ಹುತ್ತರಿದುರ್ಗ ಕೋಟೆ

ಹುತ್ತರಿದುರ್ಗ ಕೋಟೆಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಇರುವ ಐತಿಹಾಸಿಕ ಕೋಟೆಯಾಗಿದೆ. ಕೋಟೆಯು ಸಮುದ್ರ ಮಟ್ಟದಿಂದ ಸುಮಾರು 3712 ಅಡಿಗಳ ಎತ್ತರದಲ್ಲಿದೆ. 16ನೇ ಶತಮಾನದಲ್ಲಿ ವಿಜಯನಗರದ ಅರಸರ ಸಾಮಂತರಾಗಿದ್ದ ಯಲಹಂಕ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ (ಕ್ರಿ.ಶ. 1534) ನಿರ್ಮಿಸಿದ ಕೋಟೆಯಾಗಿದೆ.

ಈ ಕೋಟೆಯು ಬೆಂಗಳೂರಿನಿಂದ 87 ಕಿ.ಮೀ ಮತ್ತು ತುಮಕೂರು ನಗರದಿಂದ 58 ಕಿ.ಮೀ ದೂರದಲ್ಲಿದೆ. ಹಾಗೂ ಕುಣಿಗಲ್ ನಗರದಿಂದ ಕೇವಲ 19 ಕಿ.ಮೀ ಮತ್ತು ಹುತ್ತರಿದುರ್ಗ ಗ್ರಾಮದಿಂದ 5 ಕಿ.ಮೀ ದೂರದಲ್ಲಿದೆ

ಬೆಂಗಳೂರಿನ ಸುತ್ತಲಿನ ಒಂಬತ್ತು ದುರ್ಗಗಳಲ್ಲಿ (ನವ ದುರ್ಗಗಳು) ಈ ಕೋಟೆಯು ಒಂದಾಗಿದೆ. ಈ ಕೋಟೆಯು ಏಳು ಹಂತದ ಕೋಟೆಯಾಗಿದೆ. ಈ ಕೋಟೆಗೆ ಏಳು ಬಾಗಿಲುಗಳಿವೆ.

ಈ ಕೋಟೆಯಲ್ಲಿ ದೊಡ್ಡಬೆಟ್ಟದ ಕೋಟೆಯು ದಕ್ಷಿಣದ ಅಂಚಿನಲ್ಲಿ ನೆಲಮಟ್ಟದಿಂದ 300 ಮೀಟರಿನಷ್ಟು ಎತ್ತರವಿರುವ ದೊಡ್ಡ ಬೆಟ್ಟವು ಹುತ್ರಿದುರ್ಗದ ಮುಖ್ಯವಾದ ಕೋಟೆ ಪ್ರದೇಶವಾಗಿದೆ. ವೈರಿಗಳಿಂದ ರಕ್ಷಣೆ ಪಡೆಯಲು ಅನ್ನುಕೂಲವಾಗುವಂತೆ ಬೆಟ್ಟದ ಬುಡದಿಂದ ಮೇಲ್ಭಾಗದರೆಗೂ ಸುಮಾರು ಎಂಟು ಗೋಡೆಗಳನ್ನು ನಿರ್ಮಿಸಲಾಗಿದೆ. ಮೂರರಿಂದ ನಾಲ್ಕು ಮೀಟರ್ ಎತ್ತರವಿರುವ ಗೋಡೆಗಳು ಒಂದರಿಂದ ಎರಡು ಮೀಟರ್ ದಪ್ಪವಾಗಿವೆ.

ದೊಡ್ಡಬೆಟ್ಟದ ತುದಿಯಲ್ಲಿರುವ ಶಂಕರಲಿಂಗೇಶ್ವರ ದೇವಾಲಯವು ಪೂರ್ವಾಭಿಮುಖಿಯಾಗಿದೆ. ಇದು ಗರ್ಭಗುಡಿ ಹಾಗು ನವರಂಗಗಳಿಂದ ಕೂಡಿದೆ. ಗರ್ಭಗುಡಿ ಚಿಕ್ಕದಾಗಿದ್ದು ಒಳಗಡೆ ಶಿವಲಿಂಗ ಪೀಠವಿದೆ. ಒಳಗೋಡೆಗೆ ಮಹಿಷಾಸುರ ಮರ್ದನಿ ಶಿಲ್ಪವನ್ನು ಇಡಲಾಗಿದೆ. ನವರಂಗವು ಚೌಕಾಕಾರವಾಗಿದ್ದು ನಾಲ್ಕುಕಂಬಗಳನ್ನು ಮಧ್ಯದಲ್ಲಿ ಜೋಡಿಸಲಾಗಿದೆ. ಈ ನವರಂಗದಲ್ಲಿ ನಂದಿ ವಿಗ್ರಹವಿದೆ.

ಹುತ್ರಿದುರ್ಗದ ಕೋಟೆಯು ಮೂರು ಮುಖ್ಯದ್ವಾರಗಳನ್ನು ಒಳಗೊಂಡಿದೆ. ಈ ದ್ವಾರಗಳು ದುರ್ಗವನ್ನು ಪ್ರವೇಶಿಸಲು ಮಾಡಲಾದ ದ್ವಾರಗಳಾಗಿವೆ ಅವುಗಳೆಂದರೆ ಎಲಿಯೂರು ದ್ವಾರ, ಮಾಗಡಿ ದ್ವಾರ ಮತ್ತು ಬಾಲಿಕಟ್ಟೆ ದ್ವಾರ.

ಬೆಟ್ಟದ ತುದಿಯಲ್ಲಿರುವ ಶಂಕರಲಿಂಗೇಶ್ವರ ದೇವಸ್ಥಾನದ ಮುಂಭಾಗದ ಬಂಡೆಗಳ ಮಧ್ಯದಲ್ಲಿ ನೀರಿನ ದೊಣೆಯಿದೆ. ಬೆಟ್ಟದ ಇಳಿಜಾರಿನಿಂದ ಹರಿದು ಬರುವ ನೀರು ಇಲ್ಲಿ ಶೇಖರಣೆಯಾಗುತ್ತದೆ. ಈ ತೆರೆದ ದೊಣೆಯನ್ನು ಉದ್ದನೆಯ ಚಪ್ಪಡಿ ಕಲ್ಲುಗಳಿಂದ ಜೋಡಿಸಿ ಮುಚ್ಚಲಾಗಿದೆ. ಈ ದೊಣೆಯು ದೇವಾಲಯಕ್ಕೆ ಪುಷ್ಕರಣಿಯಂತೆ ಕಾರ್ಯ ನಿರ್ವಹಿಸುತ್ತದೆ.

ದೇವಾಲಯದ ಎಡ ಭಾಗಕ್ಕೆ ಆಯತಾಕಾರದ ಚಿಕ್ಕ ಕಟ್ಟಡವಿದೆ. ಇದನ್ನು ಸ್ಥಳೀಯರು ಮದ್ದಿನ ಮನೆಯೆಂದು ಕರೆಯುತ್ತಾರೆ. ಇದು ಆರು ಮೀಟರ್ ಉದ್ದ ಮತ್ತು 2 ಮೀಟರ್ ಅಗಲವಿರುವ ಕಟ್ಟಡವಾಗಿದೆ. ಚಿಕ್ಕ ದ್ವಾರವಿರುವ ಇದರ ಪೀಠಭಾಗವನ್ನು ಕಲ್ಲುಗಳಿಂದ ಕಟ್ಟಲಾಗಿದ್ದು ಗೊಡೆಯನ್ನು ಇಟ್ಟಿಗೆಗಳಿಂದ ಕಟ್ಟಲಾಗಿದೆ.

ಆವರಣದಲ್ಲಿ ಇಟ್ಟಿಗೆ ಮತ್ತು ಗಾರೆಯಿಂದ ಪಕ್ಕಪಕ್ಕದಲ್ಲಿ ನಿರ್ಮಿಸಿದ ನೀರಿನ ದೊಣೆಗಳಿವೆ. ಇವುಗಳನ್ನು ಅಕ್ಕ-ತಂಗಿ ದೊಣೆಗಳೆಂದು ಕರೆಯುತ್ತಾರೆ. ಕಥೆಯೊಂದರ ಪ್ರಕಾರ ಕೆಂಪೇಗೌಡರ ಕಾಲದಲ್ಲಿ ಬಸವನದುರ್ಗದಲ್ಲಿ ಬಸವನಾಯಕನೆಂಬ ದುರುಳನೊಬ್ಬನಿದ್ದನಂತೆ. ಆತನಿಗೆ ಹುತ್ರಿದುರ್ಗದಲ್ಲಿ ವಾಸವಿದ್ದ ಸುಂದರ-ಶ್ರೀಮಂತ ಅಕ್ಕತಂಗಿಯರಿಬ್ಬರ ಮೇಲೆ ಮೋಹವಿತ್ತಂತೆ. ಹೊಂಚುಹಾಕಿ ರಾತ್ರಿಯ ವೇಳೆ ಕಾವಲುಗಾರರ ಕಣ್ತಪ್ಪಿಸಿ ಬಂದು ಆ ಅಕ್ಕ ತಂಗಿಯರ ಮೇಲೆ ದಾಳಿ ಮಾಡುತ್ತಾನೆ. ಹೇಗೋ ತಪ್ಪಿಸಿಕೊಂಡು ಸಹೋದರಿಯರು ಒಡವೆಗಳ ಗಂಟಿನ ಜೊತೆಗೆ ಬೆಟ್ಟದ ತುದಿ ತಲುಪುತ್ತಾರೆ. ಅಲ್ಲಿಗೂ ಬೆನ್ನಟ್ಟಿ ಬಂದ ಬಸವನಾಯಕನ ಕೈಗೆ ಸಿಗಲೊಪ್ಪದ ಅಕ್ಕ ತಂಗಿಯರಿಬ್ಬರೂ ಒಡವೆ ಗಂಟಿನ ಜೊತೆಗೆ ಒಂದೊಂದು ದೊಣೆಗೆ ಹಾರಿ ಪ್ರಾಣ ಬಿಟ್ಟರಂತೆ. ಇದರಿಂದಾಗಿ ಇವು ಅಕ್ಕ-ತಂಗಿ ನೀರಿನ ದೊಣೆಗಳೆಂದು ಹೆಸರುವಾಸಿಯಾಗಿವೆ.

ಇತಿಹಾಸ

ಕೋಟೆಯ ನಿರ್ಮಾಣ ಕಾರ್ಯ ಕ್ರಿ.ಶ. 1534ರಲ್ಲಿ ಶುರುವಾಗಿರುವುದಾಗಿ ಕೋಟೆಯ ಎಲಿಯೂರು ದ್ವಾರದ ತೊಲೆಯ ಮೇಲಿರುವ ಶಾಸನದಿಂದ ತಿಳಿದುಬರುತ್ತದೆ. ಕೋಟೆಯಿರುವ ಕಾರಣದಿಂದಾಗಿ ಈ ಪ್ರದೇಶಕ್ಕೆ ಹುತ್ರಿದುರ್ಗ ಎಂಬ ಹೆಸರು ಬಂದಿದೆ. ಪುರಾಣಗಳಲ್ಲಿ ಕಾಮಗಿರಿ ಎಂತಲೂ, ಕೆಂಪೇಗೌಡರ ಸಂತತಿಯಲ್ಲಿ ಕೊನೆಯವರಾದ ಕೆಂಪವೀರಪ್ಪಗೌಡರ ಕಾಲದಲ್ಲಿ ದೇವಗಿರಿ ಎಂದೂ ಕರೆಸಿಕೊಂಡಿದೆ.

ಈ ಕೋಟೆಯು ಮೈಸೂರು ಅರಸರ ನಂತರ ಟಿಪ್ಪು ಸುಲ್ತಾನನ ಆಳ್ವಿಕೆಯ ಪ್ರದೇಶವಾಗಿದ್ದು 1791-92ರಲ್ಲಿ ನಡೆದ 3ನೇ ಆಂಗ್ಲೋ-ಮೈಸೂರು ಯುದ್ದದ ವೇಳೆ ಬ್ರಿಟೀಷ್ ಸೇನಾಧಿಪತಿ ಲಾರ್ಡ್ ಕಾರ್ನ್‍ವಾಲೀಸ ಹಾಗು ಲೆಫ್ಟಿನೆಂಟ್ ಕರ್ನಲ್ ಸ್ಟುವರ್ಟ್ ಟಿಪ್ಪುವಿನ ಸೈನಿಕರನ್ನು ಇಲ್ಲಿಂದ ಓಡಿಸಿ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಈ ವೇಳೆಯಲ್ಲಿ ಸುಸ್ಥಿತಿಯಲ್ಲಿದ್ದ ಕೋಟೆಯು ಮದ್ದುಗುಂಡುಗಳ ದಾಳಿಗೆ ಸಿಕ್ಕಿ ಕೋಟೆಯ ಬಾಗಿಲು ಸೇರಿದಂತೆ ಹಲವು ಭಾಗಗಳು ನಾಶವಾಗಿರುವುದು ತಿಳಿದು ಬರುತ್ತದೆ.

ಚಾರಣದ ಸೂಚನೆ ಮತ್ತು ಸಮಯ

  • ಬೆಳಗ್ಗೆ 5.00 ಗಂಟೆಯಿಂದ ಸಂಜೆ 6.00 ಗಂಟೆಯ ವರೆಗೆ.
  • ಸಂಜೆ 6.00 ಗಂಟೆಯ ನಂತರ ಚಾರಣವನ್ನು ಸಂಪೂರ್ಣ ನಿಷೇಧಿಸಲಾಗಿದೆ.
  • ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.
  • ಧೂಮಪಾನ ಮತ್ತು ಮಧ್ಯಪಾನವನ್ನು ನಿಷೇಧಿಸಲಾಗಿದೆ.
  • ಅಪಾಯಕಾಲ ಸ್ಥಳಗಳಲ್ಲಿ ಸೆಲ್ಫಿ ಮತ್ತು ವಿಡಿಯೋ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
  • ದೇವಸ್ಥಾನದ ಪವಿತ್ರ ಕೊಳಕ್ಕೆ ಪ್ಲಾಸ್ಟಿಕ್ ಮತ್ತು ಇನ್ನಿತರೆ ವಸ್ತುಗಳನ್ನು ಎಸೆಯುವುದನ್ನು ನಿಷೇಧಿಸಲಾಗಿದೆ.
  • ಕಾಡು ಪ್ರಾಣಿಗಳಿವೆ ಎಚ್ಚರಿಕೆ.
  • ಪ್ರವಾಸಿಗರು ಮೇಲ್ಕಂಡ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಇಲ್ಲವಾದಲ್ಲಿ ಸೂಕ್ತ ಕಾನೂನು ಮತ್ತು ದಂಡವನ್ನು ವಿಧಿಸಲಾಗುವುದು.

ಭೇಟಿ ನೀಡಿ
ಕುಣಿಗಲ್ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು