ಮದಲಿಂಗನ ಕಣಿವೆ

ಮದಲಿಂಗನ ಕಣಿವೆಯು ಕರ್ನಾಟಕ ರಾಜ್ಯದ ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿದೆ. ಈ ಕಣಿವೆ ಬೆಟ್ಟವು ಚಿಕ್ಕನಾಯಕನಹಳ್ಳಿ ಮತ್ತು ಹಾಗಲವಾಡಿ ಮುಖ್ಯ ರಸ್ತೆಯಲ್ಲಿ ಇರುವ ಒಂದು ಸುಂದರ ಅರಣ್ಯ‑ಘಟ್ಟ ಪ್ರದೇಶ. ತುಮಕೂರು ಜಿಲ್ಲೆಯ ಏಕೈಕ ಪರ್ವತ ಶ್ರೇಣಿಯಾಗಿರುವ ಮದಲಿಂಗನ ಕಣಿವೆ ಪ್ರದೇಶ ಜಾನಪದಕಥೆಯೊಂದಿಗೆ ಸುಂದರ ಪರಿಸರವನ್ನು ಒಡಲಲ್ಲಿ ತುಂಬಿ ಕೊಂಡಿದೆ.

ಈ ಕಣಿವೆ ಬೆಟ್ಟವು ಬೆಂಗಳೂರಿನಿಂದ 135 ಕಿ.ಮೀ ಮತ್ತು ತುಮಕೂರು ನಗರದಿಂದ 65 ಕಿ.ಮೀ ದೂರದಲ್ಲಿದೆ. ಹಾಗು ಚಿಕ್ಕನಾಯಕನಹಳ್ಳಿ ನಗರದಿಂದ ಕೇವಲ 10 ಕಿ.ಮೀ ದೂರದಲ್ಲಿದೆ.

ಮದಲಿಂಗನ ಕಣಿವೆಯಾ ಬಗ್ಗೆ ಒಂದು ಜನಪದೀಯ ಕಥೆ

ಇದಕ್ಕೆ ಮದಲಿಂಗನ ಕಣಿವೆ ಎಂದು ಹೆಸರು ಬರುವುದಕ್ಕೆ ಒಂದು ಜನಪದೀಯ ಕಥೆ ಇದೆ. ಮದಲಿಂಗ ಎನ್ನುವ ಒಬ್ಬ ವ್ಯಕ್ತಿಯ ಕತೆ. ಮದಲಿಂಗನಿಗೆ ಆತನ ಅತ್ತೆಯ ಹಿರಿಯ ಮಗಳೊಟ್ಟಿಗೆ ಮದುವೆಯಾಗುತ್ತದೆ.

ಮದುವೆಯ ಬಳಿಕ ಹೆಂಡತಿ, ಅತ್ತೆ, ನಾದಿನಿ ಜಾಣೆಯೊಂದಿಗೆ ಚಿಕ್ಕನಾಯಕನಹಳ್ಳಿಗೆ ಬರುತ್ತಾನೆ. ಬರುವಾಗ ಒಂದು ಗುಡ್ಡ ಅಲ್ಲೊಂದು ಕಣಿವೆ ಸಿಗುತ್ತದೆ. ಅತ್ತೆ ಮತ್ತು ನಾದಿನಿಯರು ಸರಸದಿಂದ ಮದಲಿಂಗನೊಟ್ಟಿಗೆ ಮಾತನಾಡುವಾಗ ನಾದಿನಿಯು ಅಕ್ಕನನ್ನು ಬಿಟ್ಟಿರಲು ನನಗೆ ಕಷ್ಟ ಎನ್ನುತ್ತಾಳೆ. ಆಗ ತಾಯಿಯು ನಿನಗೂ ಮದುವೆ ಆದ ಮೇಲೆ ನೀನು ಹೀಗೆ ಗಂಡನ ಮನೆಗೆ ಹೋಗುತ್ತೀಯಂತೆ ಬಾ ಎನ್ನುತ್ತಾಳೆ. ಆಗ ತಂಗಿ ನನಗಾವ ಗಂಡನೂ ಬೇಡವೆಂದು ಹೇಳುತ್ತಾಳೆ. ಆಗ ಮದಲಿಂಗ “ಎಲ್ಲರೂ ಹೀಗೆ ಹೇಳುತ್ತಾರೆ. ಯಾವನೋ ಬಂದು ಕರೆದರೆ ಓಡಿಹೋಗುತ್ತಾರೆ” ಎಂದು ವ್ಯಂಗ್ಯವಾಗಿ ಹೇಳುತ್ತಾನೆ. ನಾದಿನಿ ತಕ್ಷಣ ಭಾವನಿಗೆ ಮದುವೆಯಾಗಿ ಮೂರು ದಿನ ಆಗಿದೆ ಆಗಲೇ ಎಲ್ಲ ತಿಳಿದಿರುವನಂತೆ ಮಾತನಾಡುತ್ತಾರೆ ಎನ್ನುತ್ತಾಳೆ. ಮದಲಿಂಗ ನಾದಿನಿಗೆ “ನಿನ್ನ ಅಕ್ಕನನ್ನು ಬಿಟ್ಟಿರಲು ಆಗದಿದ್ದರೆ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಬಾ” ಎಂದು ರೇಗಿಸುತ್ತಾನೆ. ಆಗ ಅತ್ತೆ ಒಂದು ಪಂಥ ಒಡ್ಡುತ್ತಾಳೆ.

ಈ ಗುಡ್ಡವನ್ನು ಹಿಂದು ಹಿಂದಾಗಿ ಹತ್ತಿ, ಹಿಂದು ಹಿಂದಾಗಿ ಇಳಿದು ಬಂದರೆ ಇವಳನ್ನ ಕೊಡುತ್ತೇನೆ ಎಂದಳು. ಮದಲಿಂಗ ಹುಮ್ಮಸ್ಸಿನಿಂದ ಪಂಥವನ್ನು ಒಪ್ಪಿಕೊಂಡು ನೀವು ಆ ಕಡೆ ಕಣಿವೆಯಲ್ಲಿ ಚೊಂಬಿನಲ್ಲಿ ನೀರನ್ನು ಹಿಡಿದುಕಂಡು ಬನ್ನಿ; ಇವಳೇ ನನ್ನ ಕೈಗೆ ಕುಡಿಯಲು ನೀರನ್ನು ಕೊಡಬೇಕು ಎಂದನು. ಮದಲಿಂಗ ಗುಡ್ಡವನ್ನು ಹಿಂದು ಹಿಂದಾಗಿ ಹತ್ತಿ, ಹಿಂದು ಹಿಂದಾಗಿ ಇಳಿದು ಇವರಿರುವಲ್ಲಿಗೆ ಬರುತ್ತಾನೆ. ಆಗ ನಾದಿನಿ ಒಂದೇ ಉಸಿರಿಗೆ ನೀರನ್ನು ಕೊಡುವಾಗ ಚೊಂಬು ಕೈಯಿಂದ ಬಿದ್ದು ನೀರೆಲ್ಲ ಚೆಲ್ಲಿ ಕುಡಿಯಲು ನೀರಿಲ್ಲದ ಹಾಗೆ ಆಗುತ್ತದೆ. ಬೆಟ್ಟ ಹತ್ತಿ ಬಾಯಾರಿದ್ದ ಮದಲಿಂಗ ಸುಸ್ತಾಗಿ, ಗಂಟಲು ಒಣಗಿ, ಹತ್ತಿರದಲ್ಲಿ ಎಲ್ಲಿಯೂ ನೀರಿಲ್ಲದೆ ಒದ್ದಾಡಿ ಸಾಯುತ್ತಾನೆ. ಹೀಗೆ ಮದಲಿಂಗನು ಆ ಕಣಿವೆಯಲ್ಲಿ ಅಸುನೀಗಿದ್ದರಿಂದ ಮದಲಿಂಗನ ಕಣಿವೆ ಎಂಬ ಹೆಸರು ಬಂದಿದೆ.

ಮದಲಿಂಗನಿಗೆ ನೀರು ತರಲು ಹೋದ ಹೆಂಡತಿ ಮಡುವಿಗೆ ಬಿದ್ದು ಸಾಯುತ್ತಾಳೆ. ಇದು ಮದನಮಡು ಆಗಿದೆ. ಮದಲಿಂಗನಿಗೆ ತಮ್ಮ ಜೊಲ್ಲು ನೀಡಿ ಬದುಕಿಸುವ ಪ್ರಯತ್ನ ಮಾಡಿ ಸಾಧ್ಯವಾಗದೇ ಜಾಣೆ ಕೂಡ ಸಾಯುತ್ತಾಳೆ. ಜಾಣೆ ಸಾವಿಗೀಡಾದ ಸ್ಥಳ ಜಾಣೆಹಾರ್ ಆಗಿದೆ. ಅಳಿಯ, ಇಬ್ಬರು ಹೆಣ್ಣು ಮಕ್ಕಳ ಸಾವಿನಿಂದ ಕಂಗಾಲಾಗಿ ಅಲ್ಲಿಂದ ಓಡುತ್ತಾ ಸ್ವಲ್ಪ ದೂರದಲ್ಲಿ ಅತ್ತೆಯೂ ಸಾಯುತ್ತಾಳೆ. ಅತ್ತೆ ಸತ್ತ ಜಾಗ ಈಗ ಹತ್ಯಾಳು ಆಗಿದೆ. ಅತ್ತೆ ಸಮಾಧಿ ಮಾಡಿದ ಜಾಗ ಎನ್ನಲಾದ ಜಾಗವನ್ನು ಈಗಲೂ ಅಜ್ಜಿಗುಡ್ಡೆ ಎಂದು ಕರೆಯಲಾಗುತ್ತದೆ.

ಭೇಟಿ ನೀಡಿ
ಚಿಕ್ಕನಾಯಕನಹಳ್ಳಿ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು