ಭಾಲ್ಕಿ ಕೋಟೆಯು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಇರುವ ಪುರಾತನ ಕೋಟೆಯಾಗಿದೆ. ಈ ಕೋಟೆಯನ್ನು ಕ್ರಿ.ಶ. 1820 ರಿಂದ 1850ರ ಅವಧಿಯಲ್ಲಿ ಕಟ್ಟಿಸಿದರು ಎಂದು ನಂಬಲಾಗಿದೆ. ಈ ಕೋಟೆಯು 5 ಎಕರೆ ಪ್ರದೇಶವನ್ನು ಆವರಿಸಿಕೊಂಡಿದ್ದು, ಸುಮಾರು 20 ಅಡಿಎತ್ತರದ ಗೋಡೆಗಳು ಹಾಗೂ ಒಂದು ಕೊತ್ತಲನ್ನು ಹೊಂದಿರುವ ಚತುರ್ಭುಜಾಕೃತಿಯ ವಿನ್ಯಾಸದಲ್ಲಿದೆ.
ಈ ಕೋಟೆಯು ಬೆಂಗಳೂರಿನಿಂದ 745 ಕಿ.ಮೀ (NH50 ಮೂಲಕ), 730 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 41 ಕಿ.ಮೀ ದೂರದಲ್ಲಿದೆ. ಹಾಗೂ ಭಾಲ್ಕಿ ಪಟ್ಟಣದಿಂದ 2 ಕಿ.ಮೀ ಮತ್ತು ಭಾಲ್ಕಿ ರೈಲ್ವೆ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿ ಇದೆ.
ಭಾಲ್ಕಿ ಕೋಟೆಯನ್ನು ರಾಮಚಂದ್ರ ಜಾಧವ್ ಮತ್ತು ಧನಾಜಿ ಜಾಧವ್ ಅವರು ರಾಜ ಜಂಗ್ ಬಹದೂರ್ ಅವರ ಕಾಲದಲ್ಲಿ ಕ್ರಿ.ಶ. 1820 ರಿಂದ 1850ರ ಅವಧಿಯಲ್ಲಿ ಕಟ್ಟಿಸಿದರು ಎಂದು ನಂಬಲಾಗಿದೆ. ಈ ಕೋಟೆ ದಟ್ಟವಾದ ಸಸ್ಯಸಂಪತ್ತಿನ ನಡುವೆ ಐದು ಎಕರೆ ಪ್ರದೇಶವನ್ನು ವ್ಯಾಪಿಸಿದೆ. ಕೋಟೆಯ ವಿನ್ಯಾಸ ಚತುರ್ಭುಜಾಕಾರದ ರೂಪದಲ್ಲಿದ್ದು, 20 ಅಡಿ ಎತ್ತರದ ಗೋಡೆಗಳು ಹಾಗೂ ಒಂದು ಬುರುಜುನ್ನು (ಕೋಟೆಯ ಪ್ರಾಕಾರದ ಮೇಲೂ ಗೋಪುರಗಳ ತುದಿಯಲ್ಲೂ ಕಟ್ಟುವ ವರ್ತುಲಾಕಾರದ ಕಟ್ಟಡ) ಹೊಂದಿದೆ. ಸ್ಥಳೀಯವಾಗಿ ದೊರೆಯುವ ಕಪ್ಪು ಕಲ್ಲು ಮತ್ತು ಚೂನಾಮಣ್ಣವನ್ನು ಬಳಸಿ ಕೋಟೆಯನ್ನು ನಿರ್ಮಿಸಲಾಗಿದೆ. ಈ ಕೋಟೆಯು ಮರಾಠ ಸೇನೆಯ ಶಸ್ತ್ರಾಸ್ತ್ರಗಳ ಸಂಗ್ರಹಾಲಯವಾಗಿತ್ತು. ಬ್ರಿಟಿಷರ ಆಡಳಿತದ ಸಮಯದಲ್ಲಿ ಕೋಟೆ ಹೈದರಾಬಾದ್‌ನ ನಿಜಾಮರ ಸ್ವಾಧೀನಕ್ಕೆ ಬಂತು.
ಭಾಲ್ಕಿ ಕೋಟೆಯೊಳಗೆ ಎರಡು ಪ್ರಮುಖ ದೇವಾಲಯಗಳಿವೆ. ಕಂಭೇಶ್ವರ ದೇವಾಲಯ ಕೋಟೆಯೊಳಗೆ ಇದ್ದರೆ, ಭಾಲ್ಕೇಶ್ವರ ದೇವಾಲಯ ಸ್ವಲ್ಪ ದೂರದಲ್ಲಿದೆ. ಕೋಟೆಯ ಒಂದು ಬದಿಯಲ್ಲಿ ಹಂತಾಕಾರದ ಬಾವಿಯಿದ್ದು, ಮತ್ತೊಂದು ತುದಿಯಲ್ಲಿ ಇಳಿಕಟ್ಟಾದ ದಾರಿಯ ಮೂಲಕ ಉತ್ತರದ ಅಂಗಣಕ್ಕೆ ಹೋಗಬಹುದು. ಅಲ್ಲಿ ಹಳೆಯ ಕೋಟೆಯ ಒಂದು ಭಾಗವನ್ನು ಪ್ರಾಥಮಿಕ ಶಾಲೆಯಾಗಿ ಬಳಸಲಾಗುತ್ತಿದೆ. ಕೋಟೆಯ ಉತ್ತರ ತುದಿಯಲ್ಲಿ ಗಣೇಶನಿಗೆ ಸಮರ್ಪಿತವಾದ ಒಂದು ದೇವಾಲಯವೂ ಇದೆ.
ಭೇಟಿ ನೀಡಿ






