ಗಂಗಾದರೇಶ್ವರ ದೇವಸ್ಥಾನ ತುರುವೇಕೆರೆ

ಗಂಗಾಧರೇಶ್ವರ ದೇವಸ್ಥಾನವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನಲ್ಲಿರುವ ಹೊಯ್ಸಳರ ಕಾಲದ ಪ್ರಸಿದ್ಧ ಶಿವ ದೇವಾಲಯವಾಗಿದೆ. ಈ ದೇವಾಲಯದಲ್ಲಿರುವ ಶಿವಲಿಂಗವು ತನ್ನ ವಿಶಿಷ್ಟ ಶಿಲ್ಪಕಲೆಯಿಂದ ವಿಶೇಷ ಮಹತ್ವವನ್ನು ಪಡೆದಿದೆ.

ಈ ದೇವಾಲಯದ ಪ್ರಮುಖ ಆಕರ್ಷಣೆಯೆಂದರೆ, ಶಿವನ ವಿಗ್ರಹವನ್ನು ತನ್ನ ಜಟಾಮಕುಟದ ಮೇಲೆ ಗಂಗೆಯನ್ನು ಧರಿಸಿರುವ ಗಂಗಾಧರೇಶ್ವರ ರೂಪದಲ್ಲಿ ಕೆತ್ತಲಾಗಿದೆ. ವಿಗ್ರಹದ ಸುತ್ತಲಿನ ಪ್ರಭಾವಲಿಯಲ್ಲಿ ಹರಿಯುವ ನೀರಿನ ಕಾರಂಜಿಗಳನ್ನು ಹೋಲುವ ಅಲಂಕಾರಿಕ ಕೆತ್ತನೆಗಳು ಕಾಣಸಿಗುತ್ತವೆ. ಈ ಅಪೂರ್ವ ಶಿಲ್ಪಕಲೆಯು ದೇವಾಲಯದ ಕಲಾತ್ಮಕ ವೈಭವ ಮತ್ತು ಹೊಯ್ಸಳರ ಶಿಲ್ಪಕೌಶಲ್ಯವನ್ನು ಪ್ರತಿಬಿಂಬಿಸುತ್ತದೆ.

ತುರುವೇಕೆರೆ ಗಂಗಾದರೇಶ್ವರ ದೇವಸ್ಥಾನದ ದೂರಗಳು

  • ಬೆಂಗಳೂರು – 123 ಕಿ.ಮೀ
  • ತುಮಕೂರು – 63 ಕಿ.ಮೀ
  • ತುರುವೇಕೆರೆ – 1 ಕಿ.ಮೀ
  • ಕೆಬಿ ಕ್ರಾಸ್ – 17 ಕಿ.ಮೀ
  • ಬಾಣಸಂದ್ರ ರೈಲ್ವೆ ನಿಲ್ದಾಣ – 12 ಕಿ.ಮೀ

ಗಂಗಾಧರೇಶ್ವರ ದೇವಸ್ಥಾನದ ಮುಖಮಂಟಪದಲ್ಲಿರುವ ನಂದಿಯ ಶಿಲ್ಪವು ಅತ್ಯಂತ ಅದ್ಭುತವಾಗಿದೆ. ಬಳಪದ ಕಲ್ಲಿನಲ್ಲಿ ಕೆತ್ತಲಾಗಿರುವ ಸುಮಾರು ಏಳು ಅಡಿ ಎತ್ತರದ ಈ ನಂದಿಯು, ಗರ್ಭಗುಡಿಯಲ್ಲಿರುವ ಶಿವಲಿಂಗದತ್ತ ಮೊಣಕಾಲು ಮಡಚಿ ಕುಳಿತ ಭಂಗಿಯಲ್ಲಿ ರೂಪಿಸಲಾಗಿದೆ. ನಂದಿಯ ಮೇಲ್ಮೈ ಅತ್ಯಂತ ನಯವಾಗಿ ಮೆರುಗುಗೊಳಿಸಲ್ಪಟ್ಟಿದ್ದು, ಕನ್ನಡಿಯಂತೆ ಹೊಳೆಯುತ್ತದೆ.

ನಂದಿಯ ಶಿರಸ್ಸಿನ ಮೇಲಿರುವ ಗೆಜ್ಜೆಸರ, ವಿವಿಧ ಆಭರಣಗಳು, ಗಂಟೆಗಳ ಅಲಂಕಾರಗಳು ಹಾಗೂ ಬೆನ್ನಿನ ಭಾಗದಲ್ಲಿರುವ ನುಣ್ಣನೆಯ ಸರಪಳಿಯಂತಹ ಸೂಕ್ಷ್ಮ ಶಿಲ್ಪಕಲೆಗಳು ನೋಡುಗರನ್ನು ಚಕಿತಗೊಳಿಸುತ್ತವೆ. ನಂದಿಯ ಕೊರಳಲ್ಲಿ ಇಷ್ಟಲಿಂಗವನ್ನೂ ಕೆತ್ತಲಾಗಿದೆ.

ದೇವಾಲಯದಲ್ಲಿರುವ ಅಮ್ಮನವರ ಸನ್ನಿಧಿಯಲ್ಲಿ ಪಾರ್ವತಿ ದೇವಿಯ ಮೂರ್ತಿಯಿದ್ದು, ಈ ದೇವಿಯನ್ನು “ಆಧಾರಶಕ್ತಿ” ಎಂದು ಕರೆಯುತ್ತಾರೆ. ಆಧಾರಶಕ್ತಿ ದೇವಿಯ ಮೂರ್ತಿಯು ತಪೋಮುದ್ರೆಯಲ್ಲಿ ವಿರಾಜಮಾನವಾಗಿದೆ. ದೇವಿಯ ಹಣೆಯಲ್ಲಿ ಮೂರನೇ ಕಣ್ಣು ಕಾಣಸಿಗುತ್ತದೆ. ಅಭಯ, ವರದ, ಪಾಶ ಹಾಗೂ ಅಂಕುಶಗಳನ್ನು ಧರಿಸಿರುವ ಈ ಮೂರ್ತಿಯು ದೇವಿಯ ತಪಸ್ಸು ಮತ್ತು ದೈವಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಈ ಶಿಲ್ಪವೂ ಹೊಯ್ಸಳರ ಅಪರೂಪದ ಶಿಲ್ಪಕಲೆಯ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ.

ಭೇಟಿ ನೀಡಿ
ತುರುವೇಕೆರೆ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section