ಮಾರ್ಕಂಡೇಶ್ವರ ಬೆಟ್ಟ

ಮಾರ್ಕಂಡೇಶ್ವರ ಬೆಟ್ಟವು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯಲ್ಲಿರುವ ಪುರಾತನ ಪುಣ್ಯಕ್ಷೇತ್ರವಾಗಿದೆ.ಈ ಬೆಟ್ಟದ ಮೇಲ್ಭಾಗದಲ್ಲಿ ಮಾರ್ಕಂಡೇಶ್ವರ ದೇವಾಲಯವಿದೆ. ಭಕ್ತ ಮಾರ್ಕಂಡೇಯನನ್ನು ಶಿವನು ಯಮನ ಪಾಶದಿಂದ ಬಿಡುಗಡೆ ಮಾಡಿದ ಪವಿತ್ರ ಸ್ಥಳವೆಂದು ಇದು ಪ್ರಸಿದ್ಧವಾಗಿದೆ. ಈ ಬೆಟ್ಟವು ಸಮುದ್ರಮಟ್ಟದಿಂದ ಸುಮಾರು 1400 ಮೀಟರ್ ಎತ್ತರದಲ್ಲಿದೆ.

ಮಾರ್ಕಂಡೇಶ್ವರ ಬೆಟ್ಟದ ದೂರಗಳು

  • ಬೆಂಗಳೂರು – 69 ಕಿ.ಮೀ
  • ಕೋಲಾರ – 17 ಕಿ.ಮೀ
  • ಕೋಲಾರ ರೈಲ್ವೆ ನಿಲ್ದಾಣ – 18 ಕಿ.ಮೀ
  • ಬೆಂಗಳೂರು ವಿಮಾನ ನಿಲ್ದಾಣ – 70 ಕಿ.ಮೀ

ಈ ದೇವಾಲಯದ ನಿರ್ಮಾಣ ಕಾರ್ಯವು 12ನೇ ಶತಮಾನದ ಆರಂಭದಲ್ಲಿ ಪ್ರಾರಂಭವಾಗಿ, 16ನೇ ಶತಮಾನದವರೆಗೆ ಮುಂದುವರಿದಿತೆಂದು ಇತಿಹಾಸದಿಂದ ತಿಳಿದುಬರುತ್ತದೆ. ಈ ದೇವಾಲಯದ ಅಭಿವೃದ್ಧಿಗೆ ಚೋಳರು ಮತ್ತು ವಿಜಯನಗರ ಸಾಮ್ರಾಜ್ಯದ ರಾಜರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ 1970ರ ದಶಕದಲ್ಲಿ, ಶ್ರೀ ಪಟೇಲ್ ವೆಂಕಟರಾಮೇಗೌಡರು ಶ್ರಮಪಟ್ಟು ಭಕ್ತರು ಬೆಟ್ಟದ ಮೇಲೆ ಸುಲಭವಾಗಿ ಹತ್ತಲು ಮೆಟ್ಟಿಲುಗಳನ್ನು ನಿರ್ಮಿಸಿ ಸೌಲಭ್ಯವನ್ನು ಒದಗಿಸಿದ್ದಾರೆ.

ಮಾರ್ಕಂಡೇಶ್ವರ ಬೆಟ್ಟದ ದಂತಕಥೆ

ಮಾರ್ಕಂಡೇಯನು ಭೃಗು ಋಷಿ ಕುಲದಲ್ಲಿ ಜನಿಸಿದ ಪ್ರಾಚೀನ ಋಷಿಯಾಗಿದ್ದಾನೆ. ಮೃಕಂಡು ಋಷಿ ಮತ್ತು ಅವರ ಪತ್ನಿ ಮರುದ್ಮತಿಗೆ ಹಲವು ವರ್ಷಗಳವರೆಗೆ ಸಂತಾನವಾಗಿರಲಿಲ್ಲ. ಮಕ್ಕಳ ಭಾಗ್ಯಕ್ಕಾಗಿ ಅವರು ಘೋರ ತಪಸ್ಸನ್ನು ಆಚರಿಸಿದರು. ಇವರ ತಪಸ್ಸಿಗೆ ಮೆಚ್ಚಿದ ಈಶ್ವರನು ಪ್ರತ್ಯಕ್ಷನಾಗಿ, “ಜ್ಞಾನಿಯೂ ದೈವಭಕ್ತನೂ ಆದ ಅಲ್ಪಾಯುಷಿಯ ಮಗ ಬೇಕೋ, ಅಥವಾ ದೀರ್ಘಾಯುಷಿಯೂ ಲೋಕಕಂಟಕನಾದ ಮಗ ಬೇಕೋ?” ಎಂದು ಕೇಳಿದನು. ಆಗ ಮೃಕಂಡು ಮಹರ್ಷಿಗಳು, “ಅಲ್ಪಾಯುಷಿಯಾದರೂ ಪರವಾಗಿಲ್ಲ, ಜ್ಞಾನಿಯಾದ ಮಗನೇ ಬೇಕು” ಎಂದು ಆಯ್ಕೆ ಮಾಡಿದರು. ಹೀಗೆ ಅಲ್ಪಾಯುಷಿಯಾಗಿ ಜನಿಸಿದವನೇ ಮಾರ್ಕಂಡೇಯನು.

ತಾನು ಅಲ್ಪಾಯುಷಿ ಎಂಬುದನ್ನು ತಿಳಿದ ಮಾರ್ಕಂಡೇಯನು, ತನ್ನ ತಂದೆ-ತಾಯಿಗಳ ಸಂತೋಷಕ್ಕಾಗಿ ಶಿವನನ್ನು ಕುರಿತು ತಪಸ್ಸು ಮಾಡುತ್ತಿದ್ದನು. ಅವನ ಆಯಸ್ಸು ಮುಗಿಯುವ ದಿನ, ಈಗಿನ ವಕ್ಕಲೇರಿ ಬೆಟ್ಟದ ಶಿಖರದಲ್ಲಿ ಶಿವಪೂಜೆಯಲ್ಲಿ ತಲ್ಲೀನನಾಗಿದ್ದಾಗ, ಅವನ ಪ್ರಾಣ ತೆಗೆದುಕೊಳ್ಳಲು ಯಮಧರ್ಮನು ಬಂದನು.

ಯಮನು ಅವನ ಕೊರಳಿಗೆ ಪಾಶವನ್ನು ಹಾಕಿದಾಗ, ಮಾರ್ಕಂಡೇಯನು ಶಿವಲಿಂಗವನ್ನು ಬಿಗಿಯಾಗಿ ಅಪ್ಪಿಕೊಂಡನು. ಯಮನು ಬಲವಂತವಾಗಿ ಎಳೆಯುವಾಗ, ಲಿಂಗದಿಂದ ಕೋಪಗೊಂಡ ಶಿವನು ಹೊರಹೊಮ್ಮಿ, ತನ್ನ ತ್ರಿಶೂಲದಿಂದ ಯಮನನ್ನು ಸಂಹರಿಸಲು ಮುಂದಾದನು. ನಂತರ ಶಿವನು ಶಾಂತನಾಗಿ, ಮಾರ್ಕಂಡೇಯನಿಗೆ ಚಿರಂಜೀವಿಯಾಗುವ ವರವನ್ನು ನೀಡಿದನು.

ಮಾರ್ಕಂಡೇಯನು ಯಮನ ಪಾಶದಿಂದ ವಿಮುಕ್ತಿ ಹೊಂದಿದ ಕಾರಣದಿಂದ ಈ ಸ್ಥಳಕ್ಕೆ “ವರಪುರಿ” ಎಂಬ ಹೆಸರು ಬಂದಿದೆ ಎಂದು ಸ್ಕಾಂದ ಪುರಾಣದಲ್ಲಿ ಉಲ್ಲೇಖವಿದೆ. ಕ್ರಮಕಪುರಿ ಎಂದೂ ಕರೆಯಲ್ಪಟ್ಟಿದ್ದ ಈ ಊರು ನಂತರ ವಕ್ಕಲೇರಿ ಎಂದು ಪ್ರಸಿದ್ಧಿಯಾಯಿತು ಎಂದು ಸ್ಥಳೀಯರು ಹೇಳುತ್ತಾರೆ.

ಭೇಟಿ ನೀಡಿ
ಕೋಲಾರ ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಕೋಲಾರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section