ಮೇಕೆದಾಟು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕನಕಪುರ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ, ದಟ್ಟವಾದ ಅರಣ್ಯದ ನಡುವೆ ಕಾವೇರಿ ನದಿ ಪಾತ್ರದಲ್ಲಿರುವ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.
ಮೇಕೆದಾಟಿನ ದೂರಗಳು
- ಬೆಂಗಳೂರು – 98 ಕಿ.ಮೀ
- ರಾಮನಗರ – 66 ಕಿ.ಮೀ
- ಕನಕಪುರ – 38 ಕಿ.ಮೀ
ಅರ್ಕಾವತಿ ನದಿಯು ಕನಕಪುರ ಮಾರ್ಗವಾಗಿ ಸುಮಾರು 32 ಕಿಲೋಮೀಟರ್ ಹರಿದು, ತಾಲ್ಲೂಕಿನ ದಕ್ಷಿಣ ಭಾಗದ ಅರಣ್ಯ ಪ್ರದೇಶವನ್ನು ದಾಟಿ, ಕಾವೇರಿ ನದಿಯನ್ನು ಸಂಗಮದಲ್ಲಿ ಸೇರುತ್ತದೆ. ಈ ಎರಡು ನದಿಗಳ ಸಂಗಮದ ನಂತರ, ಕಾವೇರಿಯ ಎಡ ದಂಡೆಯ ಮೇಲೆ ಸುಮಾರು 5 ಕಿಲೋಮೀಟರ್ ದೂರದಲ್ಲಿ ಮೇಕೆದಾಟು ಕಾಣಿಸುತ್ತದೆ.
ಈ ಸ್ಥಳವು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಮೇಕೆದಾಟು ಎಂದೇ ಪ್ರಸಿದ್ಧಿಯಾಗಿದ್ದರೂ, ಇದರ ಅದ್ಭುತ ದೃಶ್ಯಾವಳಿ ಸಂಗಮದಿಂದಲೇ ಆರಂಭವಾಗುತ್ತದೆ. ಅರ್ಕಾವತಿ ಮತ್ತು ಕಾವೇರಿ ನದಿಗಳು ದಟ್ಟವಾದ ಅರಣ್ಯದ ಮಧ್ಯೆ ಹರಿಯುತ್ತಾ, ನದಿಯ ಪಾತ್ರ ಕ್ರಮೇಣ ಕಿರಿದಾಗುತ್ತ ಸಾಗುತ್ತದೆ.
ಮುಂದೆ ಇಳಿಜಾರು ಹೆಚ್ಚಾಗುವುದರಿಂದ ನೀರಿನ ಹರಿವು ಭೀಕರ ಸ್ವರೂಪ ಪಡೆದು, ಇಡೀ ಪ್ರದೇಶ ಗಂಭೀರ ನಾದದಿಂದ ಮೊಳಗುತ್ತದೆ. ಶತಮಾನಗಳ ಕಾಲದ ಪ್ರವಾಹದ ಹೊಡೆತಕ್ಕೆ ಒಳಗಾಗಿ, ನದಿಯ ಇಕ್ಕೆಲಗಳ ಬಂಡೆಗಳು ವಿಚಿತ್ರವಾಗಿ ಕೊರೆದು, ನಿಸರ್ಗವೇ ನಿರ್ಮಿಸಿದ ಮಹೋನ್ನತ ಶಿಲ್ಪಕಲಾಕೃತಿಗಳಂತೆ ಕಂಗೊಳಿಸುತ್ತವೆ.
ಭೇಟಿ ನೀಡಿ









