಕೇದಾರೇಶ್ವರ ಸ್ವಾಮಿ ದೇವಾಲಯವಾಗಿದ್ದರೆ, ಮತ್ತೊಂದು ಶ್ರೀ ಚೆನ್ನಕೇಶವ ದೇವಾಲಯವಾಗಿದೆ. ಈ ಎರಡೂ ದೇವಾಲಯಗಳು ಹೊಯ್ಸಳರ ವಾಸ್ತುಶಿಲ್ಪದ ವೈಭವವನ್ನು ಪ್ರತಿಬಿಂಬಿಸುವ ಪ್ರಮುಖ ಐತಿಹಾಸಿಕ ಸ್ಮಾರಕಗಳಾಗಿವೆ.
ಶ್ರೀ ಕೇದಾರೇಶ್ವರ ಸ್ವಾಮಿ ದೇವಸ್ಥಾನ ನಾಗಲಾಪುರದ ದೂರಗಳು
- ಬೆಂಗಳೂರು – 124 ಕಿ.ಮೀ
- ತುಮಕೂರು – 72 ಕಿ.ಮೀ
- ತುರುವೇಕೆರೆ – 12 ಕಿ.ಮೀ
- ಕೆಬಿ ಕ್ರಾಸ್ – 29 ಕಿ.ಮೀ
- ಬಾಣಸಂದ್ರ ರೈಲ್ವೆ ನಿಲ್ದಾಣ –24 ಕಿ.ಮೀ
ಶ್ರೀ ಕೇದಾರೇಶ್ವರ ಸ್ವಾಮಿ ದೇವಾಲಯವು ಪೂರ್ವಾಭಿಮುಖವಾಗಿದ್ದು, ಗರ್ಭಗೃಹ, ಅಂತರಾಳ ಹಾಗೂ ನವರಂಗವನ್ನು ಒಳಗೊಂಡಿದೆ. ದೇವಾಲಯಕ್ಕೆ ದಕ್ಷಿಣ ದಿಕ್ಕಿನಿಂದ ಪ್ರವೇಶ ವ್ಯವಸ್ಥೆ ಕಲ್ಪಿಸಲಾಗಿದೆ. ಚೌಕಾಕಾರದ ಗರ್ಭಗೃಹದ ಮಧ್ಯಭಾಗದಲ್ಲಿ ಸಣ್ಣಗಾತ್ರದ ಶ್ರೀ ಕೇದಾರೇಶ್ವರ ಶಿವಲಿಂಗವಿದೆ.
ಅಂತರಾಳದ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರ ಶಿಲ್ಪಗಳಿದ್ದು, ಮಧ್ಯಭಾಗದಲ್ಲಿ ತಾಂಡವೇಶ್ವರನ ಸುಂದರ ಶಿಲ್ಪವನ್ನು ಕೆತ್ತಲಾಗಿದೆ. ಸುಕನಾಸಿಯ ಬಾಗಿಲಿನ ಎರಡೂ ಬದಿಗಳಲ್ಲಿ ಉಮಾಮಹೇಶ್ವರ ಹಾಗೂ ನಟರಾಜರ ಆಕರ್ಷಕ ಶಿಲ್ಪಗಳನ್ನು ಕಾಣಬಹುದು.
ನವರಂಗದಲ್ಲಿ ನವಿರಾದ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟ ನಾಲ್ಕು ಕಂಬಗಳಿದ್ದು, ಅವುಗಳ ಮೇಲಿರುವ ಮಣಿಸರಗಳು ಆ ಕಾಲದ ಶಿಲ್ಪಕಲಾ ವೈಭವವನ್ನು ಪ್ರತಿಬಿಂಬಿಸುತ್ತವೆ. ನವರಂಗದ ಮಧ್ಯಭಾಗದಲ್ಲಿರುವ ಭುವನೇಶ್ವರಿಯು ಅತ್ಯಂತ ಕಲಾತ್ಮಕವಾಗಿ ಮೂಡಿಬಂದಿದ್ದು, ಅದರ ಸುತ್ತ ಅಷ್ಟದಿಕ್ಪಾಲಕರು ಹಾಗೂ ಯಕ್ಷ-ಯಕ್ಷಿಯರ ಶಿಲ್ಪಗಳು ವಲಯಾಕಾರದಲ್ಲಿ ಕೆತ್ತಲ್ಪಟ್ಟಿವೆ. ಮಧ್ಯಭಾಗದಲ್ಲಿ ಬೃಹತ್ ಕಮಲದ ಕೆತ್ತನೆಯೂ ವಿಶೇಷ ಆಕರ್ಷಣೆಯಾಗಿದೆ.
ದೇವಾಲಯದ ಒಳಾಂಗಣದ ಗೋಡೆಗಳ ಬಳಿ ಗಣೇಶ, ಸೂರ್ಯ, ಮಹಿಷಾಸುರಮರ್ದಿನಿ ಹಾಗೂ ನಂದಿಯ ಶಿಲ್ಪಗಳನ್ನು ಕಾಣಬಹುದು. ದೇವಾಲಯದ ಹೊರಭಾಗವು ನಕ್ಷತ್ರಾಕಾರದ ತಳಹದಿಯನ್ನು ಹೊಂದಿದ್ದು, ಸುತ್ತಲೂ ಪ್ರದಕ್ಷಿಣೆ ಮಾಡಲು ಅನುಕೂಲವಾಗುವ ಜಗತಿ (ಜಗುಲಿ) ನಿರ್ಮಿಸಲಾಗಿದೆ. ಇದರಿಂದ ಭಕ್ತರು ಹಾಗೂ ಪ್ರವಾಸಿಗರು ದೇವಾಲಯದ ಹೊರಭಾಗದಲ್ಲಿರುವ ಶಿಲ್ಪಗಳನ್ನು ಸಮೀಪದಿಂದ ಸುಲಭವಾಗಿ ವೀಕ್ಷಿಸಬಹುದು.
ಭೇಟಿ ನೀಡಿ




