ಮದಲಿಂಗನ ಕಣಿವೆ

ಮದಲಿಂಗನ ಕಣಿವೆವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿರುವ ಒಂದು ಸುಂದರ ಅರಣ್ಯ–ಘಟ್ಟ ಪ್ರದೇಶವಾಗಿದೆ. ಈ ಕಣಿವೆ ಬೆಟ್ಟವು ಚಿಕ್ಕನಾಯಕನಹಳ್ಳಿ ಮತ್ತು ಹಾಗಲವಾಡಿ ನಡುವಿನ ಮುಖ್ಯ ರಸ್ತೆಯಲ್ಲಿದ್ದು, ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತದೆ. ತುಮಕೂರು ಜಿಲ್ಲೆಯ ಏಕೈಕ ಪರ್ವತ ಶ್ರೇಣಿಯಾಗಿ ಪರಿಗಣಿಸಲ್ಪಡುವ ಮದಲಿಂಗನ ಕಣಿವೆ, ಜಾನಪದ ಕಥೆಗಳ ಜೊತೆಗೆ ಮನಮೋಹಕ ಪರಿಸರವನ್ನು ತನ್ನೊಳಗೆ ಹೊಂದಿದೆ.

ಮದಲಿಂಗನ ಕಣಿವೆಯ ದೂರಗಳು

  • ಬೆಂಗಳೂರು – 142 ಕಿ.ಮೀ
  • ತುಮಕೂರು – 73 ಕಿ.ಮೀ
  • ಚಿಕ್ಕನಾಯಕನಹಳ್ಳಿ – 10 ಕಿ.ಮೀ
  • ಬಾಣಸಂದ್ರ ರೈಲ್ವೆ ನಿಲ್ದಾಣ – 27 ಕಿ.ಮೀ

ಮದಲಿಂಗನ ಕಣಿವೆಯಾ ಬಗ್ಗೆ ಒಂದು ಜನಪದೀಯ ಕಥೆ

ಮದಲಿಂಗನ ಕಣಿವೆಗೆ ಈ ಹೆಸರು ಬರಲು ಒಂದು ಜನಪದೀಯ ಕಥೆ ಪ್ರಸಿದ್ಧವಾಗಿದೆ. ಈ ಕಥೆ ಮದಲಿಂಗ ಎನ್ನುವ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದೆ.

ಮದಲಿಂಗನಿಗೆ ತನ್ನ ಅತ್ತೆಯ ಹಿರಿಯ ಮಗಳೊಂದಿಗೆ ಮದುವೆಯಾಗುತ್ತದೆ. ಮದುವೆಯ ನಂತರ, ಆತ ತನ್ನ ಹೆಂಡತಿ, ಅತ್ತೆ ಮತ್ತು ನಾದಿನಿಯೊಂದಿಗೆ ಚಿಕ್ಕನಾಯಕನಹಳ್ಳಿಗೆ ಬರುತ್ತಾನೆ. ಮಾರ್ಗ ಮಧ್ಯೆ ಒಂದು ಗುಡ್ಡ ಮತ್ತು ಅದರ ಪಕ್ಕದಲ್ಲಿ ಕಣಿವೆ ಸಿಗುತ್ತದೆ. ಅತ್ತೆ ಮತ್ತು ನಾದಿನಿಯರು ಮದಲಿಂಗನೊಂದಿಗೆ ಹಾಸ್ಯವಾಗಿ ಮಾತನಾಡುತ್ತಿರುವಾಗ, ನಾದಿನಿ “ಅಕ್ಕನನ್ನು ಬಿಟ್ಟು ಇರಲು ನನಗೆ ಕಷ್ಟ” ಎಂದು ಹೇಳುತ್ತಾಳೆ. ಆಗ ಅತ್ತೆ, “ನಿನಗೂ ಮದುವೆ ಆದ ಮೇಲೆ ನೀನು ಕೂಡ ಗಂಡನ ಮನೆಗೆ ಹೋಗಬೇಕಾಗುತ್ತದೆ” ಎಂದು ಹೇಳುತ್ತಾಳೆ. ಇದಕ್ಕೆ ತಂಗಿ “ನನಗೆ ಮದುವೆ ಬೇಡ” ಎಂದು ಉತ್ತರಿಸುತ್ತಾಳೆ.

ಆಗ ಮದಲಿಂಗ ವ್ಯಂಗ್ಯವಾಗಿ, “ಎಲ್ಲರೂ ಹೀಗೆ ಹೇಳುತ್ತಾರೆ; ಆದರೆ ಯಾರಾದರೂ ಕರೆದರೆ ಹೋಗುತ್ತಾರೆ” ಎಂದು ಹೇಳುತ್ತಾನೆ. ಇದಕ್ಕೆ ನಾದಿನಿ, “ಮದುವೆಯಾಗಿ ಮೂರು ದಿನವೂ ಆಗಿಲ್ಲ, ಈಗಲೇ ಎಲ್ಲ ತಿಳಿದವನಂತೆ ಮಾತನಾಡುತ್ತಾನೆ” ಎಂದು ಪ್ರತಿಕ್ರಿಯಿಸುತ್ತದೆ. ಆಗ ಮದಲಿಂಗ ನಾದಿನಿಯನ್ನು ರೇಗಿಸಲು, “ನಿನ್ನ ಅಕ್ಕನನ್ನು ಬಿಟ್ಟು ಇರಲು ಆಗದಿದ್ದರೆ ನಿನ್ನನ್ನೇ ಕರೆದುಕೊಂಡು ಹೋಗುತ್ತೇನೆ” ಎಂದು ಹೇಳುತ್ತಾನೆ. ಇದರಿಂದ ಅತ್ತೆ ಒಂದು ಪಂಥ (ಸವಾಲು) ಒಡ್ಡುತ್ತಾಳೆ.

ಅತ್ತೆ, “ಈ ಗುಡ್ಡವನ್ನು ಹಿಂದಕ್ಕೆ ಮುಖ ಮಾಡಿ ಹತ್ತಿ, ಹಾಗೆಯೇ ಇಳಿದು ಬಂದರೆ ನಾದಿನಿಯನ್ನು ನಿನಗೆ ಕೊಡುತ್ತೇನೆ” ಎಂದು ಹೇಳುತ್ತಾಳೆ. ಮದಲಿಂಗ ಉತ್ಸಾಹದಿಂದ ಪಂಥವನ್ನು ಒಪ್ಪಿಕೊಂಡು, “ನೀವು ಆ ಕಣಿವೆಯಿಂದ ನೀರನ್ನು ತಂದು, ಅವಳು ನನ್ನ ಕೈಗೆ ಕುಡಿಯಲು ಕೊಡಬೇಕು” ಎಂದು ಹೇಳುತ್ತಾನೆ.

ಮದಲಿಂಗ ಗುಡ್ಡವನ್ನು ಹಿಂದಕ್ಕೆ ಮುಖ ಮಾಡಿ ಹತ್ತಿ, ಅದೇ ರೀತಿಯಲ್ಲಿ ಇಳಿದು ಬರುತ್ತಾನೆ. ಆದರೆ ನಾದಿನಿ ನೀರು ಕೊಡುವಾಗ, ಅವಳ ಕೈಯಿಂದ ಪಾತ್ರೆ ಬಿದ್ದು ನೀರು ಚೆಲ್ಲಿಹೋಗುತ್ತದೆ. ಬಹಳ ದಾಹಗೊಂಡಿದ್ದ ಮದಲಿಂಗನಿಗೆ ಕುಡಿಯಲು ನೀರು ಸಿಗದೆ, ಸುಸ್ತಾಗಿ ಕೊನೆಗೆ ಅಲ್ಲಿಯೇ ಪ್ರಾಣ ತ್ಯಜಿಸುತ್ತಾನೆ. ಈ ಘಟನೆ ನಡೆದ ಸ್ಥಳವೇ “ಮದಲಿಂಗನ ಕಣಿವೆ” ಎಂದು ಪ್ರಸಿದ್ಧಿಯಾಯಿತು.

ಮದಲಿಂಗನಿಗೆ ನೀರು ತರಲು ಹೋದ ಹೆಂಡತಿ ಮಡುವಿಗೆ ಬಿದ್ದು ಸಾಯುತ್ತಾಳೆ; ಆ ಸ್ಥಳವನ್ನು “ಮದನಮಡು” ಎಂದು ಕರೆಯುತ್ತಾರೆ. ಮದಲಿಂಗನನ್ನು ಉಳಿಸಲು ಪ್ರಯತ್ನಿಸಿದ ನಾದಿನಿ (ಜಾಣೆ) ಕೂಡ ಮೃತಪಟ್ಟಳು; ಆ ಸ್ಥಳವನ್ನು “ಜಾಣೆಹಾರ್” ಎಂದು ಕರೆಯಲಾಗುತ್ತದೆ. ಅಳಿಯ ಮತ್ತು ಇಬ್ಬರು ಹೆಣ್ಣು ಮಕ್ಕಳ ಸಾವಿನಿಂದ ದುಃಖಗೊಂಡ ಅತ್ತೆ ಅಲ್ಲಿಂದ ಓಡುತ್ತಾ ಸ್ವಲ್ಪ ದೂರದಲ್ಲಿ ಮೃತಪಟ್ಟಳು; ಆ ಸ್ಥಳವನ್ನು “ಹತ್ಯಾಳು” ಎಂದು ಕರೆಯುತ್ತಾರೆ. ಅತ್ತೆಯನ್ನು ಸಮಾಧಿ ಮಾಡಿದ ಸ್ಥಳವನ್ನು ಇಂದಿಗೂ “ಅಜ್ಜಿಗುಡ್ಡೆ” ಎಂದು ಕರೆಯಲಾಗುತ್ತದೆ.

ಭೇಟಿ ನೀಡಿ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section