ಮೇಕೆದಾಟು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕನಕಪುರ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ, ದಟ್ಟವಾದ ಅರಣ್ಯದ ನಡುವೆ ಕಾವೇರಿ ನದಿ ಪಾತ್ರದಲ್ಲಿರುವ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.
ಈ ಸ್ಥಳವು ಬೆಂಗಳೂರಿನಿಂದ 98 ಕಿ.ಮೀ, ರಾಮನಗರದಿಂದ 66 ಕಿ.ಮೀ ಮತ್ತು ಕನಕಪುರದಿಂದ ಕೇವಲ 38 ಕಿ.ಮೀ ದೂರದಲ್ಲಿದೆ.
ಅರ್ಕಾವತಿ ನದಿಯು ಕನಕಪುರದ ಮಾರ್ಗವಾಗಿ ಸುಮಾರು 32 ಕಿ.ಮೀ ಹರಿದು, ತಾಲ್ಲೂಕಿನ ದಕ್ಷಿಣ ಭಾಗದ ಅರಣ್ಯವನ್ನು ಹೊಕ್ಕು, ಕಾವೇರಿಯನ್ನು ಸಂಗಮವೆಂದು ಕರೆಯುವೆಡೆ ಸೇರುತ್ತದೆ. ಎರಡು ನದಿಗಳ ಸಂಗಮದ ನಂತರ, ಕಾವೇರಿಯ ಎಡ ದಂಡೆಯ ಮೇಲೆ ಸುಮಾರು 5 ಕಿ.ಮೀ ದೂರದಲ್ಲಿ ಮೇಕೆದಾಟು ಕಾಣಿಸುತ್ತದೆ. ಈ ಸ್ಥಳವು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೀಯ ಸ್ಥಳವಾಗಿದೆ. ಮೇಕೆದಾಟು ಎಂದೆ ಪ್ರಸಿದ್ಧವಾದರೂ, ಆಕರ್ಷಣೀಯ ದೃಶ್ಯಾವಳಿ ಸಂಗಮದಿಂದಲೇ ಆರಂಭವಾಗುತ್ತದೆ. ಅರ್ಕಾವತಿಯಿಂದ ಕಾವೇರಿ ದಟ್ಟವಾದ ಅರಣ್ಯದ ನಡುವೆ ಪ್ರವಹಿಸುತ್ತ, ಅದರ ಪಾತ್ರ ಕ್ರಮೇಣ ಕಿರಿದಾಗುತ್ತ ಬರುತ್ತದೆ. ಅಲ್ಲಿಂದ ಇಳಿಜಾರು ಹೆಚ್ಚುವುದರಿಂದ ನೀರಿನ ಪ್ರವಾಹ ಭೀಕರವಾಗುತ್ತ, ಈ ಪ್ರದೇಶವು ಗಂಭೀರ ಸ್ವರದಿಂದ ತುಂಬಿರುತ್ತದೆ. ಶತಮಾನಗಳ ಪ್ರವಾಹ ಹೊಡೆತದಿಂದ ರೂಪಿತವಾದ ಇಕ್ಕೆಲ ಬಂಡೆಗಳು ಚಿತ್ರವಿಚಿತ್ರವಾಗಿ ಕೊರೆದು ಹೋಗಿ, ನಿಸರ್ಗ ನಿರ್ಮಿಸಿರುವ ಮಹೋನ್ನತ ಶಿಲ್ಪಕಲಾ ಕೃತಿಗಳಂತೆ ಕಂಗೊಳಿಸುತ್ತವೆ.
ಭೇಟಿ ನೀಡಿ









